ಅಯೋಧ್ಯೆಯ ವಿವಾದಿತ ಸ್ಥಳವನ್ನು ಮುಸ್ಲಿಮರಿಗೆ ಬಿಟ್ಟುಕೊಡಲು ಅವಕಾಶ ನೀಡಬೇಡಿ ಮತ್ತು ಈ ಸಂಬಂಧ ಮಾತುಕತೆಗೆ ಮುಂದಾಗಬೇಡಿ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಮನವಿ ಮಾಡಿದೆ. ಅತ್ತ ಜಮಾತ್ ಉಲೇಮಾ ಹಿಂದ್ ಮಾತ್ರ ಹೈಕೋರ್ಟ್ ನೀಡಿರುವ ತೀರ್ಪನ್ನು ಸ್ವೀಕರಿಸುವಂತೆ ಕರೆ ನೀಡಿದೆ.
ಅಯೋಧ್ಯೆಯ ವಿವಾದಿತ ಸ್ಥಳವು ನಮಗೆ ಸಿಗಬೇಕೆಂದು ಸುಪ್ರೀಂ ಕೋರ್ಟ್ ಮೊರೆ ಹೋಗಲು ನಾವು ಈಗಾಗಲೇ ನಿರ್ಧರಿಸಿದ್ದೇವೆ. ರಾಮ ಜನ್ಮಭೂಮಿಯನ್ನು ಬಿಟ್ಟು ಕೊಡುವ ಕುರಿತು ಮುಸ್ಲಿಂ ಸಂಘಟನೆಗಳ ಜತೆ ಯಾವುದೇ ರೀತಿಯ ಮಾತುಕತೆ ನಡೆಸದಂತೆ ನಾವು ಎಲ್ಲಾ ಹಿಂದೂ ಸಂಘಟನೆಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಮನೀಷ್ ಮಹಾಜನ್ ತಿಳಿಸಿದ್ದಾರೆ.
ಅಯೋಧ್ಯೆ ಒಂದು ಇಂಚು ಭೂಮಿಯನ್ನು ಕೂಡ ಮತ್ತೊಂದು ಪಕ್ಷಕ್ಕೆ ನೀಡುವ ಪ್ರಶ್ನೆಯಿಲ್ಲ. ಅಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡುವ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಈ ಸಂಬಂಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಮಹಾಜನ್ ತಿಳಿಸಿದ್ದಾರೆ.
ಈ ಸಂಬಂಧ ಹಿಂದೂ ಮಹಾಸಭಾ ಮತ್ತು ನಿರ್ಮೋಹಿ ಅಖಾಡಗಳು ಜತೆಯಾಗಿ ಸುಪ್ರೀಂ ಕೋರ್ಟಿನಲ್ಲಿ ವಾದಿಸಲು ಚರ್ಚೆ ನಡೆಸುತ್ತಿವೆ. ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಸಂದರ್ಭದಲ್ಲಿ ಅಯೋಧ್ಯೆ ನಮಗೆ ಬೇಕೆಂದು ವಾದಿಸಲು ಜಂಟಿ ಮನವಿ ಸಲ್ಲಿಸುವ ಬಗ್ಗೆ ನಿನ್ನೆಯಷ್ಟೇ ಮಹಾಸಭಾದ ನಿಯೋಗವೊಂದು ನಿರ್ಮೋಹಿ ಅಖಾಡದ ಭಾಸ್ಕರ್ ದಾಸ್ ಅವರೊಂದಿಗೆ ಸಮಾಲೋಚನೆ ನಡೆಸಿದೆ.
ತೀರ್ಪನ್ನು ಒಪ್ಪಿಕೊಳ್ಳಿ: ಮದನಿ ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ಮುಸ್ಲಿಂ ಸಮುದಾಯವು ಒಪ್ಪಿಕೊಳ್ಳಬೇಕು ಎಂದು ಜಮಾತ್ ಉಲೇಮಾ ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಕರೆ ನೀಡಿದ್ದಾರೆ.
ದೇಶದ ಉಲೇಮಾಗಳ ಬೃಹತ್ ಒಕ್ಕೂಟಗಳ ಮುಖ್ಯಸ್ಥರಾಗಿರುವ ಮದನಿ, ಮುಸ್ಲಿಮರು ಈ ಬಗ್ಗೆ ಮೃದು ಭಾವವನ್ನು ಹೊಂದಬೇಕು ಮತ್ತು ತೀರ್ಪನ್ನು ಸ್ವೀಕರಿಸಬೇಕು ಎಂದು ಮನವಿ ಮಾಡಿದರು.
ದೇಶದ ಹಿತಾಸಕ್ತಿ ಮತ್ತು ಮುಸ್ಲಿಂ ಸಮುದಾಯ ಅದರಲ್ಲೂ ಮುಂದಿನ ಜನಾಂಗದ ಏಳ್ಗೆಯನ್ನು ಗಣನೆಗೆ ತೆಗೆದುಕೊಂಡು ನಾವು ಈ ತೀರ್ಪನ್ನು ಒಪ್ಪಿಕೊಳ್ಳಬೇಕು. ಇಂತಹ ಸಮಸ್ಯೆಗಳನ್ನು ನಾವು ಪರಿಹರಿಸುತ್ತಾ ಮುಂದಕ್ಕೆ ಸಾಗಬೇಕು. ವಿವಾದಿತ ಸ್ಥಳದಲ್ಲಿ ಉಭಯ ಧರ್ಮೀಯರ ಪ್ರಾರ್ಥನಾ ಮಂದಿರಗಳನ್ನು ಸ್ಥಾಪಿಸುವುದರಿಂದ ದೇಶದ ಘನತೆ ಹೆಚ್ಚುತ್ತವೆ, ಪ್ರಗತಿ ಕಾಣುತ್ತದೆ ಎಂದು ಅಭಿಪ್ರಾಯಪಟ್ಟರು.