ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ವಿವಾದ; ಕಲಾಂ, ಶ್ರೀಶ್ರೀ ರವಿಶಂಕರ್ ಸಂಧಾನ
(Nirmohi Akhara | Ayodhya title suit | APJ Abdul Kalam | Sri Sri Ravi Shankar)
ಬಾಬಾ ರಾಮ್‌ದೇವ್, ಶ್ರೀ ಶ್ರೀ ರವಿಶಂಕರ್ ಮತ್ತು ಮುರಾರಿ ಬಾಪು ಅವರಂತಹ ಹಿಂದೂ ಧಾರ್ಮಿಕ ಮುಖಂಡರ ಜತೆ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಸಂಸ್ಥೆ ದಾರುಲ್ ಉಲೂಮ್ ದಿಯೋಬಂದ್, ಜಮಾತ್ ಉಲೇಮಾ ಹಿಂದ್ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಮುಂತಾದವರು ಅಯೋಧ್ಯೆ ವಿವಾದದ ಕುರಿತು ಸಂಧಾನಕ್ಕೆ ಮುಂದಾಗಬೇಕು ಎಂದು ನಿರ್ಮೋಹಿ ಅಖಾಡ ಅಭಿಪ್ರಾಯಪಟ್ಟಿದೆ.
ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಿದ್ದ ಅಯೋಧ್ಯೆ ಒಡೆತನ ಪ್ರಕರಣದ ಪ್ರಮುಖ ವಾದಿಗಳಲ್ಲೊಂದಾದ ನಿರ್ಮೋಹಿ ಅಖಾಡವು, ತಾನು ಸೌಹಾರ್ದಯುತ ಪರಿಹಾರಕ್ಕೆ ಸಿದ್ಧವಾಗಿರುವುದಾಗಿ ಸ್ಪಷ್ಟಪಡಿಸಿದೆ.
ನಿರ್ಮೋಹಿ ಅಖಾಡದ ಮುಖ್ಯಸ್ಥ ಮಹಾಂತ ಭಾಸ್ಕರ್ ದಾಸ್ ಅವರ ವಿಶೇಷ ಪ್ರತಿನಿಧಿಯಾಗಿ ಮಾತನಾಡುತ್ತಿದ್ದ ಪೂಜಾರಿ ರಾಮ್ ದಾಸ್, ಅಯೋಧ್ಯೆಯಿಂದ ನಾವು ಶಾಂತಿಯ ಧೂತನಿಗೆ ಚಾಲನೆ ನೀಡಿದ್ದೇವೆ; ಇದನ್ನು ರಕ್ಷಿಸುವುದು ಮತ್ತು ದೇಶದಾದ್ಯಂತ ಹಬ್ಬಿಸುವ ಜವಾಬ್ದಾರಿ ತಮ್ಮ ಸಮಾಜದಲ್ಲಿ ಜವಾಬ್ದಾರಿಯನ್ನು ಹೊಂದಿರುವ ವ್ಯಕ್ತಿಗಳಿಗೆ ಸೇರಿದ್ದು ಎಂದರು.
ಅಬ್ದುಲ್ ಕಲಾಂ, ದಿಯೋಬಂದ್‌ನ ದಾರುಲ್ ಉಲೂಮ್, ಮುಸ್ಲಿಂ ಉಲೇಮಾಗಳ ರಾಷ್ಟ್ರೀಯ ಸಂಘಟನೆ ಜಮಾತ್ ಉಲೇಮಾ ಹಿಂದ್ ಮುಂತಾದವರು ಶಾಂತಿಯುತ ಮಾತುಕತೆಯ ಪರಿಹಾರಕ್ಕೆ ಮುಂದಾಗಬೇಕು ಎಂದ ಪೂಜಾರಿ, ಭಾರತದಲ್ಲಿ ಶಾಂತಿ ನೆಲೆಗೊಳಿಸುವ ಜಂಟಿ ಜವಾಬ್ದಾರಿ ನಮ್ಮದು ಎಂದರು.
ಹಾಗಾಗಿ ಮುಸ್ಲಿಂ ಹಾಗೂ ಹಿಂದೂ ಸಮುದಾಯದ ಬಾಬ್ ರಾಮ್‌ದೇವ್, ಶ್ರೀ ಶ್ರೀ ರವಿಶಂಕರ್ ಮತ್ತು ಮುರಾರಿ ಬಾಪು ಮುಂತಾದವರು ಕೈ ಜೋಡಿಸಬೇಕು. ಅವರು ತಮ್ಮ ಸಮುದಾಯಗಳಲ್ಲಿ ಸಾಕಷ್ಟು ಹಿಂಬಾಲಕರನ್ನು ಹೊಂದಿದ್ದಾರೆ. ಅಯೋಧ್ಯೆ ವಿವಾದವನ್ನು ಪರಿಹರಿಸಲು ಅವರಿಂದ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಅಯೋಧ್ಯೆ ವಿವಾದವನ್ನು ಮಾತುಕತೆಯ ಮೂಲಕ ಪರಿಹರಿಸಲು ಯಾವ ರೂಪುರೇಷೆಗಳ ಪ್ರಸ್ತಾವನೆಗಳು ನಿಮ್ಮ ಮುಂದಿವೆ ಎಂದಾಗ ಉತ್ತರಿಸಿದ ಪೂಜಾರಿ, ಈ ಬಗ್ಗೆ ಇನ್ನಷ್ಟೇ ಯೋಜನೆಗಳು ಸಿದ್ಧಗೊಳ್ಳಬೇಕಿದೆ ಮತ್ತು ಚರ್ಚೆಗಳು ನಡೆಯಬೇಕಿದೆ ಎಂದರು.
ಬುದ್ಧಿವಂತರು ಒಂದೆಡೆ ಸೇರಿದರೆ ರೂಪುರೇಷೆಗಳು ಕೂಡ ಉನ್ನತ ಮಟ್ಟದಲ್ಲೇ ಹೊರ ಬೀಳುತ್ತವೆ. ಇವರು ಭಾರತದ ಹಿಂದೂ ಮತ್ತು ಮುಸ್ಲಿಂ ಭ್ರಾತೃತ್ವ ಮತ್ತು ಶಾಂತಿ ನೆಲೆಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ಆಶಾವಾದ ವ್ಯಕ್ತಪಡಿಸಿದರು.