ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಸರ್ದಾರ್ ಪುತ್ಥಳಿ' ಸ್ಥಾಪನೆ; ಮೋದಿ ಹೇಳಿಕೆಗೆ ಕಾಂಗ್ರೆಸ್ ಕ್ಯಾತೆ (Sardar statue | Gujarat | Narendra Modi | Congress)
Bookmark and Share Feedback Print
 
ವಿಶ್ವದ ಅತಿ ಎತ್ತರದ ಪುತ್ಥಳಿಯನ್ನು ರಾಜ್ಯದಲ್ಲಿ ಸ್ಥಾಪಿಸುವುದಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿರುವುದಕ್ಕೆ ಕಾಂಗ್ರೆಸ್ ಕ್ಯಾತೆ ತೆಗೆದಿದ್ದು, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಅಹಮದಾಬಾದ್ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾದ ನಂತರ ಮೋದಿಯವರು ಸರ್ದಾರ್ ವಲ್ಲಭಾಬಾಯ್ ಪಟೇಲ್ ಅವರ ಪ್ರತಿಮೆ ಸ್ಥಾಪಿಸುವುದಾಗಿ ಹೇಳಿಕೆ ನೀಡಿದ್ದರು. ಇದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದಿರುವ ಪ್ರತಿಪಕ್ಷ ಕಾಂಗ್ರೆಸ್ ದೂರು ನೀಡಿದೆ.

ರಾಜ್ಯದಲ್ಲಿನ ಆರು ಮಹಾನಗರ ಪಾಲಿಕೆಗಳ ಚುನಾವಣೆ ನಡೆಯುವ ಕೆಲವೇ ದಿನಗಳ ಮೊದಲು ಮೋದಿ ಈ ಪ್ರಕಟಣೆಯನ್ನು ಹೊರಡಿಸಿರುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎಂದು ರಾಜ್ಯ ಚುನಾವಣಾ ಆಯುಕ್ತ ಕೆ.ಸಿ. ಕಪೂರ್ ಅವರಿಗೆ ಕಾಂಗ್ರೆಸ್ ಪತ್ರ ಬರೆದಿದೆ.

ಸರ್ದಾರ್ ಪಟೇಲ್ ಅವರ ಹೆಸರನ್ನು ಬಳಸಿಕೊಂಡು ಬಿಜೆಪಿಯು ಮತ ಕೊಳ್ಳೆ ಹೊಡೆಯಲು ಸಂಚು ರೂಪಿಸಿದೆ. ಇಂತಹ ಯೋಜನೆಯನ್ನು ಚುನಾವಣೆಯ ನಂತರ ಪ್ರಕಟಿಸಬಹುದಿತ್ತು. ಮೋದಿ ಮಾಡಿರುವುದು ತಪ್ಪು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ ನಂತರ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಸಿದ್ಧಾರ್ಥ ಪಟೇಲ್ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿರುವ ಮೋದಿ, ಇದು ಸರ್ದಾರ್ ವಲ್ಲಭಾಬಾಯ್ ಪಟೇಲ್ ಅವರಿಗೆ ಮಾಡುತ್ತಿರುವ ಅವಮಾನ ಎಂದಿದ್ದಾರೆ.

ಬಿಜೆಪಿ ಸರಕಾರವು ವಿಶ್ವದ ಅತಿ ಎತ್ತರದ ಪುತ್ಥಳಿಯನ್ನಾಗಿ ಪಟೇಲ್ ಅವರ ಪ್ರತಿಮೆಯನ್ನು ಸ್ಥಾಪಿಸುವುದನ್ನು ವಿರೋಧಿಸುತ್ತಿರುವುದು ಅವರಿಗೆ ಕಾಂಗ್ರೆಸ್ ಮಾಡುತ್ತಿರುವ ಅವಮಾನ. ಇದಕ್ಕೆ ಬಿಜೆಪಿ ಮಣಿಯದು ಎಂದು ಮೋದಿ ತಿಳಿಸಿದ್ದಾರೆ.

ಚುನಾವಣಾ ರ‌್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ನಾನು ಸರ್ದರ್ ಪಟೇಲ್ ಅವರನ್ನು ಗೌರವಿಸುವ ಕ್ರಮಕ್ಕೆ ಮುಂದಾದರೆ ಅದಕ್ಕೆ ತನ್ನಿಂದ ಸಾಧ್ಯವಾಗುವ ಅಡೆತಡೆಗಳನ್ನು ಸೃಷ್ಟಿಸಲು ಕಾಂಗ್ರೆಸ್ ಮುಂದಾಗುತ್ತಿದೆ. ಈ ಕಾಂಗ್ರೆಸ್ಸಿಗರಿಗೆ ನಾಯಕರೆಂದರೆ ಅದು ಒಂದು ಕುಟುಂಬದವರು ಮಾತ್ರ. ಆ ಪಕ್ಷದಲ್ಲಿ ಇತರ ನಾಯಕರೇ ಇಲ್ಲ ಎಂದು ಲೇವಡಿ ಮಾಡಿದರು.

ಇದು ಕಾಂಗ್ರೆಸ್‌ನವರು ಸರ್ದಾರ್ ಪಟೇಲ್ ಅವರಿಗೆ ಮಾಡುತ್ತಿರುವ ಅಪಮಾನವಲ್ಲದೆ ಮತ್ತೇನು ಎಂದು ನೆರೆದಿದ್ದ ಲಕ್ಷಾಂತರ ಮಂದಿಯಲ್ಲಿ ತನ್ನ ಎಂದಿನ ಶೈಲಿಯಲ್ಲಿ ಪ್ರಶ್ನಿಸಿದ ಮೋದಿ, ಶ್ರೇಷ್ಠ ನಾಯಕನಿಗೆ ಮಾಡಲಾಗಿರುವ 'ದೊಡ್ಡ ಅಪಮಾನ' ಇದು ಎಂದು ಬಣ್ಣಿಸಿದರು.

ನರ್ಮದಾ ನದಿಯಲ್ಲಿನ 'ಸಾಧು ಬೇಟ್' ದ್ವೀಪದಲ್ಲಿ 'ಐಕ್ಯತೆಯ ಪ್ರತಿಮೆ'ಯನ್ನಾಗಿ ಸರ್ದಾರ್ ಪಟೇಲ್ ಅವರ 182 ಅಡಿ ಎತ್ತರದ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡುತ್ತೇವೆ. ಇದು ಲಿಬರ್ಟಿ ಪುತ್ಥಳಿಗಿಂತ ದುಪ್ಪಟ್ಟು ಎತ್ತರವಾಗಿರುತ್ತದೆ ಎಂದು ಮೋದಿ ನಿನ್ನೆಯಷ್ಟೇ ಪ್ರಕಟಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ