ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನ್ಯಾಯಾಧೀಶರಾಗಲು ಕಂಪ್ಯೂಟರ್ ಜ್ಞಾನ ಅಗತ್ಯ: ಸುಪ್ರೀಂ
(Supreme Court | Mukundakam Sharma | computer knowledge | Judges)
ನ್ಯಾಯಾಧೀಶರಾಗಿ ಆಯ್ಕೆಯಾಗಬೇಕಾದರೆ ಅಭ್ಯರ್ಥಿಯು ನೇಮಕಾತಿ ಸಂದರ್ಭದಲ್ಲಿ ಕಂಪ್ಯೂಟರ್ ಜ್ಞಾನವನ್ನು ಹೊಂದಿರುವುದು ಕಡ್ಡಾಯ. ಅಂತಹ ಅರ್ಹತೆ ಇಲ್ಲದವರನ್ನು ಮುಲಾಜಿಲ್ಲದೆ ನ್ಯಾಯಾಧೀಶರಾಗಲು ಅನರ್ಹರು ಎಂದು ನಿರಾಕರಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಸಾಮಾನ್ಯ ಕಂಪ್ಯೂಟರ್ ಜ್ಞಾನ ಹೊಂದಿರದ ಹಿನ್ನೆಲೆಯಲ್ಲಿ ಸಿವಿಲ್ ನ್ಯಾಯಾಧೀಶ ಹುದ್ದೆಯ ಆಕಾಂಕ್ಷಿಯಾಗಿದ್ದ ವಿಜೇಂದ್ರ ಕುಮಾರ್ ವರ್ಮಾ ಅವರ ಅಭ್ಯರ್ಥಿತನವನ್ನು ಉತ್ತರಾಖಂಡ ಸರಕಾರವು ತಳ್ಳಿ ಹಾಕಿತ್ತು. ಇದನ್ನು ವಿಜೇಂದ್ರ ಅವರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದರು.
ಅವರ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಮುಕುಂದಕಾಮ್ ಶರ್ಮಾ ಮತ್ತು ಎ.ಆರ್. ದಾವೆ ಅವರನ್ನೊಳಗೊಂಡ ಪೀಠವು, ನ್ಯಾಯಾಮೂರ್ತಿಗಳಿಗೆ ಕಂಪ್ಯೂಟರ್ ಜ್ಞಾನ ಅತ್ಯಗತ್ಯ ಎಂದಿದೆ.
ನ್ಯಾಯಾಲಯಗಳಲ್ಲಿ ದಕ್ಷ ಕಾರ್ಯನಿರ್ವಹಣೆಗಳಿಗಾಗಿ ಇ-ಆಡಳಿತವನ್ನು ಜಾರಿಗೊಳಿಸಲು ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಹಂತ ಹಂತವಾಗಿ ಮುಂದುವರಿಯುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ನ್ಯಾಯಾಲಯಗಳು ಕಂಪ್ಯೂಟರೀಕೃತಗೊಳ್ಳಲಿವೆ. ಹಾಗಾಗಿ ಮುಂದೆ ನೇಮಕಗೊಳ್ಳುವ ನ್ಯಾಯಾಧೀಶರುಗಳು ಕಂಪ್ಯೂಟರ್ ಬಳಕೆಯ ಕುರಿತು ಸಾಮಾನ್ಯ ಜ್ಞಾನವನ್ನು ಹೊಂದುವುದು ನಿರೀಕ್ಷಿತ ಎಂದು ಪೀಠವು ಹೇಳಿದೆ.
ನ್ಯಾಯಾಧೀಶನಾಗುವವನ ಕಂಪ್ಯೂಟರ್ ಜ್ಞಾನದ ಬಗ್ಗೆ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಹಾಗಾಗಿ ನಾವು ಕಂಪ್ಯೂಟರ್ ಬಗ್ಗೆ ಕಿಂಚಿತ್ತೂ ಮಾಹಿತಿಯಿರದವರನ್ನು ನ್ಯಾಯಾಧೀಶ ಹುದ್ದೆಗೆ ಆಯ್ಕೆಗೊಳಿಸದೇ ಇರುವ ಅಭಿಪ್ರಾಯವನ್ನು ಪರಿಗಣಿಸುತ್ತೇವೆ ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ಸಿವಿಲ್ ನ್ಯಾಯಾಧೀಶರಾಗಲು ಉತ್ತರಾಖಂಡ ನ್ಯಾಯಾಂಗ ಸೇವೆಯ ರೂಲ್ 8ರ ಅಡಿಯಲ್ಲಿ ಕಾನೂನು ಪದವಿಯನ್ನು ಹೊರತುಪಡಿಸಿ ದೇವನಾಗರಿ ಲಿಪಿಯಲ್ಲಿನ ಹಿಂದಿ ಭಾಷೆಯ ಸಂಪೂರ್ಣ ಜ್ಞಾನ ಮತ್ತು ಕಂಪ್ಯೂಟರ್ ನಿರ್ವಹಣೆ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರುವುದು ಕಡ್ಡಾಯ ಎಂಬುದನ್ನು ವರ್ಮಾ ಪ್ರಶ್ನಿಸಿದ್ದರು.