ಆಸ್ತಿಗಾಗಿ ತಾಯಿಯನ್ನು ಮಗಳು ಸಾಯಿಸುವ ಯತ್ನಕ್ಕೆ ಕೈ ಹಾಕುವುದು ಸಾಧ್ಯವೇ? ಗೊತ್ತಿಲ್ಲ, ಆದರೆ ಇಂತಹ ಪ್ರಕರಣವೊಂದು ಆಂಧ್ರಪ್ರದೇಶದಿಂದ ವರದಿಯಾಗಿದೆ. ತಾಯಿಯ ಆಸ್ತಿಯನ್ನು ಹೊಡೆಯಲು ಮಗಳಂದಿರೇ ಸ್ವತಃ ಎಚ್ಐವಿ ಇಂಜೆಕ್ಷನ್ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಇದು ಕೇವಲ ಪೊಲೀಸರಿಗಷ್ಟೇ ಅಚ್ಚರಿ ತಂದಿರುವುದಲ್ಲ, ಜತೆಗೆ ಗುಂಟೂರು ಜಿಲ್ಲೆಯಲ್ಲಿನ ಗ್ರಾಮಸ್ಥರೂ ಮೇಲೆ ಕೆಳಗೆ ನೋಡುತ್ತಿದ್ದಾರೆ.
PR
ನನ್ನ ಆಸ್ತಿಗಾಗಿ ಮಗಳಂದಿರು ನನ್ನನ್ನು ಸಾಯಿಸಲು ಬಯಸುತ್ತಿದ್ದಾರೆ. ಅದೇ ಕಾರಣದಿಂದ ಅವರು ಎಚ್ಐವಿ ಬಾಧಿತ ರಕ್ತವನ್ನು ನನಗೆ ಇಂಜೆಕ್ಟ್ ಮಾಡಿದ್ದಾರೆ ಎಂದು ಗಂಡ ಆರ್. ರಂಗ ರಾವ್ ಅವರ ಜತೆ 59ರ ಹರೆಯದ ತಾಯಿ ಭಾರತಿ ರಾವ್ ಪೊಲೀಸರಿಗೆ ದೂರು ನೀಡಿದ್ದಾರೆ.
ನನ್ನನ್ನು ಮಕ್ಕಳೇ ಸಾಯಿಸಲು ಯತ್ನಿಸುತ್ತಿರುವುದು ಕೇವಲ ಆಸ್ತಿಗಾಗಿ. ನಾನು ಮತ್ತು ನನ್ನ ಗಂಡ ಬೇಗ ಸಾಯಬೇಕು ಎಂದು ಅವರು ಬಯಸುತ್ತಿದ್ದಾರೆ. ಅವರ ಇಚ್ಛೆಗೆ ವಿರುದ್ಧವಾಗಿ ನಾವು ನಡೆದುಕೊಳ್ಳುತ್ತಿರುವುದರಿಂದ ನಮ್ಮನ್ನು ಕೊಲ್ಲಲು ನಿರ್ಧರಿಸಿದ್ದಾರೆ ಎಂದು ತಾಯಿ ಭಾರತಿ ಆರೋಪಿಸಿದ್ದಾರೆ.
ಮಗಳಂದಿರಾದ ದುರ್ಗಾ (35), ಕಾಮೇಶ್ವರಿ (32) ಮತ್ತು ಕಾಮೇಶ್ವರಿಯ ಗಂಡ ಸಾಂಬಶಿವ ರಾವ್ (36) ಎಂಬವರೇ ಈ ಕೃತ್ಯ ಎಸಗಿರುವವರು ಎಂದು ಗುರುತಿಸಲಾಗಿದೆ.
ಭಾರತಿಯವರು ಮಾಡಿರುವ ಆರೋಪಗಳಲ್ಲಿ ಹುರುಳಿರುವುದು ಮೇಲ್ನೋಟದಿಂದ ಕಂಡು ಬಂದಿದೆ. ರಕ್ತ ಪರೀಕ್ಷೆ ನಡೆಸಿದಾಗ ಎಚ್ಐವಿ ಪಾಸಿಟಿವ್ ಇರುವುದು ಕಂಡು ಬಂದಿದೆ. ಆ ನಂತರವಷ್ಟೇ ಅವರು ದೂರು ನೀಡಲು ಮುಂದಾಗಿದ್ದಾರೆ.
ಆದರೆ ಆರೋಪಗಳನ್ನು ಭಾರತಿ-ರಂಗ ರಾವ್ ಪುತ್ರಿಯರು ನಿರಾಕರಿಸಿದ್ದಾರೆ.
ನಮ್ಮ ಮೇಲಿನ ಆರೋಪಗಳು ಸುಳ್ಳು. ಆಕೆಗೆ ಎಚ್ಐವಿ ಪಾಸಿಟಿವ್ ಫಲಿತಾಂಶ ಬಂದಿರುವುದು, ಅವರ ಸ್ವಂತ ನಡವಳಿಕೆಯಿಂದ. ಅವರಿಗೆ ನಾವೇನೂ ಮಾಡಿಲ್ಲ ಎಂದು ಭಾರತಿಯವರ ಪುತ್ರಿಯಲ್ಲೊಬ್ಬರಾದ ಕಾಮೇಶ್ವರಿ ತಿಳಿಸಿದ್ದಾರೆ.
ಈ ಸಂಬಂಧ ಕ್ರಮಕ್ಕೆ ಮುಂದಾಗಿರುವ ಪೊಲೀಸರು ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡು ಭಾರತಿಯವರ ಮಗಳಂದಿರು ಮತ್ತು ಅಳಿಯನನ್ನು ಬಂಧಿಸಿದ್ದಾರೆ. ಎಲ್ಲಾ ಕೋನಗಳಲ್ಲೂ ಪ್ರಕರಣದ ತನಿಖೆಯನ್ನು ನಡೆಸಲಾಗುತ್ತಿದೆ.