ಅಹಮದಾಬಾದ್: ನಿರೀಕ್ಷೆಯಂತೆ ಕಾಂಗ್ರೆಸ್ ಮತ್ತೆ ಮುಖಭಂಗ ಅನುಭವಿಸಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ವಿಚಾರ ಬಂದಾಗ ಈ ಹಿಂದೆ ನಡೆದಂತೆ ಪುನರಾವರ್ತನೆಯಾಗಿದೆ. ಭಾನುವಾರ ನಡೆದ ಆರು ಮಹಾನಗರ ಪಾಲಿಕೆ ಚುನಾವಣೆಗಳಲ್ಲಿ ಕೇಸರಿ ಪಕ್ಷವು ಜಯಭೇರಿ ಬಾರಿಸಿದೆ. ಇದರ ಕೀರ್ತಿಯನ್ನು ಮುಖ್ಯಮಂತ್ರಿಯವರು ಮುಸ್ಲಿಮರಿಗೆ ಅರ್ಪಿಸಿದ್ದಾರೆ.
ಅಹಮದಾಬಾದ್, ವಡೋದರಾ, ಸೂರತ್, ರಾಜ್‌ಕೋಟ್ ಮತ್ತು ಭಾವನಗರಗಳಲ್ಲಿ ಮೂರನೇ ಎರಡರಷ್ಟು ಬಹುಮತ ಬಿಜೆಪಿ ಸಿಕ್ಕಿದ್ದರೆ, ಜಾಮಾನಗರದಲ್ಲಿ ಸರಳ ಬಹುಮತ ದೊರೆತಿದೆ.
ಪಾಲಿಕೆ
ಅಹಮದಾಬಾದ್
ವಡೋದರಾ
ಸೂರತ್
ರಾಜ್‌ಕೋಟ್
ಭಾವನಗರ್
ಜಾಮಾನಗರ್
ಒಟ್ಟು ಸೀಟು
189
75
114
69
51
57
ಬಿಜೆಪಿ
149
61
98
58
41
35
ಕಾಂಗ್ರೆಸ್
37
11
14
11
10
16
ಇತರರು
3
3
2
0
0
6
ಮಹಾನಗರ ಪಾಲಿಕೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಸ್ವತಃ ತಾನೇ ಪ್ರಚಾರ ಕಣಕ್ಕೆ ಧುಮುಕಿದ್ದ ಮೋದಿ, ಬಿಜೆಪಿಯು ಈ ಪರಿಯ ಗೆಲುವು ಸಾಧಿಸಲು ಮುಸ್ಲಿಮರು ಮತ ಚಲಾಯಿಸದೇ ಇದ್ದಿದ್ದರೆ ಸಾಧ್ಯವಿರಲಿಲ್ಲ ಎಂದು ಬಣ್ಣಿಸಿದ್ದಾರೆ.
ಶೇ.30ಕ್ಕಿಂತಲೂ ಹೆಚ್ಚು ಮುಸ್ಲಿಮರು ನಮಗೆ ಮತ ಚಲಾಯಿಸಿದ್ದಾರೆ. ಅದೇ ಕಾರಣದಿಂದ ನಾವು ಶೇ.80ಕ್ಕೂ ಹೆಚ್ಚು ಪಾಲಿನ ಮತಗಳನ್ನು ಪಡೆಯಲು ಸಾಧ್ಯವಾಯಿತು. ಇದರೊಂದಿಗೆ ಗುಜರಾತ್ ಮುಸ್ಲಿಮರ ಬಗ್ಗೆ ಇದ್ದ ಎಲ್ಲಾ ರೀತಿಯ ಕಟ್ಟುಕತೆಗಳು ಅರ್ಥ ಕಳೆದುಕೊಂಡಿವೆ ಎಂದು ವಿಜಯೋತ್ಸವ ರ‌್ಯಾಲಿಯಲ್ಲಿ ಮಾತನಾಡುತ್ತಾ ಮೋದಿ ತಿಳಿಸಿದರು.
ಮುಸ್ಲಿಮರ ಹೃದಯ ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿಯಾಗಿ ದಾಖಲೆಯ ಒಂಬತ್ತು ವರ್ಷವನ್ನು ಪೂರೈಸಿದ ಮೋದಿ, ಬಿಜೆಪಿ ಕಣಕ್ಕಿಳಿಸಿದ್ದ ಮುಸ್ಲಿಂ ಅಭ್ಯರ್ಥಿಗಳ ಸೋಲಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಆರು ಪಾಲಿಕೆ ಚುನಾವಣೆಗಳಲ್ಲಿ ಬಿಜೆಪಿಯು 11 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅವರೆಲ್ಲರೂ ಸೋತಿದ್ದಾರೆ.
ಮುಂದಿನ ಐದು ವರ್ಷಗಳ ಕಾಲ ನಾವು ಜನರಿಗಾಗಿ ಕೆಲಸ ಮಾಡುತ್ತೇವೆ. ನಾವು ಗೆದ್ದಿರುವ ಅಥವಾ ಸೋತಿರುವ ಕ್ಷೇತ್ರಗಳೆಂದು ತಾರತಮ್ಯ ಮಾಡದೆ ಪ್ರತಿಯೊಬ್ಬರು ಪ್ರಗತಿಗಾಗಿ ಶ್ರಮಿಸುತ್ತೇವೆ ಎಂದರು.
ಬಿಜೆಪಿಯು ಅಮೋಘ ಜಯ ಗಳಿಸಿರುವುದಕ್ಕೆ ವರಿಷ್ಠ ಎಲ್.ಕೆ. ಅಡ್ವಾಣಿಯವರು ಮೋದಿಯವರನ್ನು ಅಭಿನಂದಿಸಿದ್ದಾರೆ.
ಈ ಬಾರಿ ಪ್ರಗತಿಯ ಜತೆ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಜನತೆಯ ಮುಂದಿಟ್ಟಿದ್ದ ಪ್ರಮುಖ ವಿಚಾರ ಕೇಂದ್ರದ ಪಕ್ಷಪಾತ. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಶಂಕಿತ ಭಯೋತ್ಪಾದಕ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣದಲ್ಲಿ ಸಿಬಿಐಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ, ರಾಜ್ಯದ ಪ್ರಗತಿಯನ್ನು ಕಾಂಗ್ರೆಸ್ ಸಹಿಸುತ್ತಿಲ್ಲ ಎಂದು ಟೀಕಾ ಪ್ರಹಾರ ಮಾಡಲಾಗಿತ್ತು.
ಸಿಬಿಐಯಿಂದ ಕಾಂಗ್ರೆಸ್‌ಗೆ ಚುನಾವಣೆಯನ್ನು ಗೆಲ್ಲಿಸಿಕೊಡಲು ಸಾಧ್ಯವಿಲ್ಲ. ಕಾಂಗ್ರೆಸ್‌ಗೆ ಜನತೆ ಸ್ಪಷ್ಟವಾದ ಉತ್ತರ ನೀಡಬೇಕು ಎಂದು ಮೋದಿ ಕರೆ ನೀಡಿದ್ದರು. ಬಹುತೇಕ ಜನತೆ ಸ್ಪಷ್ಟ ಉತ್ತರವನ್ನೇ ನೀಡಿದ್ದಾರೆ.