ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್‌ಗೇ ಇರಿಸುಮುರಿಸು ತಂದ ರಾಜ್ಯಪಾಲರ ಕ್ರಮ (Congress | Governor | Hansraj Bharadwaj | Karnataka Crisis | Trust Vote)
ಕರ್ನಾಟಕದಲ್ಲಿ ಬಿಜೆಪಿ ಸ್ವಯಂ-ನಿರ್ನಾಮವಾಗುವುದನ್ನು ನೋಡುತ್ತಾ ಸುಮ್ಮನೆ ಕುಳಿತಿರುವುದು ಬಿಟ್ಟು, ಅದಕ್ಕೆ ವಿಶ್ವಾಸಮತ ಸಾಬೀತುಪಡಿಸಲು ಅವಸರಪಟ್ಟು ಎರಡನೇ ಅವಕಾಶ ಕೊಟ್ಟ ರಾಜ್ಯಪಾಲರ ಕ್ರಮ ಇದೀಗ ಕಾಂಗ್ರೆಸ್ ಕೋರ್ ಕಮಿಟಿಯ ಕಣ್ಣು ಚುಚ್ಚಿದಂತಾಗಿದೆ.
ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡಿದ ಬಳಿಕ ವಿಶ್ವಾಸಮತ ಯಾಚನೆಗೆ ಅವಕಾಶ ಕೊಟ್ಟಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕ್ರಮವೇ ಮಂಗಳವಾರ ದೆಹಲಿಯಲ್ಲಿ ನಡೆದ ಉನ್ನತ ಸಮಿತಿಯ ಸಭೆಯಲ್ಲಿ ಪ್ರಮುಖ ಚರ್ಚೆಯ ವಿಷಯವಾಗಿತ್ತು.
ಇದೀಗ ಬಿಜೆಪಿಗೆ ಸದ್ಯದ ಸ್ಥಿತಿಯಲ್ಲಿ ಮರಳಿ ವಿಶ್ವಾಸಮತ ಸಾಬೀತುಪಡಿಸಲು ಒಳ್ಳೆಯ ಅವಕಾಶ ಕೊಟ್ಟಂತಾಗಿದೆ. ಆದರೆ ಹೈಕೋರ್ಟ್ ತೀರ್ಪು ಸ್ಪೀಕರ್ ಅವರ ಕ್ರಮ ಅಸಿಂಧು ಎಂದೇನಾದರೂ ಬಂದರೆ, ಪುನಃ ವಿಶ್ವಾಸಮತ ಸಾಬೀತುಪಡಿಸಬೇಕೇ ಎಂಬುದು ಕುತೂಹಲದ ಸಂಗತಿ. ಈ ಸಂದರ್ಭ, ರಾಜ್ಯಪಾಲರು ಮೂರನೇ ಬಾರಿ ವಿಶ್ವಾಸಮತ ಸಾಬೀತುಪಡಿಸಲು ಆದೇಶ ನೀಡಬಹುದೇ ಎಂಬುದು ಚರ್ಚೆಗೆ ಗ್ರಾಸವಾದ ಸಂಗತಿ.
ಇದೀಗ ರಾಜ್ಯಪಾಲರ ಕ್ರಮದಿಂದಾಗಿ ಕರ್ನಾಟಕ ಜನತೆಯ ಕಣ್ಣು ಕಾಂಗ್ರೆಸ್ ಮೇಲೆ ಬಿದ್ದಂತಾಗಿದೆ. ಬಿಜೆಪಿಗೆ ರಾಜ್ಯಪಾಲರ ವಜಾವನ್ನೇ ಪ್ರಮುಖವಾಗಿ ಬಿಂಬಿಸುತ್ತಾ ತನ್ನ ಆಂತರಿಕ ಬಿಕ್ಕಟ್ಟನ್ನು ಮುಚ್ಚಿಡಲು ಅವಕಾಶ ನೀಡಿದಂತಾಗಿದೆ ಎಂಬುದು ಕಾಂಗ್ರೆಸ್ ವಕ್ತಾರ ಮೋಹನ್ ಪ್ರಕಾಶ್ ನುಡಿ.
ಅದೇ ರೀತಿ, ರಾಷ್ಟ್ರಪತಿ ಆಳ್ವಿಕೆ ಹೇರಿದ ತಮ್ಮ ಕ್ರಮವನ್ನು ಸಮರ್ಥಿಸಿಕೊಳ್ಳಲೋ ಎಂಬಂತೆ ರಾಜ್ಯಪಾಲರು ಅತ್ಯಂತ ಅಪರೂಪದ ಪತ್ರಿಕಾಗೋಷ್ಠಿಯನ್ನು ಕರೆದರಾದರೂ, ಅದರಲ್ಲಿ ರಾಷ್ಟ್ರಪತಿ ಆಳ್ವಿಕೆ ವಿಷಯ ಪ್ರಸ್ತಾಪಿಸುವ ಬದಲಾಗಿ, ಮತ್ತೊಂದು ಅವಕಾಶ ನೀಡಿದ್ದೇನೆ ಎನ್ನುತ್ತಾ ಬಿಜೆಪಿ ಸರಕಾರದ ಕ್ರಮಗಳನ್ನೇ ಟೀಕಿಸುತ್ತಾ, ಕಾಂಗ್ರೆಸ್ ಮುಖಂಡರು ಮಾತನಾಡುವಂತೆ ಮಾತನಾಡಿರುವುದು ಕೂಡ ಹೈಕಮಾಂಡ್‌ಗೆ ಇರಿಸುಮುರಿಸು ಉಂಟುಮಾಡಿದೆ.