ಬಿಹಾರದಲ್ಲಿನ ಗಂಗಾ ನದಿಯಲ್ಲಿ ನಡೆದ ದೋಣಿ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಸೋಮವಾರ 14 ಶವಗಳು ಪತ್ತೆಯಾಗಿವೆ. ಇನ್ನೂ ಆರು ಮಂದಿ ಕಾಣೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ಮುಂದುವರಿದಿದೆ.
ಇಂದು ಮುಂಜಾನೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಮತ್ತು ಸ್ಥಳೀಯ ಈಜುಗಾರರು 14ಕ್ಕೂ ಹೆಚ್ಚು ಕಳೇಬರಗಳನ್ನು ನೀರಿನಿಂದ ಹೊರಗೆ ತೆಗೆದಿದ್ದಾರೆ ಎಂದು ಪಾಟ್ನಾದಲ್ಲಿ ಮಾತನಾಡುತ್ತಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ನೀಲಮಣಿ ತಿಳಿಸಿದ್ದಾರೆ.
ಇದುವರೆಗೆ ಪತ್ತೆಯಾದ ಶವಗಳಲ್ಲಿ 25 ಮಂದಿ ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಕಾಣೆಯಾಗಿರುವವರು ಕೂಡ ಬಹುತೇಕ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಹೇಳಲಾಗಿರುವ ಆರು ಮಂದಿಯ ಪತ್ತೆಗಾಗಿ ವಿಪತ್ತು ನಿರ್ವಹಣಾ ದಳ ಮತ್ತು ಸ್ಥಳೀಯ ಈಜುಗಾರರು ತಮ್ಮ ಯತ್ನವನ್ನು ಮುಂದುವರಿಸಿದ್ದಾರೆ.
ಉತ್ತರ ಪ್ರದೇಶದ ಬಾಲಿಯಾ ಎಂಬಲ್ಲಿಂದ ಬಿಹಾರದ ದಾಲುಪುರ್ ಎಂಬಲ್ಲಿ ಅಂದಾಜು 42 ಮಂದಿಯನ್ನು ಹೊತ್ತಿದ್ದ ದೋಣಿ ಹೊರಟಿತ್ತು. ಇದು ಬ್ರಹ್ಮಾಪುರ ಎಂಬಲ್ಲಿ ನೀರಿನ ಸುಳಿಗೆ ಸಿಕ್ಕಿ ನಂತರ ಮುಳುಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೋಣಿ ದುರಂತಕ್ಕೆ ಬಲಿಯಾದವರಿಗೆ ರಾಜ್ಯ ಸರಕಾರ ಜಾರಿಗೆ ತಂದಿರುವ ಕಾನೂನುಗಳ ಅನ್ವಯ ತಲಾ 1.5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಜತೆಗೆ ಜಿಲ್ಲಾಡಳಿತವು 10,000 ರೂಪಾಯಿಗಳ ಪರಿಹಾರವನ್ನು ಪ್ರತಿ ಕುಟುಂಬಕ್ಕೂ ನೀಡುತ್ತಿದೆ.
ಮೂಲಗಳ ಪ್ರಕಾರ ದುರಂತಕ್ಕೀಡಾದ ದೋಣಿಯಲ್ಲಿ 42 ಮಂದಿ ಪ್ರಯಾಣಿಸಲು ಅವಕಾಶವಿರಲಿಲ್ಲ. ಈ ದೋಣಿಯಲ್ಲಿ ಹೆಚ್ಚೆಂದರೆ 30 ಮಂದಿಯನ್ನು ಮಾತ್ರ ಸಾಗಿಸಬಹುದಾಗಿತ್ತು. ಮಿತಿ ಮೀರಿದ ಜನರಿಂದಾಗಿ ದೋಣಿ ಅಪಘಾತಕ್ಕೀಡಾಯಿತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.