ಪ್ರಸಕ್ತ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳಿಗೆ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರೇ ಕಾರಣ ಎಂದು ದೂರಿರುವ ಬಿಜೆಪಿ ನಾಯಕರ ನಿಯೋಗ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ್ದು, ರಾಜ್ಯಪಾಲರನ್ನು ವಾಪಸ್ ಪಡೆದುಕೊಳ್ಳುವಂತೆ ಒತ್ತಾಯಿಸಲಾಗಿದೆ.
ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿ, ಲೋಕಸಭೆಯ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು ಮುಂತಾದ ಹಿರಿಯ ನಾಯಕರು ಇಂದು ಬೆಳಿಗ್ಗೆ ಪ್ರಧಾನ ಮಂತ್ರಿಯವರ 7 ರೇಸ್ ಕೋರ್ಟ್ ರೋಡ್‌ನಲ್ಲಿನ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ, ಭಾರದ್ವಾಜ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ಆಗ್ರಹಿಸಿದರು.
ರಾಜ್ಯಪಾಲರು ಪಕ್ಷಪಾತ ಮಾಡುತ್ತಿದ್ದು, ಅವರು ಕರ್ನಾಟಕದ ಪ್ರತಿಪಕ್ಷದ ನಾಯಕನಂತೆ ವರ್ತಿಸುತ್ತಿದ್ದಾರೆ. ತನ್ನ ಸಂವಿಧಾನಿಕ ಜವಾಬ್ದಾರಿಗಳನ್ನು ಅವರು ಸಮರ್ಥವಾಗಿ ನಿರ್ವಹಿಸುತ್ತಿಲ್ಲ ಎಂದೂ ಬಿಜೆಪಿ ಆರೋಪಿಸಿದೆ.
ರಾಜ್ಯದಲ್ಲಿ ಉಂಟಾಗಿರುವ ಪ್ರಸಕ್ತ ಸ್ಥಿತಿಗೆ ರಾಜ್ಯಪಾಲರೇ ಹೊಣೆ. ಅವರಿಂದಾಗಿಯೇ ಇಂತಹ ಪರಿಸ್ಥಿತಿ ಉದ್ಭವಿಸಿದೆ. ಇದು ವ್ಯವಸ್ಥಿತ ಪಿತೂರಿ. ಹಾಗಾಗಿ ರಾಜ್ಯಪಾಲರನ್ನು ತಕ್ಷಣವೇ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಅಡ್ವಾಣಿಯಾದಿಯಾಗಿ ಹಿರಿಯ ನಾಯಕರು ಪ್ರಧಾನಿ ಸಿಂಗ್ ಅವರಿಗೆ ಮನವಿ ಮಾಡಿದರು.
ಪ್ರಧಾನಿ ಭೇಟಿಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೇಟ್ಲಿ, ಸ್ಪೀಕರ್ ಅವರ ಅಧಿಕಾರದಲ್ಲಿ ಮಧ್ಯಪ್ರವೇಶ ಮಾಡಿರುವ ರಾಜ್ಯಪಾಲರನ್ನು ತಕ್ಷಣವೇ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ತಾವು ಮನವಿ ಮಾಡಿರುವುದಾಗಿ ಹೇಳಿದರು.
ರಾಜ್ಯಪಾಲರು ರಾಜಭವನವನ್ನು ರಾಜಕೀಯ ಚಟುವಟಿಕೆಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಕುದುರೆ ವ್ಯಾಪಾರ ಮಾಡುವ ಕೇಂದ್ರವನ್ನಾಗಿ ರಾಜಭವನವನ್ನು ಮಾರ್ಪಡಿಸಲಾಗಿದೆ. ಹಾಗಾಗಿ ಅವರನ್ನು ತಕ್ಷಣವೇ ವಾಪಸ್ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
28 ತಿಂಗಳ ಬಿಜೆಪಿ ಸರಕಾರದಿಂದ ಬಂಡಾಯ ಮತ್ತು ಪಕ್ಷೇತರ ಶಾಸಕರು ಬೆಂಬಲ ಹಿಂತೆಗೆದುಕೊಂಡ ನಂತರ ಈ ಬೆಳವಣಿಗೆಗಳು ನಡೆದಿವೆ. ಇವರನ್ನು ಸ್ಪೀಕರ್ ಅನರ್ಹಗೊಳಿಸಿದ ನಂತರ ಬಿಜೆಪಿ ಸರಕಾರವು ಬಹುಮತ ಸಾಬೀತುಪಡಿಸಿತ್ತಾದರೂ, ಅದು ಸಮರ್ಪಕವಾಗಿಲ್ಲ ಎಂಬ ಹಿನ್ನೆಲೆಯಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದರು.
ಇದರ ಬೆನ್ನಿಗೆ ಮತ್ತೊಮ್ಮೆ ವಿಶ್ವಾಸ ಮತ ಯಾಚಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ರಾಜ್ಯಪಾಲ ಸೂಚಿಸಿದ್ದರು. ಅದರಂತೆ ಎರಡನೇ ಬಾರಿ ಬಹುಮತ ಸಾಬೀತಿಗೆ ಬಿಜೆಪಿ ನಿರ್ಧರಿಸಿದೆ. ಇಂತಹ ಗೊಂದಲದ ನಿಲುವುಗಳನ್ನು ಹೊಂದಿರುವ ರಾಜ್ಯಪಾಲರ ವಿರುದ್ಧ ಈಗ ಬಿಜೆಪಿಯು ಪ್ರಧಾನಿಯವರಿಗೆ ನೇರವಾಗಿ ದೂರು ನೀಡಿದೆ.