ಪಾಕಿಸ್ತಾನವನ್ನು 'ಪುಂಡ ರಾಷ್ಟ್ರ' ಎಂದು ಘೋಷಿಸಿ: ರಾಜನಾಥ್
ನ್ಯೂಯಾರ್ಕ್, ಶುಕ್ರವಾರ, 8 ಅಕ್ಟೋಬರ್ 2010( 16:15 IST )
ಭಯೋತ್ಪಾದಕರು ಕಾರ್ಯಾಚರಣೆ ನಡೆಸುತ್ತಿರುವ ಪಾಕಿಸ್ತಾನ ಮತ್ತು ಇತರ ದೇಶಗಳನ್ನು ಪುಂಡ ರಾಷ್ಟ್ರಗಳು ಎಂದು ಘೋಷಿಸಬೇಕು ಎಂದು ಬಿಜೆಪಿ ಹಿರಿಯ ನಾಯಕ ರಾಜನಾಥ್ ಸಿಂಗ್ ಆಗ್ರಹಿಸಿದ್ದಾರೆ.
ಭಾರತದ ಮೇಲಿನ ಮುಂಬೈ ದಾಳಿಗಳ ಗಾಯ ಇನ್ನೂ ಮಾಸಿಲ್ಲ. ನಮಗಿನ್ನೂ ಆ ದಾಳಿಯ ಭೂತ ಕಾಡುತ್ತಿದೆ. ಆದರೂ ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುವುದನ್ನು ನಿಲ್ಲಿಸಿಲ್ಲ. ಭಯೋತ್ಪಾದನೆಗೆ ಅವರ ನೆಲ ಬಳಕೆಯಾಗುತ್ತಿದೆ. ಹಾಗಾಗಿ ಅದನ್ನು ಪುಂಡ ರಾಷ್ಟ್ರ ಅಥವಾ ವಿಫಲಗೊಂಡ ದೇಶ ಎಂದು ಘೋಷಿಸಬೇಕು ಎಂದು ಹೇಳಿದರು.
ಕಳೆದ ಒಂದು ದಶಕದಿಂದ ಭಾರತವು ಭಯೋತ್ಪಾದನೆಯ ಬಲಿಪಶುವಾಗುತ್ತಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕಾಗಿ ಭಾರತೀಯರು ಭಾರೀ ಬೆಲೆಯನ್ನು ತೆರುತ್ತಿದ್ದಾರೆ ಎಂದ ಬಿಜೆಪಿಯ ಮಾಜಿ ಅಧ್ಯಕ್ಷ, ಇದಕ್ಕೆ ಮೂಲ ಕಾರಣ ಪಾಕಿಸ್ತಾನ ಎಂದು ಆರೋಪಿಸಿದರು.
ವಿಶ್ವಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡುತ್ತಾ 2008ರಲ್ಲಿ ಮುಂಬೈ ಮೇಲೆ ನಡೆದ ಘನಘೋರ ಭಯೋತ್ಪಾದನಾ ದಾಳಿಯ ನೆನಪುಗಳನ್ನು ಕೆದಕಿದ ಅವರು, ಆ ದಾಳಿ ಗಡಿಯಾಚೆಯಿಂದ ನಡೆದ ವ್ಯವಸ್ಥಿತ ಷಡ್ಯಂತ್ರವಾಗತ್ತು; ಇಡೀ ಜಗತ್ತೇ ಅದನ್ನು ಟಿವಿ ಮೂಲಕ ನೋಡಿತ್ತು. ಅಂತಹ ಪರಿಸ್ಥಿತಿ ಈಗಲೂ ಜೀವಂತವಾಗಿಯೇ ಉಳಿದಿದೆ. ಇಂತಹ ಸವಾಲುಗಳನ್ನು ಎದುರಿಸಲು ನಾವು ಬದ್ಧರಾಗಿದ್ದೇವೆ ಎಂದರು.
ಭಯೋತ್ಪಾದನೆ ಎನ್ನುವುದು ಜಾಗತಿಕ ಬೆದರಿಕೆ. ಇದನ್ನು ಮಟ್ಟ ಹಾಕಲು ಜಾಗತಿಕ ಮಟ್ಟದಲ್ಲಿಯೇ ಪರಸ್ಪರ ಸಹಕಾರದ ಅಗತ್ಯವಿದೆ. ಭಾರತೀಯರು ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕಾಗಿ ಗರಿಷ್ಠ ಮೌಲ್ಯ ತೆರುತ್ತಿದ್ದಾರೆ ಎಂದರು.
ಹಿಂದಿಯಲ್ಲೇ ತನ್ನ ಭಾಷಣ ಮಾಡಿದ ಸಿಂಗ್, ವಿಶ್ವಸಂಸ್ಥೆಯು ತನ್ನ ಅಧಿಕೃತ ಭಾಷೆಗಳಿಗೆ ಭಾರತದ ರಾಷ್ಟ್ರ ಭಾಷೆಯನ್ನೂ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿದರು.
ಭಾರತದ ವಿದೇಶಿ ಸಚಿವರೊಬ್ಬರು ಮೊತ್ತ ಮೊದಲು ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ್ದು 1978ರಲ್ಲಿ. ಮಾಜಿ ಪ್ರಧಾನಿ ಹಾಗೂ ನನ್ನ ನಾಯಕ ಅಟಲ್ ಬಿಹಾರಿ ವಾಜಪೇಯಿಯವರು ಹಿಂದಿಯಲ್ಲಿ ಭಾಷಣ ಮಾಡಿದ್ದ ಸಂಪ್ರದಾಯವನ್ನು ನಾನು ಅನುಸರಿಸುತ್ತಿದ್ದೇನೆ ಎಂದರು.
ನಂತರ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಿಂಗ್ ಭಾರತ ಸರಕಾರದ ವಿರುದ್ಧವೂ ವಾಗ್ದಾಳಿ ನಡೆಸಿದರು. ಮುಂಬೈ ದಾಳಿಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಒತ್ತಡ ತರಲು ಭಾರತ ಸರಕಾರ ವಿಫಲವಾಗಿದೆ ಎಂದರು.
ಅಮೆರಿಕಾವನ್ನು ಬಿಡದ ಅವರು, ಪಾಕಿಸ್ತಾನಕ್ಕೆ ಸಹಕಾರದ ರೂಪದಲ್ಲಿ ಬಿಲಿಯನ್‌ಗಟ್ಟಲೆ ಡಾಲರುಗಳನ್ನು ಹರಿಸುತ್ತಿದೆ. ಆದರೆ ಅದನ್ನು ಆ ದೇಶವು ಭಯೋತ್ಪಾದನೆಗಾಗಿ ಬಳಸುತ್ತಿದೆ ಎಂದು ಟೀಕಿಸಿದರು.
ಈ ನಡುವೆ ನ್ಯೂಯಾರ್ಕ್‌ನಲ್ಲಿರುವಾಗಲೇ ಸಿಂಗ್ ಡೆಂಗ್ಯು ಜ್ವರಕ್ಕೆ ತುತ್ತಾಗಿದ್ದಾರೆ. ವೈದ್ಯರು ಪರೀಕ್ಷೆ ನಡೆಸಿದ್ದು, ಆರೋಗ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬರದ ಹೊರತು ಭಾರತಕ್ಕೆ ಹೋಗದಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.