ಜಮ್ಮು-ಕಾಶ್ಮೀರದಲ್ಲಿ ರಕ್ಷಣಾ ಪಡೆಗಳಿಗೆ ನೂತನ ಸವಾಲುಗಳು ಎದುರಾಗಿವೆ. ಅಧಿಕೃತ ಒಳ ನುಸುಳುವಿಕೆಯೇ ಇದೀಗ ಎದುರಾಗಿರುವ ನೂತನ ಭೀತಿ. ಅಂದರೆ ಭಾರತೀಯ ಯುವಕರು ಸಂಬಂಧಿಕರನ್ನು ಭೇಟಿಯಾಗುವ ನೆಪದಲ್ಲಿ ಪಾಕಿಸ್ತಾನಕ್ಕೆ ಹೋಗಿ ಅಲ್ಲಿ ಭಯೋತ್ಪಾದನಾ ತರಬೇತಿಗಳನ್ನು ಪಡೆದುಕೊಂಡು ದೇಶಕ್ಕೆ ವಾಪಸ್ಸಾಗುತ್ತಿದ್ದಾರೆ.
ಇಂತಹ ಪ್ರಕರಣ ಇತ್ತೀಚೆಗಷ್ಟೇ ಬಯಲಾಗಿದೆ. ಶ್ರೀನಗರ ಸಮೀಪದ ಬಗ್ದಮ್‌ನಲ್ಲಿನ ವ್ಯಕ್ತಿಯೋರ್ವ ಪಾಕಿಸ್ತಾನಕ್ಕೆ ತನ್ನ ಸಂಬಂಧಿಕರ ಭೇಟಿಗೆಂದು ತೆರಳಿದ್ದ. ತನ್ನ ವೀಸಾ ಅವಧಿಯನ್ನು ಎರಡು ವಾರಗಳಿಗೆ ವಿಸ್ತರಿಸಿದ ಆತ, ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆಯ ಪ್ರಾಥಮಿಕ ತರಬೇತಿ ಕೇಂದ್ರ 'ದೌರಾ-ಇ-ಆಮ್'ನಲ್ಲಿ ತರಬೇತಿ ಪಡೆದು ಭಾರತಕ್ಕೆ ವಾಪಸ್ಸಾಗಿದ್ದ.
ಆ ವ್ಯಕ್ತಿಯ ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆದರೆ ಆತ ವಿಚಾರಣೆ ಸಂದರ್ಭದಲ್ಲಿ ಹಲವು ವಿಚಾರಗಳನ್ನು ತನಿಖಾ ದಳಗಳಿಗೆ ತಿಳಿಸಿದ್ದಾನೆ. ತಾನು ಪಾಕಿಸ್ತಾನಕ್ಕೆ ಸಂಬಂಧಿಕರ ಭೇಟಿಯ ನೆಪದಲ್ಲಿ ತೆರಳಿದ ರೀತಿಯಲ್ಲಿಯೇ ಹಲವು ಯುವಕರು ಅಲ್ಲಿ ಭಯೋತ್ಪಾದಕರ ಶಿಬಿರಗಳಲ್ಲಿ ತರಬೇತಿ ಪಡೆಯುತ್ತಿರುವ ಮಾಹಿತಿ ನೀಡಿದ್ದಾನೆ.
ಆರಂಭದ ವಾರದಲ್ಲಿ ಧಾರ್ಮಿಕ ಕೋರ್ಸ್ ಸೇರಿದಂತೆ ರೈಫಲ್‌ಗಳು ಮತ್ತು ಗ್ರೆನೇಡ್‌ಗಳನ್ನು ಉಪಯೋಗಿಸುವ ಬಗ್ಗೆ ತರಬೇತಿ ನೀಡಲಾಗಿತ್ತು ಎಂದೂ ಆತ ತಿಳಿಸಿದ್ದಾನೆ.
ಹಿರಿಯ ಅಧಿಕಾರಿಗಳ ಪ್ರಕಾರ ಲಷ್ಕರ್ ಇತ್ತೀಚಿನ ದಿನಗಳಲ್ಲಿ ಈ ವಿನೂತನ ತಂತ್ರವನ್ನು ಬಳಸುತ್ತಿದೆ. ಕಣಿವೆ ರಾಜ್ಯದ ನಿರುದ್ಯೋಗಿ ವಿದ್ಯಾವಂತ ಯುವಕರನ್ನು ಗುರಿ ಮಾಡುವ ಲಷ್ಕರ್, ಅವರನ್ನು ಪಾಕಿಸ್ತಾನಕ್ಕೆ ಕರೆಸಿಕೊಂಡು ತರಬೇತಿ ನೀಡುತ್ತಿದೆ.
ಪಾಕಿಸ್ತಾನ ಮತ್ತು ಗಲ್ಫ್ ರಾಷ್ಟ್ರಗಳಿಗೆ ತೆರಳಿದ ನಂತರ ವೀಸಾ ವಿಸ್ತರಣೆ ಮಾಡಿಕೊಳ್ಳುವ ಯುವಕರತ್ತ ಹೆಚ್ಚಿನ ಗಮನ ಹರಿಸುವಂತೆ ನಾವು ವಲಸೆ ಅಧಿಕಾರಿಗಳಿಗೆ ಹೇಳಿದ್ದೇವೆ ಎಂದು ಅವರು ಹೇಳಿದ್ದಾರೆ.