ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಒಮರ್ ಹೇಳಿಕೆ; ಕಾಶ್ಮೀರ ವಿಧಾನಸಭೆಯಲ್ಲಿ ಕೋಲಾಹಲ (Jammu and Kashmir | BJP | Omar Abdullah | India)
Bookmark and Share Feedback Print
 
ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ವಿವಾದಿತ ಹೇಳಿಕೆಯನ್ನು ಪ್ರತಿಭಟಿಸಿರುವ ಪ್ರತಿಪಕ್ಷ ಬಿಜೆಪಿ ಮತ್ತು ನ್ಯಾಷನಲ್ ಪ್ಯಾಂಥರ್ಸ್ ಪಕ್ಷದ ಶಾಸಕರು ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ.

ಸದನದ ಬಾವಿಗೆ ಇಳಿದು ಸ್ಪೀಕರ್ ಅವರತ್ತ ಶಾಸಕರು ನುಗ್ಗಲು ಯತ್ನಿಸಿದರು. ಇವರನ್ನು ಮಾರ್ಷಲ್‌ಗಳು ಬಲವಂತವಾಗಿ ಸದನದಿಂದ ಹೊರಗೆ ಹಾಕಿದರು ಎಂದು ವರದಿಗಳು ಹೇಳಿವೆ.

ಈ ರೀತಿ ಗದ್ದಲ ಸೃಷ್ಟಿಗೆ ಕಾರಣರಾಗಿರುವುದು ನ್ಯಾಷನಲ್ ಪ್ಯಾಂಥರ್ಸ್‌ನ ಓರ್ವ ಹಾಗೂ ಬಿಜೆಪಿಯ ಮೂವರು ಸದಸ್ಯರು. ಘಟನೆಯಲ್ಲಿ ಜುಗಲ್ ಕಿಶೋರ್, ಸುಖ್ನಾಂದನ್ ಮತ್ತು ಲಾಲ್ ಚಂದ್ ಗಾಯಗೊಂಡಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಚಮನ್ ಲಾಲ್ ಗುಪ್ತಾ ತಿಳಿಸಿದ್ದಾರೆ.

ಒಮರ್ ಭಾಷಣ ರಾಷ್ಟ್ರ ವಿರೋಧಿಯಾಗಿದೆ ಎಂದು ಆರೋಪಿಸಿದ ಬಿಜೆಪಿ ಮತ್ತು ಪ್ಯಾಂಥರ್ಸ್ ಶಾಸಕರು ಸದನದಲ್ಲಿ ದನಿಯೆತ್ತಿದರು. ಇದಕ್ಕೆ ಇತರ ಶಾಸಕರು ಆಕ್ಷೇಪಿಸಿದಾಗ ಬಿಜೆಪಿ ಶಾಸಕರು ಸ್ಪೀಕರ್ ಅವರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ನಂತರ ಮಾರ್ಷಲ್‌ಗಳು ಪರಿಸ್ಥಿತಿಯನ್ನು ನಿಭಾಯಿಸಿದರು.

ಈ ಹಿನ್ನೆಲೆಯಲ್ಲಿ ಅಕ್ಟೋಬರ್ 9ಕ್ಕೆ ಕೊನೆಗೊಳ್ಳಲಿರುವ ಅಧಿವೇಶನದ ಉಳಿದ ದಿನಗಳ ಕಲಾಪಗಳನ್ನು ಬಹಿಷ್ಕರಿಸಲು ಬಿಜೆಪಿ ಶಾಸಕಾಂಗ ಪಕ್ಷವು ನಿರ್ಧರಿಸಿದೆ.

ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವುದರ ಕುರಿತು ರಾಜ್ಯ ವಿಧಾನಸಭೆಯಲ್ಲಿ ನಡೆದ ಎರಡು ದಿನಗಳ ಚರ್ಚೆಯನ್ನು ಮುಕ್ತಾಯಗೊಳಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ನೀಡಿದ್ದ ಹೇಳಿಕೆ ಬಿಜೆಪಿ ಸದಸ್ಯರ ಆಕ್ರೋಶಕ್ಕೆ ಕಾರಣವಾಗಿತ್ತು.

ನವದೆಹಲಿಯೇ ನೇರವಾಗಿ ಜಮ್ಮು-ಕಾಶ್ಮೀರ ನಡೆಸುತ್ತಿದೆ ಎಂಬ ಭಾವವನ್ನು ತೊಡೆದು ಹಾಕಲು ಯತ್ನಿಸಿದ್ದ ಸಿಎಂ ಒಮರ್, ನಾವು ಕೇಂದ್ರ ಸರಕಾರದ ಕೈ ಗೊಂಬೆಗಳಲ್ಲ ಎಂದು ನಿನ್ನೆ ವಿಧಾನಸಭೆಯಲ್ಲಿ ಹೇಳಿದ್ದರು.

ಗೃಹಸಚಿವ ಪಿ. ಚಿದಂಬರಂ ಅವರು ಪ್ರಕಟಿಸಿದ್ದ ಎಂಟು ಅಂಶಗಳ ಪರಿಹಾರ ಸೂತ್ರದಂತೆ ಶಾಲೆಗಳನ್ನು ಮತ್ತೆ ತೆರೆಯಲು ನಿರ್ಧರಿಸಿದ್ದನ್ನು ಕೂಡ ಒಮರ್ ಈ ಸಂದರ್ಭದಲ್ಲಿ ಪ್ರಶ್ನಿಸಿದ್ದರು.

ನಾವು ಯಾರ ಕೈಗೊಂಬೆಗಳೂ ಅಲ್ಲ. ನಮ್ಮ ಜನ ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ನಾವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಕಾಶ್ಮೀರ ವಿಷಯ ಎಂಬುದು ಎರಡು ನೆರೆಯೊರೆಯವರ ನಡುವಿನ ವಿವಾದ. ಇದು ಅಭಿವೃದ್ಧಿ, ಉದ್ಯೋಗ ಅಥವಾ ಪಡಿತರ ಕುರಿತ ಸಮಸ್ಯೆಯಲ್ಲ. ಇವೆಲ್ಲವನ್ನೂ ಜಮ್ಮು-ಕಾಶ್ಮೀರದ ಜನತೆಗೆ ಒದಗಿಸಿದರೂ, ಇಲ್ಲಿನ ಸಮಸ್ಯೆಗಳು ಪರಿಹಾರ ಕಾಣಲಾರವು ಎಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ