ಮುಂಬೈಯ ಯುವಕನೊಬ್ಬ ಬಾಲಿವುಡ್ ನಟ ಅಮೀರ್ ಖಾನ್ ಸಾಹಸವನ್ನು ಅನುಕರಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. ಅಮೀರ್ 'ಗುಲಾಂ' ಚಿತ್ರದ ತೆರೆಯ ಮೇಲಿನ ಸಾಹಸವನ್ನು ನಿಜ ಜೀವನದಲ್ಲಿ ಮಾಡಲು ಹೋಗಿ ಈತ ಸೋತಿದ್ದಾನೆ.
'Don't try this at home' ಎಂದು ಪದೇ ಪದೇ ಮನವಿ ಮಾಡಿಕೊಂಡ ಹೊರತಾಗಿಯೂ ಹುಚ್ಚು ಅಭಿಮಾನಿಗಳು ಇಂತಹ ಯತ್ನಗಳಿಂದ ಹಿಂದಕ್ಕೆ ಸರಿಯುತ್ತಿಲ್ಲ. ಅತಿರೇಕದ ಸಿನಿಮಾಗಳು, WWEಯಂತಹ ಹಿಂಸೆ-ಸಾಹಸಗಳು ಯುವಕರನ್ನು ಹುಚ್ಚೆಬ್ಬಿಸುತ್ತಿವೆ.
PR
ಅದೇ ರೀತಿ ಅಮೀರ್ ಖಾನ್ರನ್ನು ಅನುಕರಣೆ ಮಾಡಲು ಹೋಗಿ ಬಲಿಯಾದವನ ಹೆಸರು ನೀಲೇಶ್ ಜಗತಾಪ್. 21ರ ಹರೆಯದ ಈತ ಗುಲಾಂ ಚಿತ್ರದಲ್ಲಿ ಖಾನ್ ಮಾಡಿದಂತೆ ಮಾಡಲು ಹೋಗಿದ್ದ.
ಲೋಕಲ್ ರೈಲಿನ ಎದುರು ಓಡುವುದು ನೀಲೇಶ್ ಗುರಿಯಾಗಿತ್ತು. ಇದನ್ನು ಕ್ಯಾಮರಾದ ಎದುರು ಮಾಡಿದ್ದ (?) ಅಮೀರ್ ಅಪಾರ ಮೆಚ್ಚುಗೆ ಗಳಿಸಿದ್ದರು. ಆದರೆ ಹುಚ್ಚು ಅಭಿಮಾನಿ ಮಾತ್ರ ದುರಂತ ಅಂತ್ಯ ಕಂಡಿದ್ದಾನೆ.
ಈ ಹಿಂದೆ ರೈಲಿನ ಮುಂದುಗಡೆ ಓಡಿ ನೀಲೇಶ್ ಗೆಳೆಯರಿಂದ ಬೆನ್ನು ತಟ್ಟಿಸಿಕೊಂಡಿದ್ದ. ರೈಲಿನ ಮುಂದುಗಡೆ ಸ್ವಲ್ಪ ದೂರ ಓಡಿದ ನಂತರ ಹಳಿಗಳ ಬದಿಗೆ ಹಾರಿ ತಪ್ಪಿಸಿಕೊಳ್ಳುತ್ತಿದ್ದ. ಆದರೆ ಮತ್ತೊಂದು ಯತ್ನ ಮಾಡಲು ಹೋಗಿ ಮುಂಬೈಯ ಗೋವಂಡಿ-ಚೆಂಬೂರು ನಡುವೆ ಪ್ರಾಣ ಕಳೆದುಕೊಂಡಿದ್ದಾನೆ.
ಮೂಲಗಳ ಪ್ರಕಾರ ಸ್ನೇಹಿತರ ಸಲಹೆ-ಎಚ್ಚರಿಕೆಗಳನ್ನು ಕೂಡ ನೀಲೇಶ್ ನಿರ್ಲಕ್ಷಿಸಿದ್ದ. ಆದರೆ ಈ ಬಾರಿ ಯಶಸ್ವಿಯಾಗಲಿಲ್ಲ. ವೇಗವಾಗಿ ಬರುತ್ತಿದ್ದ ರೈಲನ್ನು ಗಮನಿಸಿ ಪಕ್ಕಕ್ಕೆ ಹಾರಿದನಾದರೂ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ನವಿ ಮುಂಬೈಯ ಜೂಹಿ ನಗರದಲ್ಲಿನ ಔಷಧಿ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೀಲೇಶ್ ನಟ ಅಮೀರ್ ಅವರ ಭಯಂಕರ ಅಭಿಮಾನಿಯಾಗಿದ್ದವನು. ಅದೇ ಕಾರಣದಿಂದ ಗುಲಾಂ ಚಿತ್ರದ ದೃಶ್ಯವನ್ನು ಪುನರಾವರ್ತಿಸಲು ಯತ್ನಿಸುತ್ತಿದ್ದ.