ಪ್ರಜಾಪ್ರಭುತ್ವದಲ್ಲಿ ಚುನಾಯಿತಗೊಂಡಿರುವ ಕರ್ನಾಟಕದ ಬಿಜೆಪಿ ಸರಕಾರವನ್ನು ಪ್ರತಿಪಕ್ಷಗಳು ಹಣ ಮತ್ತು ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಅಸ್ಥಿರಗೊಳಿಸಲು ಯತ್ನಿಸುತ್ತಿವೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಆರೋಪಿಸಿದ್ದಾರೆ.
ಹಣ ಮತ್ತು ಅಧಿಕಾರವನ್ನು ಬಳಸಿಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಕಳೆದ ಕೆಲವು ದಿನಗಳಿಂದ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿವೆ. ಹಲವು ಶಾಸಕರನ್ನು ಖರೀದಿಸಿ, ಅವರ ಮೇಲೆ ಒತ್ತಡಗಳನ್ನು ಹೇರಲಾಗಿತ್ತು. ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಯತ್ನಗಳೂ ನಡೆದಿದ್ದವು ಎಂದು ಆರೋಪಿಸಿದರು.
ಇಷ್ಟೆಲ್ಲ ನಡೆದಿರುವ ಹೊರತಾಗಿಯೂ ಬಿಜೆಪಿ ವಿಶ್ವಾಸ ಮತವನ್ನು ಗೆದ್ದಿರುವುದು ಸಂತಸ ತಂದಿದೆ. ಇದು ಜೈ ಪ್ರಕಾಶ್ ನಾರಾಯಣ್ ಅವರ ಜನ್ಮದಿನ ವಾರ್ಷಿಕೋತ್ಸವದಂದೇ ಬಂದಿರುವುದು ಅವರಿಗೆ ಸಂದ ಗೌರವವಾಗಿದೆ ಎಂದರು.
ವಿಶ್ವಾಸ ಮತ ಗೆಲ್ಲಲು ಸಾಧ್ಯವಾಗಿರುವುದಕ್ಕೆ ಕರ್ನಾಟಕದ ಬಿಜೆಪಿ ನಾಯಕರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಭಿನಂದಿಸಿದ ಗಡ್ಕರಿ, ಪ್ರಜಾಪ್ರಭುತ್ವ ಗೆದ್ದಿದೆ ಎಂದು ಇಂದಿನ ಪ್ರಸಂಗವನ್ನು ಬಣ್ಣಿಸಿದರು.
ಅಲ್ಲದೆ ರಾಜ್ಯ ಸರಕಾರದ ವಿರುದ್ಧ ವಜಾಗೊಳಿಸುವಂತಹ ಸಂವಿಧಾನ ದುರ್ಬಳಕೆಗೆ ಕೇಂದ್ರ ಸರಕಾರವು ಮುಂದಾಗದು ಎಂಬ ಭರವಸೆಯನ್ನೂ ಅವರು ವ್ಯಕ್ತಪಡಿಸಿದರು.
ಮಹತ್ತರ ಗಂಡಾಂತರದಿಂದ ಸರಕಾರ ಪಾರಾದ ನಂತರ ಮುಂದಿನ ದಿನಗಳಲ್ಲಿ ಸರಕಾರಕ್ಕೆ ಯಾವುದೇ ರೀತಿಯ ಅಸ್ಥಿರತೆ ಭಯವಿಲ್ಲ ಎನ್ನುವುದಕ್ಕೆ ಶೇ.100ರ ಭರವಸೆ ನನಗಿದೆ. ಪ್ರತಿಪಕ್ಷಗಳಿಂದ ಹಣ ಪಡೆದು, ಪಕ್ಷದ ಬೆನ್ನಿಗೆ ಚೂರಿ ಹಾಕಿದ ಶಾಸಕರು ಈಗಾಗಲೇ ಅನರ್ಹಗೊಂಡಿದ್ದಾರೆ ಎಂದರು.