ನವದೆಹಲಿಯಲ್ಲಿ ನಡೆಯುತ್ತಿರುವ 2010ರ ಕಾಮನ್‌ವೆಲ್ತ್ ಗೇಮ್ಸ್ ಸಮಾರೋಪ ಸಮಾರಂಭದ ಸಂದರ್ಭದಲ್ಲಿ ದಾಳಿ ನಡೆಸಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್ ಇ ತೋಯ್ಬಾ ಸಂಚು ರೂಪಿಸುತ್ತಿದೆ ಎಂದು ಭಾರತೀಯ ಬೇಹುಗಾರಿಕಾ ದಳಗಳು ಹೇಳಿವೆ.
ಉಗ್ರರಿಂದ ಬೆದರಿಕೆಗಳು ಬಂದಿರುವುದರಿಂದ ಮಂಗಳವಾರದಿಂದಲೇ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಪೊಲೀಸರು ಮತ್ತು ಸೈನಿಕರನ್ನು ನಿರ್ದಿಷ್ಟ ಜಾಗಗಳಿಗೆ ನಿಯೋಜಿಸಲಾಗಿದೆ.
2008ರ ಮುಂಬೈ ದಾಳಿಯ ಸೂತ್ರಧಾರಿ ಭಯೋತ್ಪಾದಕ ಸಂಘಟನೆಯಾದ ಲಷ್ಕರ್ ಇ ತೋಯ್ಬಾವೇ ಇದರ ಹಿಂದಿದೆ ಎಂದು ಬೇಹುಗಾರಿಕಾ ದಳಗಳು ಅಂದಾಜಿಸಿವೆ. ದೆಹಲಿಯಲ್ಲಿನ ಗೇಮ್ಸ್‌ನಲ್ಲಿ ಅಡ್ಡಾಡುತ್ತಿರುವ 64,000ಕ್ಕೂ ಹೆಚ್ಚು ಮಂದಿಯನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಲ್‌ಖೈದಾ ಮತ್ತು ತಾಲಿಬಾನ್ ಜತೆ ಸಂಬಂಧಗಳನ್ನು ಹೊಂದಿರುವ ಲಷ್ಕರ್ ದೆಹಲಿಯಲ್ಲಿ ಈಗಾಗಲೇ ತನ್ನ ಕೆಲವು ಕಾರ್ಯಕರ್ತರನ್ನು ಹೊಂದಿದೆ. ದಾಳಿಗಾಗಿ ರೂಪುರೇಷೆಗಳನ್ನು ಸಿದ್ಧ ಪಡಿಸಿದೆ ಎಂದು ಹೇಳಲಾಗಿದೆ.
ಇಲ್ಲಿ ಪ್ರಮುಖ ಕಳವಳ ಹುಟ್ಟಿಕೊಂಡಿರುವುದು ಹೆಹಲಿ ಮೆಟ್ರೋ. ಗೇಮ್ಸ್ ಕ್ರೀಡಾಂಗಣಗಳಿಗೆ ಹೋಗುವ ಕ್ರೀಡಾಭಿಮಾನಿಗಳು ಮೆಟ್ರೋ ರೈಲು ಮೂಲಕ ಸಾಗಬೇಕೆಂದು ಸಲಹೆ ಮಾಡಿರುವುದರಿಂದ ಉಗ್ರರು ಇದನ್ನೇ ಗುರಿ ಮಾಡುವ ಸಾಧ್ಯತೆಗಳಿವೆ.
ದೆಹಲಿಗೆ ಕಳ್ಳಸಾಗಾಟ ಮಾಡುತ್ತಿದ್ದ 50 ಕೆ.ಜಿ. ಸ್ಫೋಟಕಗಳನ್ನು ಭಾರತೀಯ ಸೇನೆಯು ಎರಡು ದಿನಗಳ ಹಿಂದೆ ವಶಪಡಿಸಿಕೊಂಡ ನಂತರ ಲಷ್ಕರ್ ಇ ತೋಯ್ಬಾ ರೂಪಿಸಿದ್ದ ಸಂಚು ಬಹಿರಂಗವಾಗಿತ್ತು. ದಾಳಿಗೆ ಬಳಸಲು ಈ ಸ್ಫೋಟಕಗಳನ್ನು ಸಾಗಿಸಲಾಗುತ್ತಿತ್ತು ಎಂದು ಪೊಲೀಸ್ ಮೂಲಗಳು ಹೇಳಿವೆ.
ಜಮ್ಮು-ಕಾಶ್ಮೀರದಿಂದ ದೆಹಲಿಗೆ ಬರುತ್ತಿದ್ದ ಬಸ್ಸುಗಳ ಪ್ರಯಾಣಿಕರ ಲಗೇಜ್ ಸಾಲಿನಲ್ಲಿ ಆಪಲ್ ಪೆಟ್ಟಿಗೆಗಳ ಒಳಗೆ ಸ್ಫೋಟಕಗಳಿದ್ದ ಎರಡು ಪೆಟ್ಟಿಗೆಗಳನ್ನು ಅಡಗಿಸಿ ಇಡಲಾಗಿತ್ತು. ಇದನ್ನು ಸೇನೆಯ ಬೇಹುಗಾರಿಕಾ ದಳವು ಪತ್ತೆ ಹಚ್ಚಿತ್ತು.