ಕೇಂದ್ರಾಪುರ, ಮಂಗಳವಾರ, 12 ಅಕ್ಟೋಬರ್ 2010( 17:50 IST )
ಸ್ವಘೋಷಿತ ವೈದ್ಯನೊಬ್ಬ ವ್ಯಕ್ತಿಯೊಬ್ಬನಿಗೆ ಎಚ್ಐವಿ/ಏಡ್ಸ್ ತಗುಲಿದೆ ಎಂದು ಹೇಳಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಒರಿಸ್ಸಾ ಸರಕಾರವು, ಆರೋಗ್ಯ ಇಲಾಖೆಯ ತನಿಖೆಗೆ ಆದೇಶ ನೀಡಿದೆ.
ಇಲ್ಲಿನ ತಾಲ್ಚುವಾ ಗ್ರಾಮದ 33ರ ಹರೆಯದ ಬಲರಾಮ್ ಪಾತ್ರ ಎಂಬಾತನಿಗೆ ಏಡ್ಸ್ ಇದೆ ಎಂದು ವೈದ್ಯನೊಬ್ಬ ಹೇಳಿದ್ದ. ಆದರೆ ಈತ ಸರಕಾರಿ ಆರೋಗ್ಯ ಕೇಂದ್ರದಲ್ಲಿ ಪರೀಕ್ಷೆಗೊಳಗಾದಾಗ, ಆತ ಹೇಳಿದ್ದು ಸುಳ್ಳು ಎಂದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಬಲರಾಮ್ ಪೊಲೀಸರು ಮತ್ತು ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿದ್ದ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ, ಇಲಾಖಾ ತನಿಖೆಗೆ ಆದೇಶ ನೀಡಿದೆ. ಸ್ವಯಂ ಘೋಷಿತ ವೈದ್ಯ ಹಾಗೂ ಆತ ಹೊಂದಿರುವ ಪರೀಕ್ಷಾ ಕೇಂದ್ರದ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.
ಕರಾವಳಿ ಜಿಲ್ಲೆಯಲ್ಲಿ ನಕಲಿ ಆರೋಗ್ಯ ಸೇವಾ ಕೇಂದ್ರಗಳ ಜಾಲವೇ ಕಾರ್ಯ ನಿರ್ವಹಿಸುತ್ತಿದೆ ಎಂದು ಕಳೆದ ಹಲವು ಸಮಯಗಳಿಂದ ಮಾಡಿಕೊಂಡು ಬರಲಾಗಿರುವ ಆರೋಪಕ್ಕೆ ಈ ಪ್ರಕರಣ ಇಂಬು ಕೊಟ್ಟಿದೆ.
ನನಗೆ ಎಚ್ಐವಿ-ಏಡ್ಸ್ ಇದೆ ಎಂದು ಪರೀಕ್ಷಾ ಕೇಂದ್ರವು ವರದಿ ನೀಡಿದ ನಂತರ ನನ್ನ ಜೀವನವು ಮಹತ್ತರ ಬದಲಾವಣೆ ಕಂಡಿತ್ತು. ಜೀವನವೇ ಬೇಡ ಎಂಬ ಪರಿಸ್ಥಿತಿ ನನಗಾಗಿತ್ತು. ನಮ್ಮ ಊರಿನಲ್ಲಿ ಸರಕಾರವು ನಡೆಸುತ್ತಿರುವ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ. ಅದು ಇದ್ದೂ ಇಲ್ಲದಂತಾಗಿದೆ ಎಂದು ಬಲರಾಮ್ ಆರೋಪಿಸಿದ್ದಾನೆ.
ನನಗೆ ಕಳೆದ ತಿಂಗಳು ಜ್ವರ ಬಂದಿತ್ತು. ಜತೆಗೆ ಗಂಟು ನೋವು ಕೂಡ ಇತ್ತು. ಹಾಗಾಗಿ ನಾನು ಅಲ್ಲೇ ಗ್ರಾಮದಲ್ಲಿ ಕ್ಲಿನಿಕ್ ಇಟ್ಟುಕೊಂಡಿರುವ ವೈದ್ಯನೊಬ್ಬನಲ್ಲಿಗೆ ಹೋಗಿದ್ದೆ. ಆತ ನನ್ನ ರಕ್ತ ಮಾದರಿಗಳನ್ನು ಸಂಗ್ರಹಿಸಿ, ನಿನಗೆ ಏಡ್ಸ್ ಇದೆ ಎಂದು ಹೇಳಿದ್ದ ಎಂದು ಇದೀಗ ಭೀತಿ ಮುಕ್ತನಾಗಿರುವ ವ್ಯಕ್ತಿ ಹೇಳಿದ್ದಾನೆ.
ಈ ಸಂಬಂಧ ರಕ್ತ ಪರೀಕ್ಷೆಯನ್ನು ಸರಕಾರಿ ಆಸ್ಪತ್ರೆಯಲ್ಲಿ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ. ಬಳಿಕ ಬಲರಾಮ್ ನಿರಾಳನಾಗಿದ್ದಾನೆ.
ಇದೊಂದು ದುರದೃಷ್ಟಕರ ಸಂಗತಿ. ನಾವು ನಡೆಸಿದ ಪರೀಕ್ಷೆಯ ಪ್ರಕಾರ ಆ ವ್ಯಕ್ತಿಗೆ ಎಚ್ಐವಿ ವೈರಸ್ ಸೋಂಕು ತಗುಲಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಬೀರಜ್ ಕುಮಾರ್ ಸಾಹು ತಿಳಿಸಿದ್ದಾರೆ.