ಭಾರತ ಮತ್ತು ಪಾಕಿಸ್ತಾನಗಳ ನಡುವೆ ಈ ವರ್ಷ ದ್ವಿಪಕ್ಷೀಯ ಮಾತುಕತೆಗಳು ನಡೆಯುವುದು ಕಷ್ಟ ಎಂದು ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸುಳಿವು ನೀಡಿದ್ದಾರೆ.
ಸಂಪಾದಕರುಗಳ ಜತೆ ಸಂವಾದ ನಡೆಸುತ್ತಿದ್ದ ಕೃಷ್ಣ, ಮುಂದಿನ ದಿನಗಳು ಬಿಡುವಿಲ್ಲದೇ ಇರುವುದರಿಂದ ಮಾತುಕತೆಗೆ ದಿನ ಹೊಂದಾಣಿಕೆ ಮಾಡುವುದು ಕಷ್ಟ ಎಂದರು.
ಜುಲೈಯಲ್ಲಿ ಇಸ್ಲಾಮಾಬಾದಿನಲ್ಲಿ ಭಾರತ ಮತ್ತು ಪಾಕಿಸ್ತಾನ ವಿದೇಶಾಂಗ ಸಚಿವರುಗಳು ಭೇಟಿಯಾದ ಸಂದರ್ಭದಲ್ಲಿ, ತಾನು ಇದೇ ವರ್ಷಾಂತ್ಯದಲ್ಲಿ ನವದೆಹಲಿಗೆ ಭೇಟಿ ನೀಡುವುದಾಗಿ ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಹೇಳಿದ್ದರು.
ಈ ಬಗ್ಗೆ ಮಾತನಾಡಿರುವ ಕೃಷ್ಣ, ನಾನು ಖುರೇಷಿಯವರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದೇನೆ. ಈ ದಿನಾಂಕಗಳನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ನಿಗದಿಪಡಿಸಲಾಗುತ್ತದೆ ಎಂದರು.
ಮಾತು ಮುಂದುವರಿಸಿದ ಸಚಿವರು, ಭಾರತದ ರಾಜತಾಂತ್ರಿಕ ಕ್ಯಾಲೆಂಡರಿನಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಬಿಡುವು ಹೊಂದಿಲ್ಲ ಎಂದು ಹೇಳಿದರು.
ನವೆಂಬರಿನಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ, ನಂತರ ಫ್ರಾನ್ಸ್ ಅಧ್ಯಕ್ಷ ನಿಕೋಲಾಸ್ ಸರ್ಕೋಜಿ ಹಾಗೂ ರಷ್ಯಾ ಅಧ್ಯಕ್ಷ ಡಿಮಿಟ್ರಿ ಮೆಡ್ವೆದೇವ್ ಅವರು ಭಾರತ ಪ್ರವಾಸ ಮಾಡಲಿದ್ದಾರೆ.
ಪಾಕಿಸ್ತಾನ ಭೇಟಿಯ ಸಂದರ್ಭದಲ್ಲಿ ಆ ದೇಶದ ವರ್ತನೆಯಿಂದ ತೀವ್ರ ಅಸಮಾಧಾನಗೊಂಡಿದ್ದ ಭಾರತವು, ಇತ್ತೀಚೆಗಷ್ಟೇ ಅಮೆರಿಕಾದಲ್ಲಿ ನಡೆದ ವಿಶ್ವಸಂಸ್ಥೆಯ ಅಧಿವೇಶನದಲ್ಲೂ ಇದನ್ನು ಮುಂದುವರಿಸಿತ್ತು. ಪಾಕ್ ತನ್ನ ಉದ್ಧಟತನದ ವರ್ತನೆಯನ್ನು ಮುಂದುವರಿಸಿರುವುದನ್ನು ತೀವ್ರವಾಗಿ ಖಂಡಿಸಿತ್ತು. ಈ ಸಂದರ್ಭದಲ್ಲಿ ಪಾಕ್ ವಿದೇಶಾಂಗ ಸಚಿವರನ್ನು ಭೇಟಿ ಮಾಡುವ ಅವಕಾಶವನ್ನು ಕೂಡ ಭಾರತ ನಿರಾಕರಿಸಿತ್ತು.
ಅಲ್ಲದೆ ವಿಶ್ವಸಂಸ್ಥೆ ಮತ್ತಿತರ ವೇದಿಕೆಗಳಲ್ಲಿ ಪಾಕ್ ಮತ್ತು ಭಾರತಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದವು. ಪಾಕಿಸ್ತಾನವು ಮತ್ತೆ ಕಾಶ್ಮೀರ ವಿಚಾರವನ್ನು ಸಿಕ್ಕ ಸಿಕ್ಕಲ್ಲಿ ಪ್ರಸ್ತಾಪ ಮಾಡಿದ್ದು, ಇದರಿಂದ ಭಾರತವು ತೀವ್ರ ಅಸಮಾಧಾನಕ್ಕೊಳಗಾಗಿತ್ತು.