ಪತ್ನಿಯ ಜತೆ ಬಲವಂತದ ಲೈಂಗಿಕ ಸಂಪರ್ಕ ನಡೆಸುವುದನ್ನು ಅತ್ಯಾಚಾರ ಎಂದು ಪರಿಗಣಿಸಲು ಮಾನದಂಡವಾಗಿದ್ದ ವಯಸ್ಸನ್ನು ಕೇಂದ್ರ ಸರಕಾರವು 15ರಿಂದ 18ಕ್ಕೆ ಏರಿಕೆ ಮಾಡಿದೆ.
ಆದರೆ ರಾಷ್ಟ್ರೀಯ ಮಹಿಳಾ ಆಯೋಗವು ಪ್ರಸ್ತಾಪಿಸಿದ್ದ ತಿದ್ದುಪಡಿ ಇದಲ್ಲ. ಅದರ ಪ್ರಕಾರ ವೈವಾಹಿಕ ಅತ್ಯಾಚಾರವನ್ನು ಐಪಿಸಿ ಸೆಕ್ಷನ್ ಅಡಿಯಲ್ಲಿ ಅಪರಾಧ ಎಂದು ಪರಿಗಣಿಸಬೇಕು ಮತ್ತು ಇದಕ್ಕೆ ವಯಸ್ಸಿನ ಮಿತಿಯನ್ನು ಪರಿಗಣಿಸಬಾರದು ಎಂದು ಶಿಫಾರಸು ಮಾಡಿತ್ತು.
ಐಪಿಸಿಯಲ್ಲಿನ ಅತ್ಯಾಚಾರ ಕಾನೂನುಗಳಿಗೆ ವೈವಾಹಿಕ ಅತ್ಯಾಚಾರವನ್ನು ಸೇರಿಸಿ ತಿದ್ದುಪಡಿ ತರುವಂತೆ ಇದೇ ವರ್ಷದ ಆಗಸ್ಟ್ 18ರಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಗಿರಿಜಾ ವ್ಯಾಸ್ ತಿಳಿಸಿದ್ದಾರೆ.
ಪ್ರಸಕ್ತ ಇರುವ ಕಾನೂನಿನ ಪ್ರಕಾರ ವ್ಯಕ್ತಿಯೊಬ್ಬ ತನ್ನ ಪತ್ನಿಯ ಜತೆ ಲೈಂಗಿಕ ಸಂಪರ್ಕ ನಡೆಸಬೇಕಿದ್ದರೆ, ಪತ್ನಿಯ ವಯಸ್ಸು 15ಕ್ಕಿಂತ ಕಡಿಮೆಯಿರಬಾರದು. ಹಾಗೆ ಇದಿದ್ದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತಿರಲಿಲ್ಲ.
ಈ ಕಾನೂನಿಗೆ ಈಗ ತಿದ್ದುಪಡಿ ತರಲಾಗಿದೆ. ಇನ್ನು ಪತ್ನಿಯ ಜತೆ ಲೈಂಗಿಕ ಸಂಪರ್ಕ ಬೆಳೆಸಬೇಕಿದ್ದರೆ, ಆಕೆಯ ವಯಸ್ಸು 18ಕ್ಕಿಂತ ಹೆಚ್ಚಿರಬೇಕು. ಅದಕ್ಕಿಂತ ಕಡಿಮೆಯಾಗಿದ್ದರೆ, ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ.
ಈ ಸಂಬಂಧ ರಚಿಸಲಾಗಿದ್ದ ಗೃಹ ಕಾರ್ಯದರ್ಶಿ ನೇತೃತ್ವದ ಉನ್ನತ ಮಟ್ಟದ ಸಮಿತಿಯೊಂದು ಐಪಿಸಿ ಸೆಕ್ಷನ್‌ನಲ್ಲಿನ ವಯಸ್ಸನ್ನು 18ಕ್ಕೆ ಏರಿಕೆ ಮಾಡುವ ತೀರ್ಮಾನಕ್ಕೆ ಬಂದಿದೆ. ಆದರೆ ನಮ್ಮ ಪ್ರಕಾರ ಇಲ್ಲಿ ವಯಸ್ಸಿನ ಮಿತಿಯನ್ನೇ ತೆಗೆದು ಹಾಕಬೇಕಿತ್ತು. ಪತ್ನಿಯೊಂದಿಗಿನ ಬಲವಂತದ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದೇ ಪರಿಗಣಿಸಬೇಕಿತ್ತು ಎಂದು ವ್ಯಾಸ್ ಅಭಿಪ್ರಾಯಪಟ್ಟರು.
ಆದರೂ ಈಗ ಸ್ವಾಗತಾರ್ಹ ಬೆಳವಣಿಗೆಯೆಂಬಂತೆ ವಯಸ್ಸಿನ ಮಿತಿಯನ್ನು 15ರಿಂದ 18ಕ್ಕೆ ಏರಿಕೆ ಮಾಡಲಾಗಿರುವುದಕ್ಕೆ ವ್ಯಾಸ್ ಸಂತಸ ವ್ಯಕ್ತಪಡಿಸಿದರು.