ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ಪ್ರಶ್ನೆ; ಪತ್ರಕರ್ತನಿಗೆ ಬುಖಾರಿ ಚೇಲಾಗಳಿಂದ ಹಲ್ಲೆ (Shahi Imam | Maulana Syed Ahmed Bukhari | Ayodhya verdict | Abdul Waheed Chisti)
Bookmark and Share Feedback Print
 
ಅಯೋಧ್ಯೆ ತೀರ್ಪಿನ ಕುರಿತು ಕೇಳಿದ ಪ್ರಶ್ನೆಯಿಂದ ದೆಹಲಿ ಜಾಮಾ ಮಸೀದಿಯ ಶಾಹಿ ಇಮಾಮ್ ಮೌಲಾನಾ ಸಯ್ಯದ್ ಅಹ್ಮದ್ ಬುಖಾರಿಯವರು ತಾಳ್ಮೆ ಕಳೆದುಕೊಂಡ ಪರಿಣಾಮ ಅವರ ಬೆಂಬಲಿಗರು ಮುಸ್ಲಿಂ ಪತ್ರಕರ್ತನೊಬ್ಬನನ್ನು ಥಳಿಸಿದ ಘಟನೆ ವರದಿಯಾಗಿದೆ.

ಬಾಬ್ರಿ ಮಸೀದಿ ನಿರ್ಮಾಣವಾಗುವ ಮೊದಲು ಅಯೋಧ್ಯೆಯ ವಿವಾದಿತ ಸ್ಥಳವು ಯಾರಿಗೆ ಸೇರಿತ್ತು ಎಂಬ ಕುರಿತು ಸ್ಥಳೀಯ ಉರ್ದು ಪತ್ರಿಕೆಯೊಂದರ ವರದಿಗಾರ ಮೊಹಮ್ಮದ್ ಅಬ್ದುಲ್ ವಹೀದ್ ಚಿಸ್ತಿ ಎಂಬಾತ ಪ್ರಶ್ನಿಸಿದ್ದ.

ಬಾಬ್ರಿ ಮಸೀದಿಯನ್ನು ನಿರ್ಮಿಸುವ 1528ಕ್ಕೂ ಮೊದಲಿನ ಭೂ ದಾಖಲೆಗಳಲ್ಲಿ ದಶರಥ ಚಕ್ರವರ್ತಿಯ ಹೆಸರು ಇರುವುದರ ಕುರಿತು ತಮ್ಮ ನಿಲುವೇನು ಎಂದು ಪತ್ರಕರ್ತ ಶಾಹಿ ಇಮಾಮ್ ಅವರಲ್ಲಿ ಕೇಳಿದ್ದ. ಆರಂಭದಲ್ಲಿ ಈ ಪ್ರಶ್ನೆಯನ್ನು ಬುಖಾರಿಯವರು ನಿರ್ಲಕ್ಷಿಸಿದ್ದರು. ಆದರೆ ಪತ್ರಕರ್ತ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಿದಾಗ ಬೆದರಿಕೆ ಹಾಕಲಾಯಿತು.

ಕೋಪೋದ್ರಿಕ್ತರಾದ ಬುಖಾರಿ, ಚಿಸ್ತಿ ಮುಸ್ಲಿಮರ ಹಿತಾಸಕ್ತಿಗಳ ವಿರುದ್ಧ ಕಾರ್ಯ ನಿರ್ವಹಿಸುತ್ತಿದ್ದಾನೆ ಎಂದು ಆರೋಪಿಸಿದ್ದಲ್ಲದೆ ಪತ್ರಿಕಾಗೋಷ್ಠಿಯಿಂದ ಆತನನ್ನು ಹೊರ ದಬ್ಬುವಂತೆ ಕೂಗಿದರು.

ಪತ್ರಕರ್ತ ಚಿಸ್ತಿಯನ್ನು ತಕ್ಷಣವೇ ಪತ್ರಿಕಾಗೋಷ್ಠಿಯಿಂದ ಹೊರಗೆ ಕಳುಹಿಸಲಾಯಿತು. ಬೆನ್ನಿಗೆ ಬುಖಾರಿ ಬೆಂಬಲಿಗರು ಸಾರ್ವಜನಿಕವಾಗಿಯೇ ಪತ್ರಕರ್ತನಿಗೆ ಹಿಗ್ಗಾಮುಗ್ಗಾ ಥಳಿಸಿದರು.

ಇಂತಹ ವ್ಯಕ್ತಿಗಳನ್ನು ಯಾವುದೇ ಕಾರಣಕ್ಕೂ ಮುಸ್ಲಿಮರು ಸಹಿಸಿಕೊಳ್ಳಬಾರದು ಎಂದು ಪತ್ರಿಕಾಗೋಷ್ಠಿಯಿಂದ ಹೊರಡುವ ಮೊದಲು ಬುಖಾರಿ ಆಕ್ರೋಶ ವ್ಯಕ್ತಪಡಿಸಿದರು.

ಬುಖಾರಿಯ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪತ್ರಕರ್ತ ಚಿಸ್ತಿ, ತಾನು ಅವರಿಂದ ಸ್ಪಷ್ಟನೆಯನ್ನಷ್ಟೇ ಕೇಳಿದ್ದೆ; ಆದರೆ ಅವರು ಅನವಶ್ಯಕವಾಗಿ ರೇಗಿದರು ಎಂದಿದ್ದಾನೆ.

ನಂತರ ಬುಖಾರಿ ಮತ್ತು ಅವರ ಬೆಂಬಲಿಗರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಚಿಸ್ತಿ ದೂರನ್ನೂ ದಾಖಲಿಸಿದ್ದಾನೆ.

ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್ ಅಯೋಧ್ಯೆ ಕುರಿತು ತೀರ್ಪು ನೀಡಿದ ನಂತರ ಪ್ರತಿಕ್ರಿಯೆ ನೀಡಿದ್ದ ಬುಖಾರಿ, ನ್ಯಾಯಾಲಯವು ನಂಬಿಕೆಯನ್ನು ಆಧರಿಸಿ ತೀರ್ಪು ನೀಡಿದೆ; ಇದು ಮುಸ್ಲಿಮರಿಗೆ ಸ್ವೀಕಾರಾರ್ಹವಲ್ಲ ಎಂದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ