ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆಗಾಗಿ ಸುಪ್ರೀಂಗೆ ಹೋಗೋದು ಬೇಡ: ಮುಸ್ಲಿಮರು (Muslims | Supreme Court | Hindu | Ayodhya dispute)
Bookmark and Share Feedback Print
 
ಅಲಹಾಬಾದ್ ಹೈಕೋರ್ಟ್ ಅಯೋಧ್ಯೆ ವಿವಾದ ತೀರ್ಪು ನೀಡಲು ಎಷ್ಟು ದಶಕಗಳನ್ನು ತೆಗೆದುಕೊಂಡಿದೆ ಎಂದು ಪ್ರತಿಯೊಬ್ಬರಿಗೂ ಗೊತ್ತು. ಅದನ್ನೇ ಗಂಭೀರವಾಗಿ ಪರಿಗಣಿಸಿರುವ ಬಹುತೇಕ ಸಾಮಾನ್ಯ ಮುಸ್ಲಿಮರು, ಪ್ರಕರಣವನ್ನು ಸುಪ್ರೀಂ ಕೋರ್ಟಿಗೆ ತೆಗೆದುಕೊಂಡು ಹೋಗುವುದು ಬೇಡ ಎಂದೇ ಹೇಳುತ್ತಿದ್ದಾರೆ.

ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ವಿವಾದದ ಕುರಿತು ಲಕ್ನೋ ತ್ರಿಸದಸ್ಯ ಪೀಠವು ಸೆಪ್ಟೆಂಬರ್ 30ರಂದು ನೀಡಿದ್ದ ತೀರ್ಪು ಆರಂಭದಲ್ಲಿ ಬಹುತೇಕ ಮುಸ್ಲಿಮರಿಗೆ ಅಸಮಾಧಾನವನ್ನೇ ತಂದಿತ್ತು. ಆಗ ಕೆಲವರು ಟೀಕಿಸಿದ್ದರು ಕೂಡ. ಆದರೆ ಈಗ ಅಭಿಪ್ರಾಯಗಳು ಬದಲಾಗುತ್ತಿವೆ. ವಾಸ್ತವತೆಯ ಚಿಂತನೆಗಳು ನಡೆಯುತ್ತಿವೆ. ಅದೇ ತೀರ್ಪನ್ನು ಮೆಚ್ಚಿಕೊಳ್ಳಲಾಗುತ್ತಿದೆ.
PTI

ತೀರ್ಪಿನ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು, ಟೀಕೆಗಳನ್ನು ಹೊಂದಿರುವ ಹೊರತಾಗಿಯೂ ತೀರ್ಪಿನ ಹಿಂದಿರುವ ಸ್ಫೂರ್ತಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಲು ಮರೆಯುವುದಿಲ್ಲ.

ಅಯೋಧ್ಯೆಯಲ್ಲಿನ ವಿವಾದಿತ 2.77 ಎಕರೆ ಪ್ರದೇಶವನ್ನು ಮೂರು ಭಾಗಗಳನ್ನಾಗಿ ಮಾಡಿ ಹಿಂದೂ ಮತ್ತು ಮುಸ್ಲಿಂ ವಾದಿಗಳಿಗೆ ಹಂಚಿ ನ್ಯಾಯಮೂರ್ತಿಗಳಾದ ಎಸ್.ಯು. ಖಾನ್, ಸುಧೀರ್ ಅಗರ್ವಾಲ್ ಮತ್ತು ಧರಂ ವೀರ್ ಶರ್ಮಾ ನೀಡಿರುವ ತೀರ್ಪಿನ ವಿರುದ್ಧ ಸುನ್ನಿ ವಕ್ಫ್ ಕೇಂದ್ರೀಯ ಮಂಡಳಿ ಸೇರಿದಂತೆ ಇತರ ವಾದಿಗಳು ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ಹೇಳಿದ್ದಾರೆ. ತಮಗೆ ಅನ್ಯಾಯವಾಗಿದೆ, ಜಾಗವನ್ನು ಭಾಗ ಮಾಡಲು ಬಿಡುವುದಿಲ್ಲ ಎಂದು ಉಭಯ ಬಣಗಳು ಹೇಳಿಕೊಳ್ಳುತ್ತಿವೆ.

ಈ ಬಗ್ಗೆ ನ್ಯಾಯಾಲಯದ ಹೊರಗಡೆ ಪ್ರಕರಣವನ್ನು ಇತ್ಯರ್ಥಗೊಳಿಸಲು ಯತ್ನಿಸುತ್ತಿರುವ ಹಶೀಮ್ ಅನ್ಸಾರಿಯವರನ್ನು ಹಲವು ಪ್ರಶಂಸಿಸಿದ್ದಾರೆ. ಇಂತಹ ಯತ್ನಗಳು ದೇಶದ ಕೋಮು ರಾಜಕೀಯವನ್ನು ನಿಷ್ಕ್ರಿಯಗೊಳಿಸಲು ಕೂಡ ಸಹಕಾರಿ ಎಂದು ಸಾಮಾನ್ಯ ಮುಸ್ಲಿಮರು ಅಭಿಪ್ರಾಯಪಟ್ಟಿದ್ದಾರೆ.

ನ್ಯಾಯಾಲಯದ ತೀರ್ಪಿಗೆ ಬಹುತೇಕ ಮುಸ್ಲಿಮರ ತಕ್ಷಣದ ಪ್ರತಿಕ್ರಿಯೆ ವ್ಯತಿರಿಕ್ತವಾಗಿತ್ತು ಎಂಬುದು ನನಗೆ ಗೊತ್ತು. ಯಾಕೆಂದರೆ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಇತ್ತೆನ್ನುವುದನ್ನು ಅಲ್ಲಗಳೆಯಲು ಯಾರಿಗೂ ಸಾಧ್ಯವಿಲ್ಲ. ಪ್ರಚೋದಿತ ಗುಂಪಿನಿಂದ 1992ರ ಡಿಸೆಂಬರ್ ಆರರಂದು ಧ್ವಂಸವಾಗುವವರೆಗೆ ಅಲ್ಲಿ ಮಸೀದಿ ಇತ್ತು ಎನ್ನುವುದು ವಾಸ್ತವ ಎಂದು ಲಕ್ನೋದ ಕಿಂಗ್ ಜಾರ್ಜ್ ಮೆಡಿಕಲ್ ಕಾಲೇಜಿನ ಹೃದಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಮನ್ಸೂರ್ ಹಸನ್ ಹೇಳುತ್ತಾರೆ.

ಆದರೆ ಪ್ರಸಕ್ತ ಸ್ಥಿತಿಯಲ್ಲಿ ಏನು ಅಗತ್ಯವಿದೆ ಎಂಬುದೂ ಅವರಿಗೆ ಗೊತ್ತು. 'ಇಲ್ಲಿ ತೀರ್ಪನ್ನು ಸರಿದೂಗಿಸಲಾಗಿದೆ ಎಂಬುದನ್ನೂ ತಳ್ಳಿ ಹಾಕಲಾಗದು. ಇವೆಲ್ಲದರ ಹೊರತಾಗಿಯೂ ನಾವು ರಾಷ್ಟ್ರದ ಬೃಹತ್ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕು' ಎಂದರು.

ಇದಕ್ಕಿಂತಲೂ ಹೆಚ್ಚು ಹೊಂದಾಣಿಕೆ ತೀರ್ಪಿನಲ್ಲಿ ಬೇಕಾಗಿತ್ತೇ ಎಂದು ಪ್ರಶ್ನಿಸುವವರು ನಿವೃತ್ತ ಮಿಲಿಟರಿ ಅಧಿಕಾರಿ ಕರ್ನಲ್ ಫಾಸಿಹ್ ಉದ್ದೀನ್ ಅಹ್ಮದ್.

ಅಯೋಧ್ಯೆಯ ಪ್ರಕರಣದ ಮುಸ್ಲಿಂ ವಾದಿ ಅನ್ಸಾರಿಯವರನ್ನು ಪ್ರಶಂಸಿಸಿರುವ ಅಹ್ಮದ್, ಈ ವಿವಾದವನ್ನು ತಹಬದಿಗೆ ತರುವ ಯತ್ನದಲ್ಲಿ ಮುಂದಡಿಯಿಟ್ಟಿರುವ ಅನಕ್ಷರಸ್ಥ ಟೇಲರ್ ಅವರಿಂದ ನಾವು ಶಾಂತಿಯ ಪಾಠವನ್ನು ಕಲಿಯಬೇಕು ಎನ್ನುತ್ತಾರೆ.

ವಿವಾದಿತ ಸ್ಥಳದಲ್ಲಿ 16ನೇ ಶತಮಾನದ ಮಸೀದಿಯನ್ನು ಮರು ಸ್ಥಾಪನೆ ಮಾಡಬೇಕೆಂದು ಒತ್ತಿ ಹೇಳುತ್ತಲೇ ಹಿಂದೂ ವಾದಿಗಳ ಜತೆ ಸೌಹಾರ್ದಯುತ ಪರಿಹಾರಕ್ಕಾಗಿ ಸೂತ್ರದ ಹುಡುಕಾಟದಲ್ಲಿರುವ ಹಿರಿಯ ಮುಸ್ಲಿಮ್ ಮುಖಂಡನನ್ನು ನಾವು ಪ್ರಶಂಸಿಸಲೇಬೇಕು ಎಂದು ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.

ಅಲಹಾಬಾದ್ ಹೈಕೋರ್ಟಿನ ಮಾಜಿ ನ್ಯಾಯಮೂರ್ತಿ ಶಾ ರಾಜಾ ಅವರಂತೂ ಪ್ರಕರಣವನ್ನು ಸುಪ್ರೀಂ ಕೋರ್ಟಿಗೆ ಕೊಂಡೊಯ್ಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳುತ್ತಾರೆ. ಅವರ ಪ್ರಕಾರ ಈ ಕಾನೂನು ಹೋರಾಟ ಮತ್ತಷ್ಟು ವರ್ಷಗಳನ್ನು ತೆಗೆದುಕೊಳ್ಳಬಹುದು.

ತೀರ್ಪಿನ ಬಗ್ಗೆ ಅಸಮಾಧಾನಗೊಳ್ಳಲು ಹಲವು ಮುಸ್ಲಿಮರು ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಿರಬಹುದು. ಆದರೆ ನ್ಯಾಯಮೂರ್ತಿ ಖಾನ್ ಅವರಿಂದ ಅನುಚಿತ ನಿರೀಕ್ಷೆಗಳನ್ನು ಬೆಳೆಸಿಕೊಳ್ಳಲು ಆರಂಭಿಸಿದ್ದರಿಂದ ಹಲವರಿಗೆ ಭ್ರಮ ನಿರಸನವಾಗಿದೆ. ಖಾನ್ ಇತರ ವಿಚಾರಗಳಿಗಿಂತ ಮೊದಲು ಅವರೊಬ್ಬ ನ್ಯಾಯಾಧೀಶರು ಎಂಬುದನ್ನು ಭ್ರಮನಿರಸನಗೊಂಡವರು ಅರಿತುಕೊಳ್ಳಬೇಕು ಎಂದು ಸ್ವತಃ ನ್ಯಾಯಾಧೀಶರಾಗಿದ್ದ ರಾಜಾ ಅಭಿಪ್ರಾಯಪಟ್ಟರು.

ಉಭಯ ಬಣಗಳಿಗೆ ಸಮಾಧಾನ ನೀಡುವ ತೀರ್ಪನ್ನು ನ್ಯಾಯಾಲಯ ನೀಡಿರುವುದರಿಂದ ನನಗೆ ಸಂತೋಷವಾಗಿದೆ. ಕನಿಷ್ಠ ಇದು ನಮ್ಮಿಂದ ಹಿಂಸಾಚಾರ ಸಂಭವಿಸದಂತೆ, ನಮ್ಮ ಜೀವನವು ಸಂಕಷ್ಟಕ್ಕೆ ಸಿಲುಕದಂತೆ ಕಾರ್ಯ ನಿರ್ವಹಿಸಿದೆ ಎಂದು 51ರ ಹರೆಯದ ಕಾರ್ಮಿಕ ಸಲೀಂ ಹೇಳುತ್ತಾರೆ.

ರಿಕ್ಷಾವಾಲಾ ಬಾಡ್ರೆ ಆಲಂ ಅವರ ಮಾತುಗಳನ್ನೇ ಕೇಳಿ. 'ನ್ಯಾಯಾಲಯದ ತೀರ್ಪಿನಿಂದಾಗಿ ಮಂದಿರ ಮತ್ತು ಮಸೀದಿಗಳಲ್ಲಿ ನೆಮ್ಮದಿ ನೆಲೆಸಿದೆ. ಇದರಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಹಾಗಾಗಿ ಸಂಬಂಧಪಟ್ಟವರು ಈ ವಿವಾದವನ್ನು ಕೂತು ಚರ್ಚೆ ನಡೆಸಿ ಪರಿಹರಿಸಿಕೊಳ್ಳಬೇಕು' ಎನ್ನುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ