ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರ ಕಳೆದುಕೊಳ್ಳಲು ನೆಹರೂ ಕಾರಣ: ಸುಬ್ರಮಣ್ಯನ್ (India | Pakistan | China | Subramanian Swamy)
Bookmark and Share Feedback Print
 
ಪಾಕಿಸ್ತಾನ ಮತ್ತು ಚೀನಾಗಳು ವಶಪಡಿಸಿಕೊಂಡಿರುವ ಭೂ ಪ್ರದೇಶಗಳನ್ನು ಭಾರತವು ಮರಳಿ ಪಡೆಯಲು ಯತ್ನಿಸಬೇಕು ಎಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ಒತ್ತಾಯಿಸಿದ್ದಾರೆ.

ಹಿಮಾಚಲ ವಿಶ್ವವಿದ್ಯಾಲಯವು ಆಯೋಜಿಸಿದ್ದ 'ಕಾಶ್ಮೀರ ಸಮಸ್ಯೆ ಮತ್ತು ಪರಿಹಾರಗಳು' ವಿಚಾರಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಕಾಶ್ಮೀರ ಸಮಸ್ಯೆ ಆರಂಭವಾದುದು ಜವಾಹರಲಾಲ್ ನೆಹರೂ ಪ್ರಧಾನ ಮಂತ್ರಿಯಾಗಿದ್ದಾಗ; ಪಾಕಿಸ್ತಾನದ ಪಡೆಗಳನ್ನು ಭಾರತದ ಪಡೆಗಳು ಹಿಮ್ಮೆಟ್ಟಿಸುತ್ತಿದ್ದ ಸಂದರ್ಭದಲ್ಲಿ ನೆಹರೂ ಈ ವಿಚಾರವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿದ್ದರು ಎಂದರು.
PR

ಶೇಖ್ ಅಬ್ದುಲ್ಲಾ ಅವರ ಸಲಹೆಯಂತೆ ನೆಹರೂ ಅವರು ಕದನ ವಿರಾಮ ಘೋಷಿಸಿದ್ದೇ ತಪ್ಪು. ಅದೇ ಕಾರಣದಿಂದಾಗಿ ಭಾರತವು ತನ್ನ ಭೂ ಪ್ರದೇಶವನ್ನು ಕಳೆದುಕೊಳ್ಳುವಂತಾಯಿತು. ಅದರ ಬದಲು ಪಾಕ್ ಸೇನೆಯನ್ನು ಹಿಮ್ಮೆಟ್ಟಿಸುವ ಕಾರ್ಯವನ್ನು ಮುಂದುವರಿಸಿದ್ದರೆ ನಮ್ಮ ಭೂ ಪ್ರದೇಶ ನಮಗೇ ಸಿಗುತ್ತಿತ್ತು ಎಂದು ಸ್ವಾಮಿ ಅಭಿಪ್ರಾಯಪಟ್ಟರು.

ಕೊನೆಗೂ ನಾವು ನಮ್ಮ ಭೂಮಿಯನ್ನು (PoK - ಪಾಕ್ ಆಕ್ರಮಿತ ಕಾಶ್ಮೀರ) ಕಳೆದುಕೊಂಡೆವು. ಅದು ಪಾಕಿಸ್ತಾನ ಸೇರಿತು. ಆದರೆ ಈ ವಿವಾದವಿನ್ನೂ ಪರಿಹಾರವಾಗದೆ ಹಾಗೆಯೇ ಉಳಿದುಕೊಂಡಿದೆ ಎಂದ ಕೇಂದ್ರದ ಮಾಜಿ ಕಾನೂನು ಸಚಿವ, ಚೀನಾ ಮತ್ತು ಪಾಕಿಸ್ತಾನಗಳು ವಶಪಡಿಸಿಕೊಂಡಿರುವ ಪ್ರದೇಶಗಳನ್ನು ಮರಳಿ ಪಡೆಯಲು ಭಾರತ ಯತ್ನಿಸಬೇಕು ಎಂದು ಸಲಹೆ ನೀಡಿದರು.

ಈ ವಿಚಾರವನ್ನು ನಾವು ವಿಶ್ವಸಂಸ್ಥೆಯಿಂದ ಹಿಂದಕ್ಕೆ ಪಡೆಯಬೇಕು ಮತ್ತು ಪಾಕಿಸ್ತಾನದ ಜತೆ ಇದನ್ನು ಚರ್ಚಿಸುವುದನ್ನು ನಿಲ್ಲಿಸಬೇಕು. ಪ್ರಸಕ್ತ ನಮ್ಮ ಮುಂದಿರುವ ಪ್ರಮುಖ ವಿಚಾರ ಪಾಕ್ ಮತ್ತು ಚೀನಾ ಆಕ್ರಮಿಸಿಕೊಂಡಿರುವ ಭೂ ಪ್ರದೇಶಗಳನ್ನು ಭಾರತವು ಮರಳಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಎಂದರು.

ಈ ವಿಚಾರಗೋಷ್ಠಿಯಲ್ಲಿ ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭಾ ಸದಸ್ಯ ಭಗತ್ ಸಿಂಗ್ ಕೋಶಿಯಾರಿ ಕೂಡ ಭಾಗವಹಿಸಿದ್ದರು.

ಕಾಶ್ಮೀರ ಸಮಸ್ಯೆ ಸೃಷ್ಟಿಯಾದದ್ದು ಮತ್ತು ಮುಂದುವರಿಯುವಂತೆ ನೋಡಿಕೊಂಡದ್ದು ಎರಡೂ ರಾಷ್ಟ್ರಗಳ ರಾಜಕಾರಣಿಗಳು ಎಂದು ಅಭಿಪ್ರಾಯಪಟ್ಟಿರುವ ಭಗತ್ ಸಿಂಗ್, ಪಾಕ್ ಮತ್ತು ಭಾರತದ ಜನತೆ ಜರ್ಮನಿಯಂತೆ ದೇಶ ಒಂದಾಗುವುದನ್ನು ಎದುರು ನೋಡುತ್ತಿದ್ದಾರೆ ಎಂದರು.

ಕಾಶ್ಮೀರ ವಿವಾದ ಉಂಟಾಗಿರುವುದು ಜಮ್ಮು-ಕಾಶ್ಮೀರದ ಶೇ.11ರಷ್ಟು ಜನರಿಂದಾಗಿ ಮಾತ್ರ. ಇದನ್ನು ಬಗೆಹರಿಸಲು ಭಾರತ ಸರಕಾರಕ್ಕೂ ಇಚ್ಛಾಶಕ್ತಿಯಿಲ್ಲ ಎಂದು ಆರೋಪಿಸಿದ ಅವರು, ಚೀನಾವನ್ನು ನಂಬಬೇಡಿ -- ಅದು ಟಿಬೆಟನ್ನು ನುಂಗಿದಂತೆ ಪಾಕಿಸ್ತಾನವನ್ನೂ ನುಂಬಬಹುದು ಎಂದು ನಾವು ಪಾಕಿಸ್ತಾನಕ್ಕೆ ಸಲಹೆ ನೀಡಬೇಕಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ