ಭಾರತೀಯರು ತಮ್ಮದೇ ದೇಶವನ್ನು ಸುತ್ತುವುದಾದರೆ ಹೆಚ್ಚಾಗಿ ಯಾವ ರಾಜ್ಯಕ್ಕೆ ಪ್ರವಾಸ ಮಾಡುತ್ತಾರೆ? ಇಂತಹ ಪ್ರಶ್ನೆಗೆ ಸಾಮಾನ್ಯವಾಗಿ ಬಹುತೇಕರು ನೀಡುವ ಉತ್ತರ ಗೋವಾ. ಆದರೆ ಇದು ನಿಜವಲ್ಲ. ದೇವರ ಸ್ವಂತ ನಾಡು ಖ್ಯಾತಿಯ ಕೇರಳವೂ ಸರಿಯುತ್ತರವಲ್ಲ. ನಂಬಿದರೆ, ನಂಬಿ -- ಅದು ಆಂಧ್ರಪ್ರದೇಶ!
ಕಳೆದ ಮೂರು ವರ್ಷಗಳಲ್ಲಿ ಅತೀ ಹೆಚ್ಚು ಭಾರತೀಯರು ಪ್ರವಾಸ ಮಾಡಿರುವುದು ಆಂಧ್ರಕ್ಕೆ, ಅದರಲ್ಲೂ ವಿಶೇಷವಾಗಿ ತಿರುಪತಿಗೆ. ತಾಜ್ ಮಹಲ್ ಹೊಂದಿರುವ ಉತ್ತರ ಪ್ರದೇಶದ್ದು ಎರಡನೇ ಸ್ಥಾನ. ಪ್ರವಾಸೋದ್ಯಮದಲ್ಲಿ ಸಾಕಷ್ಟು ಹಿಂದೆ ಇದ್ದೇವೆ ಎಂಬ ಸಾಮಾನ್ಯ ಭಾವನೆಯ ಹೊರತಾಗಿಯೂ ನಮ್ಮ ಕರ್ನಾಟಕ ನಾಲ್ಕನೇ ಸ್ಥಾನ ಪಡೆದಿದೆ.
ಇದನ್ನು ಹೇಳಿರುವುದು ಸ್ವತಃ ಕೇಂದ್ರದ ಪ್ರವಾಸೋದ್ಯಮ ಸಚಿವಾಲಯದ ಮಾರುಕಟ್ಟೆ ಅಧ್ಯಯನ ವಿಭಾಗ.
2009ರಲ್ಲಿ ದೇಶೀಯ ವಲಯದಲ್ಲಿ ಒಟ್ಟು ಪ್ರವಾಸ ಮಾಡಿದವರ ಸಂಖ್ಯೆ 65 ಕೋಟಿ. 2007ರ 52.7 ಕೋಟಿ ಮತ್ತು 2008ರ 56.3 ಕೋಟಿ ಮಂದಿ ದೇಸೀ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಿದ್ದರು.
ಮಧ್ಯಮ ವರ್ಗದ ಯುವ ಜನತೆ ಹೆಚ್ಚೆಚ್ಚು ಸುತ್ತಾಡಲು ಒಲವು ತೋರಿಸುತ್ತಿರುವುದರಿಂದ 2010ರ ದೇಸಿ ಪ್ರವಾಸೋದ್ಯಮ ಮಾರುಕಟ್ಟೆಯು ಶೇ.20ರಷ್ಟು ಪ್ರಗತಿ ಕಾಣಲಿದೆ ಎಂದೂ ಸಚಿವಾಲಯವು ಅಂದಾಜಿಸಿದೆ.
2009ರ ಪ್ರವಾಸೋದ್ಯಮದ ಟಾಪ್ 10 ರಾಜ್ಯಗಳು ಮತ್ತು ಪ್ರವಾಸಿಗರ ಸಂಖ್ಯೆ.
1) ಆಂಧ್ರಪ್ರದೇಶ - 15.75 ಕೋಟಿ 2) ಉತ್ತರ ಪ್ರದೇಶ - 13.48 ಕೋಟಿ 3) ತಮಿಳುನಾಡು - 11.57 ಕೋಟಿ 4) ಕರ್ನಾಟಕ - 3.27 ಕೋಟಿ 5) ರಾಜಸ್ತಾನ - 2.55 ಕೋಟಿ 6) ಮಹಾರಾಷ್ಟ್ರ - 2.37 ಕೋಟಿ 7) ಮಧ್ಯಪ್ರದೇಶ 8) ಉತ್ತರಾಖಂಡ 9) ಪಶ್ಚಿಮ ಬಂಗಾಲ 10) ಗುಜರಾತ್
ಈ 10 ರಾಜ್ಯಗಳು ದೇಶದ ಒಟ್ಟು ದೇಶೀಯ ಪ್ರವಾಸೋದ್ಯಮದ ಶೇ.80ನ್ನು 2009ರಲ್ಲಿ ಗಿಟ್ಟಿಸಿಕೊಂಡಿವೆ. ಮಹಾರಾಷ್ಟ್ರವಂತೂ 2007ಕ್ಕಿಂತ 1.92 ಕೋಟಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದೆ. ಆದರೆ ಕರ್ನಾಟಕವು 2007ರಲ್ಲಿದ್ದ 3.78 ಕೋಟಿಯಲ್ಲಿ 1.28 ಕೋಟಿ ಪ್ರವಾಸಿಗರನ್ನು 2008ರಲ್ಲಿ ಕಳೆದುಕೊಂಡಿದ್ದರೂ, 2009ರಲ್ಲಿ ತಿರುಗಿ ಬಿದ್ದಿದೆ.
ರಾಜಸ್ತಾನ ಕೂಡ ಮಿಶ್ರಫಲ ಅನುಭವಿಸಿದೆ. ಅದು 2007ರಲ್ಲಿ 2.59, 2008ರಲ್ಲಿ 2.83ರ ಏರಿಕೆ ದಾಖಲಿಸಿದ್ದರೆ, 2009ಕ್ಕಾಗುವಾಗ 2.55ಕ್ಕೆ ಕುಸಿದಿದೆ.
ವಿಚಿತ್ರವೆಂದರೆ ಜನರ ಮನಸ್ಸಿನಲ್ಲಿ ಮೇಲೆ ಹೇಳಿದ ಟಾಪ್ 10 ರಾಜ್ಯಗಳು ನೆಚ್ಚಿನ ಪ್ರವಾಸಿ ತಾಣಗಳು ಎನಿಸದೇ ಇರುವುದು. ಜನರಲ್ಲಿ ಭಾರತದ ಪ್ರವಾಸಿ ತಾಣಗಳು ಯಾವುದೆಂದರೆ ಪಕ್ಕನೆ ಶಿಮ್ಲಾ, ಕುಲ್ಲು, ಮನಾಲಿ, ಗೋವಾ, ಕಾಶ್ಮೀರ, ಕೇರಳ ಎನ್ನುತ್ತಾರೆ.
ಶಿಮ್ಲಾ, ಕುಲ್ಲು ಮತ್ತು ಮನಾಲಿಗಳಂತ ಮನಮೋಹಕ ತಾಣಗಳನ್ನು ಹೊಂದಿರುವ ಹಿಮಾಚಲ ಪ್ರದೇಶ 2009ರಲ್ಲಿ ದಾಖಲಿಸಿರುವ ಒಟ್ಟು ಪ್ರವಾಸಿಗರ ಸಂಖ್ಯೆ ಕೇವಲ 1.1 ಕೋಟಿ. ಭಯೋತ್ಪಾದನೆಯಿಂದ ನಲುಗಿರುವ ಕಾಶ್ಮೀರ 92.35 ಲಕ್ಷ, ಕೇರಳ 77.89 ಲಕ್ಷ ಮತ್ತು ಗೋವಾ ಕೇವಲ 21.27 ಲಕ್ಷ ದೇಸೀ ಪ್ರವಾಸಿಗರನ್ನು ಕಳೆದ ವರ್ಷ ಕಂಡಿದೆ.
2007ರಲ್ಲಿ 22.09 ಪ್ರವಾಸಿಗರನ್ನು ಕಂಡಿದ್ದ ಗೋವಾ, 2008ರಲ್ಲಿ 20.02ಕ್ಕೆ ಕುಸಿತ ಕಂಡಿತ್ತು. 2009ರಲ್ಲಿ ಅದು ಅಲ್ಪಮಟ್ಟದ ಚೇತರಿಕೆ ಕಂಡಿದೆ.