ಜಮ್ಮು-ಕಾಶ್ಮೀರ, ಶುಕ್ರವಾರ, 8 ಅಕ್ಟೋಬರ್ 2010( 10:24 IST )
'ನಾವು ಕೇಂದ್ರ ಸರಕಾರದ ಕೈಗೊಂಬೆಯಲ್ಲ ಹಾಗೂ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಹೇಳುವವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸುವ ರೀತಿಯಲ್ಲಿ ಮಾತನಾಡಿದ್ದ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಒಮರ್ ಅವರನ್ನು ಕೂಡಲೇ ಮುಖ್ಯಮಂತ್ರಿಗಾದಿಯಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿದೆ.
'ನಾವು ಯಾರ ಕೈಗೊಂಬೆಗಳಲ್ಲ. ನಮ್ಮ ಜನ ಮತ್ತು ಅವರ ಶ್ರೇಯೋಭಿವೃದ್ಧಿಗಾಗಿ ನಾವು ನಿರ್ಧಾರಗಳನ್ನು ಕೈಗೊಳ್ಳುತ್ತೇವೆ. ಕಾಶ್ಮೀರ ಎಂಬುದು ಎರಡು ನೆರೆಹೊರೆಯವರ ನಡುವಿನ ವಿವಾದ. ಇದು ಅಭಿವೃದ್ಧಿ ಅಥವಾ ಪಡಿತರ ಕುರಿತ ಸಮಸ್ಯೆಯಲ್ಲ. ಇವೆಲ್ಲವನ್ನೂ ಜಮ್ಮು-ಕಾಶ್ಮೀರದ ಜನರಿಗೆ ಒದಗಿಸಿದರೂ ಕೂಡ ಸಮಸ್ಯೆ ಪರಿಹಾರ ಆಗದು' ಎಂದು ಒಮರ್ ಹೇಳಿರುವುದು ಆಕ್ಷೇಪಾರ್ಹವಾಗಿದೆ. ಆ ನಿಟ್ಟಿನಲ್ಲಿ ಒಮರ್ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಒಂದು ಕ್ಷಣವೂ ಮುಂದುವರಿಯಲು ಅರ್ಹರಲ್ಲ ಎಂದು ಬಿಜೆಪಿ ಕಿಡಿಕಾರಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ಮುಖಂಡ ಶಾಹನವಾಜ್ ಹುಸೈನ್, ಪ್ರತ್ಯೇಕವಾದಿಗಳಿಗೂ ಮತ್ತು ಒಮರ್‌ಗೂ ಯಾವುದೇ ವ್ಯತ್ಯಾಸ ಇಲ್ಲದಿರುವುದರಿಂದ ಮುಖ್ಯಮಂತ್ರಿಗಾದಿಯಲ್ಲಿ ಮುಂದುವರಿಯಲು ಒಮರ್ ಅನರ್ಹ ಎಂದರು. ನ್ಯಾಷನಲ್ ಕಾಂಗ್ರೆಸ್ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ. ಅಲ್ಲದೆ ಎರಡು ಭಾಷೆಯಲ್ಲಿ ಮಾತನಾಡುತ್ತಿದೆ. ಒಂದು ಜಮ್ಮು ಮತ್ತು ದೆಹಲಿಯ ತರ ಎಂದು ಹುಸೈನ್ ಟೀಕಿಸಿದರು.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಒಮರ್ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಎಂಬುದನ್ನು ಮರೆಯಬಾರದು. ಮುಖ್ಯಮಂತ್ರಿಗೆ ಅವರದ್ದೇ ಆದ ದೃಷ್ಟಿಕೋನ ಇರಬೇಕು. ಅದು ತುಂಬಾ ಮುಖ್ಯವಾದದ್ದು. ಏಕಾಏಕಿ ತಾನು ಕೇಂದ್ರದ ಕೈಗೊಂಬೆಯಲ್ಲ ಎಂಬ ಹೇಳಿಕೆ ನೀಡುವುದು ಉದ್ದಟತನದ್ದಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದ್ವಿಗ್ವಿಜಯ್ ಸಿಂಗ್ ನೀಡಿರುವ ಪ್ರತಿಕ್ರಿಯೆ ಈ ಸಂದರ್ಭದಲ್ಲಿ ಮಹತ್ವದ್ದಾಗಿದೆ ಎಂದು ಹುಸೈನ್ ಹೇಳಿದರು.