ಪ್ರಸಕ್ತ ಕರ್ನಾಟಕದಲ್ಲಿ ಉದ್ಭವಿಸಿರುವ ರಾಜಕೀಯ ಬಿಕ್ಕಟ್ಟಿಗೆ ಕೇಂದ್ರದಲ್ಲಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವೇ ನೇರ ಹೊಣೆ ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ತನ್ನ ವಿರೋಧಿ ಪಕ್ಷಗಳ ಆಡಳಿತದಲ್ಲಿರುವ ರಾಜ್ಯ ಸರಕಾರಗಳನ್ನು ಬೆದರಿಸಲು ಕಾಂಗ್ರೆಸ್ ಪಕ್ಷವು ಕೇಂದ್ರ ಸರಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗುಜರಾತ್ ಪಾಲಿಕೆ ಚುನಾವಣೆಗಳಲ್ಲಿ ಕಾಂಗ್ರೆಸ್ಸನ್ನು ಭಾರೀ ಅಂತರದಿಂದ ಬಗ್ಗುಬಡಿದ ಬಳಿಕ ಮಾತನಾಡುತ್ತಾ ಮೋದಿ ತಿಳಿಸಿದರು.
ಚುನಾಯಿತ ಜನಪ್ರಿಯ ಸರಕಾರವನ್ನು ಅಸ್ಥಿರಗೊಳಿಸಲು ಕರ್ನಾಟಕದ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಅನಗತ್ಯ ರಾಜಕೀಯ ಸಂದಿಗ್ಧತೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ತನ್ನ ದಾಳಿ ಮುಂದುವರಿಸಿದ ಮೋದಿ, ಸರಕಾರವು ಅಕ್ಟೋಬರ್ 11ರಂದು ಈಗಾಗಲೇ ತನ್ನ ಬಹುಮತವನ್ನು ಸಾಬೀತುಪಡಿಸಿರುವುದರಿಂದ ಮತ್ತೆ ಎರಡನೇ ಬಾರಿ ಅ.14ಕ್ಕೆ ವಿಶ್ವಾಸ ಮತ ಯಾಚಿಸಬೇಕೆಂಬುದು ಅನುಚಿತ ಎಂದರು.
ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯದ ಆಟದಲ್ಲಿ ರಾಜ್ಯಪಾಲರು ಮಹತ್ವದ ಪಾತ್ರವನ್ನು ಮಾಡುತ್ತಿದ್ದಾರೆ. ಅವರು ತಾನೊಬ್ಬ ರಾಜಕೀಯ ಪಕ್ಷದವನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯದಲ್ಲಿನ ಬಿಜೆಪಿ ಸರಕಾರವನ್ನು ಉರುಳಿಸಬೇಕೆಂಬ ಏಕಮೇವ ಉದ್ದೇಶದಿಂದ ಅವರು ಹೀಗೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.
ಸಾಮಾನ್ಯ ಜನತೆಯಿಂದ ಆಯ್ಕೆಯಾದ ಬಿ.ಎಸ್. ಯಡಿಯೂರಪ್ಪನವರ ಸರಕಾರವು ಜನ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ. ಸೋಮವಾರವಷ್ಟೇ ಅವರ ಸರಕಾರವು ವಿಶ್ವಾಸ ಮತವನ್ನು ಗೆದ್ದಿದೆ. ಆದರೆ ಕಾಂಗ್ರೆಸ್ ಪಕ್ಷವು ಹೇಗಾದರೂ ಮಾಡಿ ಸರಕಾರವನ್ನು ಬೀಳಿಸಬೇಕೆಂದು ಪಣ ತೊಟ್ಟಿದೆ ಎಂದರು.
ಗುಜರಾತ್ ಸರಕಾರವನ್ನು ಮಟ್ಟ ಹಾಕಲು ಸಿಬಿಐಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವಂತೆ ಕರ್ನಾಟಕದಲ್ಲಿ ರಾಜ್ಯಪಾಲರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕಾಂಗ್ರೆಸ್ ಪಕ್ಷವನ್ನು ಮೆತ್ತಿಕೊಳ್ಳುತ್ತಿದ್ದು, ಮುಂದಿನ ನಡೆಗಳು ಕುತೂಹಲ ಮೂಡಿಸಿವೆ.