ಸಿಮಿ ಮತ್ತು ಆರೆಸ್ಸೆಸ್ಸನ್ನು ಹೋಲಿಕೆ ನಡೆಸಿರುವ ರಾಹುಲ್ ಗಾಂಧಿಯವರ ಇತ್ತೀಚಿನ ಹೇಳಿಕೆಯನ್ನು ಉಲ್ಲೇಖಿಸುತ್ತಾ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ, ಒಂದು ಕಣ್ಣಿಗೆ ಸುಣ್ಣ - ಮತ್ತೊಂದು ಕಣ್ಣಿಗೆ ಬೆಣ್ಣೆ ಎಷ್ಟು ಸರಿ ಎಂದು ಪ್ರಶ್ನಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರ ಪ್ರಕಾರ ಆರೆಸ್ಸೆಸ್ ಮತ್ತು ಸಿಮಿ-- ಎರಡೂ ಮೂಲಭೂತವಾದಿ ಮತ್ತು ಮತಾಂಧ ಸಂಘಟನೆಗಳು. ಸಿಮಿ ಸಂಘಟನೆಯ ಮೇಲೆ ನಿಷೇಧ ಹೇರಿ, ಆರೆಸ್ಸೆಸ್ಸನ್ನು ಮುಕ್ತವಾಗಿ ಕಾರ್ಯಾಚರಣೆ ಮಾಡಲು ಬಿಟ್ಟಿರುವುದು ಯಾಕೆ ಎಂದು ಈಗ ರಾಹುಲ್ ಗಾಂಧಿ ಮತ್ತು ದೇಶವನ್ನು ಆಳುತ್ತಿರುವ ಅವರ ಪಕ್ಷವು ದೇಶಕ್ಕೆ ಉತ್ತರಿಸಬೇಕು ಎಂದು ಸಮಾಜವಾದಿ ಪ್ರಧಾನ ಕಾರ್ಯದರ್ಶಿ ಮೋಹನ್ ಸಿಂಗ್ ಒತ್ತಾಯಿಸಿದರು.
ತನ್ನ ಮತಾಂಧ ಮತ್ತು ಮೂಲಭೂತವಾದಿ ಸಿದ್ಧಾಂತಗಳ ಹೊರತಾಗಿಯೂ ಆರೆಸ್ಸೆಸ್ ಮುಕ್ತವಾಗಿ ಕಾರ್ಯಾಚರಿಸಲು ಸೂಕ್ತವಾಗಿದೆ ಎನ್ನುವುದು ಹೌದಾದರೆ, ಇದೇ ನೀತಿ ಸಿಮಿಗೆ ಯಾಕೆ ಅನ್ವಯವಾಗುವುದಿಲ್ಲ? ಹಾಗಿದ್ದರೆ ಸಿಮಿಯ ಮೇಲೆ ಹೇರಲಾಗಿರುವ ನಿಷೇಧವನ್ನು ತೆರವುಗೊಳಿಸಿ ಎಂದೂ ಅವರು ಸವಾಲು ಹಾಕಿದರು.
ಅದೇ ಹೊತ್ತಿಗೆ ರಾಜ್ಯ ಸರಕಾರಗಳ ಶಿಫಾರಸುಗಳಿದ್ದರೆ ಮಾತ್ರ ಯಾವುದೇ ಸಂಘಟನೆಯನ್ನು ನಿಷೇಧಿಸಲು ಸಾಧ್ಯ ಎಂಬ ಕೆಲವು ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಸಿಂಗ್ ತಳ್ಳಿ ಹಾಕಿದರು.
ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಒಂದು ಟ್ರಿಬ್ಯುನಲ್ ಇದೆ. ಇದು ಯಾವ ಸಂಘಟನೆ ನಿಷೇಧಕ್ಕೆ ಅರ್ಹವಾಗಿದೆ ಎಂಬುದನ್ನು ನಿರ್ಧರಿಸುತ್ತದೆ. ಈ ನ್ಯಾಯಾಧಿಕರಣವು ತನ್ನ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ರಾಷ್ಟ್ರದ ಭದ್ರತೆಗೆ ಭಂಗ ಬರುತ್ತಿದೆ, ಬೆದರಿಕೆ ಎಂಬ ಕಾರಣಗಳಿದ್ದಲ್ಲಿ ಅದು ಯಾವುದೇ ನಿರ್ದಿಷ್ಟ ಸಂಘಟನೆಯ ಮೇಲೆ ನಿಷೇಧ ಹೇರುವ ಹಕ್ಕನ್ನು ಹೊಂದಿರುತ್ತದೆ ಎಂದರು.
ಆದರೆ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಕಾಂಗ್ರೆಸ್ ತನ್ನ ಜನಪ್ರಿಯ, ಆದರೆ ಅಪ್ರಬುದ್ಧ ನಾಯಕರಿಂದಾದ ಸಮಸ್ಯೆಗಳನ್ನು ತೊಡೆದು ಹಾಕಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.