ಅಯೋಧ್ಯೆಯ ಒಡೆತನದ ಕುರಿತು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಅಥವಾ ಈ ಕುರಿತು ನಡೆಯಬೇಕೆಂಬ ರಾಜೀ ಸಂಧಾನಗಳ ಕುರಿತ ಪ್ರಸ್ತಾಪಗಳನ್ನು ತಿರಸ್ಕರಿಸಿರುವ ದೆಹಲಿ ಮತ್ತು ಉತ್ತರ ಪ್ರದೇಶಗಳ ಮುಸ್ಲಿಂ ಧಾರ್ಮಿಕ ಮುಖಂಡರು ಮತ್ತು ವಿದ್ವಾಂಸರು, ಈ ವಿಚಾರದಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.
ಅಯೋಧ್ಯೆ ವಿವಾದದ ಸಂಬಂಧ ದೆಹಲಿ ಜಾಮಾ ಮಸೀದಿಯ ಶಾಹಿ ಇಮಾಮ್ ಮೌಲಾನಾ ಸಯೀದ್ ಅಹ್ಮದ್ ಬುಖಾರಿಯವರ ನೇತೃತ್ವದಲ್ಲಿ ನಡೆದ ಮುಸ್ಲಿಂ ಧರ್ಮಗುರುಗಳ ಸಭೆಯಲ್ಲಿ ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ.
ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ನಾವು ತಿರಸ್ಕರಿಸುತ್ತಿದ್ದೇವೆ. ಇದರಲ್ಲಿ ಕೇಂದ್ರ ಸರಕಾರವು ಮಧ್ಯಪ್ರವೇಶಿಸಬೇಕು ಮತ್ತು ತೀರ್ಪಿನ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷವು ಕೂಡ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು 40ಕ್ಕೂ ಹೆಚ್ಚು ವಿದ್ವಾಂಸರು ಭಾಗವಹಿಸಿದ್ದ ಸಭೆಯ ನಂತರ ಬುಖಾರಿ ಹೇಳಿದರು.
ಈ ವಿಚಾರದ ಕುರಿತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ತಾವು ಪತ್ರ ಬರೆದಿದ್ದು, ಭೇಟಿಗೆ ಅವಕಾಶ ನೀಡಬೇಕೆಂದು ಕೋರಿದ್ದೇವೆ ಎಂದೂ ಅವರು ತಿಳಿಸಿದರು.
ಬಾಬ್ರಿ ಮಸೀದಿ ಧ್ವಂಸದಿಂದ ಈಗ ಬಂದಿರುವ ತೀರ್ಪಿನವರೆಗಿನ ಎಲ್ಲಾ ಮಸೀದಿ ವಿರೋಧಿ ಕ್ರಮಗಳಿಗೆ ನೇರವಾಗಿ ಕಾಂಗ್ರೆಸ್ ಹೊಣೆ ಎಂದು ನಾವು ಪರಿಗಣಿಸಿದ್ದೇವೆ ಎಂದರು.
ಕಾಂಗ್ರೆಸ್ ವಿರುದ್ಧದ ವಾಗ್ದಾಳಿ ಮುಂದುವರಿಸಿದ ಬುಖಾರಿ, ಆ ಪಕ್ಷವು ಒಂದು ಕಡೆಯಿಂದ ಮುಸ್ಲಿಮರಿಗೆ ಮೋಸ ಮಾಡುತ್ತಿದ್ದರೆ, ಮತ್ತೊಂದು ಕಡೆಯಿಂದ ಕೋಮುವಾದಿ ಶಕ್ತಿಗಳಿಗೆ ಸಹಕಾರ ನೀಡುತ್ತಿದೆ ಎಂದರು.
ತಮ್ಮ ಸಭೆಯಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ (ಎಐಎಂಪಿಎಲ್‌ಬಿ) ಪ್ರತಿನಿಧಿಗಳು ಭಾಗವಹಿಸಿದ್ದರೇ ಎಂಬ ಪ್ರಶ್ನೆಗೆ ಅವರು ಋಣಾತ್ಮಕ ಪ್ರತಿಕ್ರಿಯೆ ನೀಡಿದರು.
ಕೆಲವು ಎಐಎಂಪಿಎಲ್‌ಬಿ ಸದಸ್ಯರು ಹಿಂಬಾಗಿಲಿನ ಮೂಲಕ ಸೌಹಾರ್ದಯುತ ಪರಿಹಾರದ ಕುರಿತು ಕೆಲವು ಕಸರತ್ತು ನಡೆಸುತ್ತಿದ್ದಾರೆ. ಇಂತಹ ಮಾತುಕತೆಯಲ್ಲಿ ಪಾಲ್ಗೊಳ್ಳಲು ನಮಗೆ ಇಚ್ಛೆ ಇಲ್ಲದೇ ಇರುವುದರಿಂದ, ಅವರನ್ನು ನಾವು ಸಭೆಗೆ ನಾವು ಆಹ್ವಾನಿಸಿರಲಿಲ್ಲ ಎಂದರು.
ವಿವಾದಿತ ಸ್ಥಳದಲ್ಲಿ ಮುಸ್ಲಿಮರಿಗೆ ಮಸೀದಿಯನ್ನು ಹೊರತುಪಡಿಸಿದ ಯಾವುದೇ ಪರಿಹಾರವೂ ಸಾಧ್ಯವಿಲ್ಲ ಎನ್ನುವ ಸ್ಥಿತಿಯಲ್ಲಿ ರಾಜೀ ಸಂಧಾನದಲ್ಲಿ ಯಾವ ಸೂತ್ರಗಳನ್ನು ಮುಂದಿಟ್ಟುಕೊಂಡು ಮಾತುಕತೆ ನಡೆಸಲಾಗುತ್ತದೆ ಎಂದು ಬುಖಾರಿ ಪ್ರಶ್ನಿಸಿದರು.
ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಭೇಟಿಯಾಗಿರುವುದರಿಂದ ತಾವು ರಾಜಕೀಯ ಪಕ್ಷಗಳ ಬೆಂಬಲವನ್ನು ಈ ವಿಚಾರದಲ್ಲಿ ಪಡೆದುಕೊಳ್ಳುವಿರಾ ಎಂದಾಗ, ಮುಸ್ಲಿಂ ಸಮುದಾಯವನ್ನು ಬೆಂಬಲಿಸುವವರಿಗೆ ಸ್ವಾಗತವಿದೆ ಎಂದರು.