ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜ್ಯದ ಬೆಳವಣಿಗೆಗಳು ಪ್ರಜಾಪ್ರಭುತ್ವದ ಕಗ್ಗೊಲೆ: ಕಾಂಗ್ರೆಸ್ (Karnataka | Congress | Yeddyurappa | Manish Tewari)
Bookmark and Share Feedback Print
 
ಕರ್ನಾಟಕದ ಯಡಿಯೂರಪ್ಪ ಸರಕಾರವು ವಿಶ್ವಾಸ ಮತವನ್ನು ಗೆದ್ದ ವಿಧಾನವು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕಗ್ಗೊಲೆ ಎಂದು ಕಾಂಗ್ರೆಸ್ ಬಣ್ಣಸಿದೆ. ರಾಜ್ಯಪಾಲರ ವರದಿ ಬಂದ ನಂತರ ಪಕ್ಷವು ಈ ಬಗ್ಗೆ ತನ್ನ ಕಾರ್ಯವಿಧಾನಗಳ ಅಂತಿಮ ತೀರ್ಮಾನಕ್ಕೆ ಬರಲಿದೆ ಎಂದಿದೆ.

ಕರ್ನಾಟಕದಲ್ಲಿ ನಡೆದಿರುವುದು ಕೇವಲ ಪ್ರಜಾಪ್ರಭುತ್ವದ ಕಗ್ಗೊಲೆಯಲ್ಲ, ಜತೆಗೆ ಸಂವಿಧಾನ ಬದ್ಧತೆಯ ಕೊಲೆಯೂ ಹೌದು ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಅಭಿಪ್ರಾಯಪಟ್ಟರು.

ಅಲ್ಪಮತಕ್ಕೆ ಕುಸಿದ ಸರಕಾರವೊಂದನ್ನು ಅಕ್ರಮವಾಗಿ ಮತ್ತು ಪಕ್ಷಪಾತ ವಹಿಸುವ ಪ್ರಮಾದದ ಮೂಲಕ ಸ್ಪೀಕರ್ ಬಹುಮತದ ಸರಕಾರವನ್ನಾಗಿ ಪರಿವರ್ತಿಸಿದ್ದಾರೆ. ಇದು ಪ್ರಜಾಪ್ರಭುತ್ವವಲ್ಲ ಎಂದರು.

ಹಾಗೊಂದು ವೇಳೆ ಬಿಜೆಪಿ ಪಕ್ಷಕ್ಕೆ ತನಗೆ ಬಹುಮತ ಇರುವ ಬಗ್ಗೆ ಖಾತ್ರಿಯಿದ್ದಿದ್ದರೆ, ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆಗೆ ಸೂಕ್ತ ವಿಧಾನವನ್ನು ಅನುಸರಿಸಬೇಕಾಗಿತ್ತು. ರಾಜ್ಯಪಾಲರ ವರದಿಯ ಮೇಲೆ ಮುಂದಿನ ನಡೆಗಳು ನಿಂತಿವೆ. ಶೀಘ್ರದಲ್ಲೇ ಕಾಂಗ್ರೆಸ್ ತನ್ನ ಹೋರಾಟದ ರೂಪುರೇಷೆಗಳನ್ನು ರೂಪಿಸಲಿದೆ ಎಂದು ತಿವಾರಿ ತಿಳಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್‌ನ ಉಸ್ತುವಾರಿ ಹೊತ್ತಿರುವ ಕೇಂದ್ರ ಆರೋಗ್ಯ ಸಚಿವ ಗುಲಾಮ್ ನಬಿ ಆಜಾದ್ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸದನದ ಹೊರಗಡೆ ನಡೆಯುವ ಯಾವುದೇ ಚಟುವಟಿಕೆಗಳ ಬಗ್ಗೆ ಕ್ರಮ ಕೈಗೊಳ್ಳುವ ಅಧಿಕಾರ ವ್ಯಾಪ್ತಿ ಸ್ಪೀಕರ್ ಹೊಂದಿಲ್ಲ ಎಂದರು.

ಕೆಲವು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿರುವುದನ್ನು ಉಲ್ಲೇಖಿಸಿದ ಅವರು, ಪಕ್ಷೇತರ ಶಾಸಕರ ಮೇಲೆ ಯಾವುದೇ ರಾಜಕೀಯ ಪಕ್ಷ ತನ್ನ ಅಧಿಕಾರ ಚಲಾಯಿಸುವಂತಿಲ್ಲ ಎಂದು ತನ್ನ ಅನಿಸಿಕೆ ವ್ಯಕ್ತಪಡಿಸಿದರು.

ಇದನ್ನು ಕಾನೂನು ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಕೂಡ ಬೆಂಬಲಿಸಿದ್ದಾರೆ. ಸದನದ ಹೊರಗಡೆ ನಡೆಯುವ ಚಟುವಟಿಕೆಗಳ ಆಧಾರದ ಮೇಲೆ ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ಸ್ಪೀಕರ್ ಅವರಿಗಿಲ್ಲ. ಅಲ್ಲದೆ, ಸದನದಲ್ಲಿ ವಿಶ್ವಾಸ ಮತ ಯಾಚಿಸಿದ ರೀತಿಯೂ ಸೂಕ್ತವಲ್ಲ ಎಂದು ಮೊಯ್ಲಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ