ಬಿಹಾರ ವಿಧಾನಸಭಾ ಚುನಾವಣೆಗಳ ನಂತರ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ತನ್ನ ಮಿತ್ರಪಕ್ಷವು ಕಾಂಗ್ರೆಸ್ ಸೇರುವ ಸಾಧ್ಯತೆಗಳನ್ನು ತಳ್ಳಿ ಹಾಕಿರುವ ರಾಷ್ಟ್ರೀಯ ಜನತಾ ದಳದ ವರಿಷ್ಠ ಲಾಲೂ ಪ್ರಸಾದ್ ಯಾದವ್, ಇದು ವಿರೋಧಿಗಳು ಹರಡಿರುವ ಆಧಾರರಹಿತ ವದಂತಿ ಎಂದಿದ್ದಾರೆ.
ಲೋಕ ಜನಶಕ್ತಿ ಪಕ್ಷದ ನಾಯಕ ಪಾಸ್ವಾನ್ ನನ್ನನ್ನು ನಿರ್ಲಕ್ಷಿಸಿ, ಕೇಂದ್ರದ ಕಾಂಗ್ರೆಸ್ ಸರಕಾರ ಸೇರಿಕೊಳ್ಳಲಿದ್ದಾರೆ ಎಂಬುದು ಆಧಾರ ರಹಿತ ಮತ್ತು ರಾಜಕೀಯ ಉದ್ದೇಶಗಳನ್ನು ಸಾಧಿಸುವ ನಿಟ್ಟಿನಲ್ಲಿ ಚುನಾವಣಾ ಸಂದರ್ಭದಲ್ಲಿ ವಿರೋಧಿಗಳು ಹರಡಿಸಿರುವ ವದಂತಿಯಿದು ಎಂದು ಲಾಲೂ ಮತದಾರರಿಗೆ ಸ್ಪಷ್ಟನೆ ನೀಡಿದ್ದಾರೆ.
ಪಾಸ್ವಾನ್‌ಜೀಯವರು ಸಂಪೂರ್ಣವಾಗಿ ಬಿಹಾರ ಚುನಾವಣೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಬೇಕೆಂಬ ನಿಟ್ಟಿನಲ್ಲಿ ಮಂಡಲ ವಿರೋಧಿ ಶಕ್ತಿಗಳು ಇಂತಹ ತಂತ್ರಗಳನ್ನು ಪ್ರಯೋಗಿಸುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಆದರೆ ಈ ದುಷ್ಟ ಮಾರ್ಗ ಯಾವುದೇ ಕಾರಣಕ್ಕೂ ಯಶಸ್ವಿಯಾಗದು ಎಂದರು.
ಇದೇ ಸಂದರ್ಭದಲ್ಲಿ ತನ್ನ ಪತ್ನಿ ರಾಬ್ಡಿ ದೇವಿ ಆಳ್ವಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿಯವರಿಗೆ ತಿರುಗೇಟು ನೀಡಿರುವ ಲಾಲೂ, ಅವರ ಪಕ್ಷವು ಆರ್‌ಜೆಡಿ ಜತೆ ಆಗ ಪಾಲುದಾರಿಕೆ ಹೊಂದಿತ್ತು ಎಂಬುದನ್ನು ಮರೆತಿದ್ದಾರೆ ಎಂದು ಲೇವಡಿ ಮಾಡಿದರು.
ಬಿಹಾರದಲ್ಲಿ ಪ್ರಗತಿಯಾಗದೇ ಇದ್ದರೆ ಅದಕ್ಕೆ ಕಾಂಗ್ರೆಸ್ ಕಾರಣ. ಆದರೆ ಈಗ ಮತದಾರರ ದಿಕ್ಕು ತಪ್ಪಿಸಲು ಅದು ಆಧಾರರಹಿತ ಆರೋಪಗಳನ್ನು ಮಾಡುತ್ತಿದೆ ಎಂದರು.
ಯುಪಿಎ ಸರಕಾರಕ್ಕೆ ಕೇಂದ್ರದಲ್ಲಿ ಬೆಂಬಲ ನೀಡುವ ಮೂಲಕ 2000ದಲ್ಲಿ ಅಧಿಕಾರಕ್ಕೆ ಬರಲು ಸಹಕಾರ ನೀಡಿದ್ದ ರಾಷ್ಟ್ರೀಯ ಜನತಾ ದಳಕ್ಕೆ ಕಾಂಗ್ರೆಸ್ ದ್ರೋಹ ಬಗೆದಿದೆ. ದೆಹಲಿಯಲ್ಲಿ ಕಾಂಗ್ರೆಸ್‌ಗೆ ಕಿರೀಟ ತೊಡಿಸಿದವರು ನಾವು. ಆದರೆ ಈಗ ನಾವು ಅದರಿಂದ ಮರಳಿ ಹೊಡೆತಗಳನ್ನು ಸ್ವೀಕರಿಸುತ್ತಿದ್ದೇವೆ ಎಂದರು.