ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ಸಂಧಾನ ವಿಫಲ; ಹಿಂದೂ-ಮುಸ್ಲಿಮರು ಸುಪ್ರೀಂಗೆ (Ayodhya case | Nirmohi Akhara | Babri Masjid | Ram Janmabhoomi)
Bookmark and Share Feedback Print
 
ಅಯೋಧ್ಯೆಯ ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ವಿವಾದವು ಮಾತುಕತೆಯ ಮೂಲಕ ಬಗೆಹರಿಯಲಿದೆ ಎಂಬ ನಿರೀಕ್ಷೆಗಳು ಬಹುತೇಕ ಮಣ್ಣುಪಾಲಾಗಿವೆ. ಈ ಪ್ರಕರಣದ ಪ್ರಮುಖ ವಾದಿಗಳಾದ ನಿರ್ಮೋಹಿ ಅಖಾಡ, ಹಿಂದೂ ಮಹಾಸಭಾ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗಳು ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗುವುದಾಗಿ ಪ್ರಕಟಿಸಿವೆ.

ಅಖಿಲ ಭಾರತ ಹಿಂದೂ ಮಹಾಸಭಾ ಈ ಹಿಂದೆಯೇ ತಾನು ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ಹೇಳಿತ್ತು. ನಿರ್ಮೋಹಿ ಅಖಾಡ ಸೌಹಾರ್ದಯುತ ಪರಿಹಾರಕ್ಕೆ ಒಲವು ತೋರಿಸಿತ್ತು. ಆದರೆ ಈಗ ಅದು ಕೂಡ ತಾನು ನ್ಯಾಯಾಲಯದ ಪರಿಹಾರಕ್ಕೆ ಬದ್ಧನಾಗಿರುವುದಾಗಿ ಘೋಷಿಸಿದೆ.

ಮುಸ್ಲಿಂ ಕಾನೂನು ಮಂಡಳಿ ನಿರ್ಧಾರ...
ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ನೇರವಾಗಿ ಅಥವಾ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ ಮೂಲಕ ಸುಪ್ರೀಂ ಕೋರ್ಟಿಗೆ ಹೋಗಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ತನ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಿದೆ.

ಹೈಕೋರ್ಟ್ ತೀರ್ಪಿನ ಬಗ್ಗೆ 51 ಸದಸ್ಯರ ಸಮಿತಿಯು ಚರ್ಚೆ ನಡೆಸಿದ್ದು, ಪ್ರಸಕ್ತ ಬಂದಿರುವ ತೀರ್ಪು ಮುಸ್ಲಿಮರಿಗೆ ಅಸ್ವೀಕಾರಾರ್ಹ ಎಂಬ ನಿಲುವಿಗೆ ಬರಲಾಗಿದೆ. ತೀರ್ಪು ನೀಡುವಾಗ ಪುರಾವೆಗಳನ್ನು ಪರಿಗಣಿಸುವ ಬದಲು ನಂಬಿಕೆಯನ್ನೇ ಆಧಾರ ಸ್ತಂಭವನ್ನಾಗಿ ಮಾಡಲಾಗಿದೆ ಎಂಬುದು ಸಭೆಯಲ್ಲಿ ಚರ್ಚೆಯ ಪ್ರಮುಖ ವಿಷಯವಾಯಿತು.

ಅದೇ ಹೊತ್ತಿಗೆ ಈ ಪ್ರಕರಣದ ಹಿರಿಯ ಕಾನೂನು ಹೋರಾಟಗಾರ ಮೊಹಮ್ಮದ್ ಹಶೀಮ್ ಅನ್ಸಾರಿಯವರು ಸಂಧಾನ ಪ್ರಕ್ರಿಯೆಯಲ್ಲಿ ನಿರತರಾಗಿರುವ ಬಗ್ಗೆಯೂ ಸಮಾಲೋಚನೆ ನಡೆಸಲಾಗಿದೆ. ಅವರು ಪ್ರಕರಣದಿಂದ ಹೊರ ಹೋಗುವ ಬೆದರಿಕೆಯನ್ನೂ ಹಾಕಿದ್ದಾರೆ. ಆದರೆ ಅದು ಯಾವುದೇ ಪರಿಣಾಮ ಬೀರದು ಎಂಬ ಅಭಿಪ್ರಾಯಕ್ಕೆ ಸಭೆ ಬಂದಿದೆ.

ನಿರ್ಮೋಹಿ ಅಖಾಡದ ನಿರ್ಧಾರ...
ತೀರ್ಪು ಬಂದ ನಂತರ ಇತರ ವಾದಿಗಳ ಜತೆ ಸಮಾಲೋಚನೆಯಲ್ಲಿ ನಿರತವಾಗಿದ್ದ ನಿರ್ಮೋಹಿ ಅಖಾಡವು ತಾನು ಸುಪ್ರೀಂ ಕೋರ್ಟಿಗೆ ಹೋಗುವುದಾಗಿ ತನ್ನ ನಿರ್ಧಾರ ಪ್ರಕಟಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿರುವ ನಿರ್ಮೋಹಿ ಅಖಾಡದ ಮಹಂತಾ ಭಾಸ್ಕರ ದಾಸ್, ಮುಸ್ಲಿಮರು ತಮ್ಮ ಮಸೀದಿಯನ್ನು ಎಲ್ಲಿ ಕಟ್ಟಬೇಕೆಂದು ಬಯಸುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪಂಚ್ಕೋಸಿ ಪರಿಕ್ರಮದ ಪರಿಧಿಯ ಹೊರಗಡೆ ಮುಸ್ಲಿಮರು ಮಸೀದಿ ನಿರ್ಮಿಸುವುದಾದರೆ ನಾವು ಭೂಮಿ ಕೊಡಲು ಸಿದ್ಧರಿದ್ದೇವೆ. ಆದರೆ ರಾಮ ಜನ್ಮಭೂಮಿಯಲ್ಲಿ ಮಸೀದಿ ಕಟ್ಟಲು ಯಾವುದೇ ಕಾರಣಕ್ಕೂ ನಾವು ಒಪ್ಪಿಗೆ ಸೂಚಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಂಧಾನ ಸಮಾಲೋಚನೆಗಳು ವಿಫಲವಾಗಿವೆಯೇ ಎಂದು ಪ್ರಶ್ನಿಸಿದಾಗ, ಮಾತುಕತೆಗಳು ನಡೆಯುತ್ತಿವೆ; ಅದು ಯಾವುದೇ ಫಲಿತಾಂಶವನ್ನು ನೀಡುತ್ತದೆ ಎಂಬ ಯಾವುದೇ ಖಚಿತತೆ ನಮ್ಮಲ್ಲಿಲ್ಲ ಎಂದು ನಿರಾಸೆಯಿಂದ ನುಡಿದರು.

ಪ್ರಕರಣ ಸುಪ್ರೀಂ ಕೋರ್ಟ್ ತಲುಪಿದ ನಂತರವೂ ಮಾತುಕತೆಯ ಪ್ರಯತ್ನಗಳು ಮುಂದುವರಿಯಬೇಕು. ಮಾತುಕತೆಗಾಗಿನ ಬಾಗಿಲುಗಳು ಸದಾ ತೆರೆದಿರಬೇಕು. ನಾವಂತೂ ಭವ್ಯ ರಾಮಮಂದಿರವನ್ನು ಅಲ್ಲಿ ಹಿಂದೂಗಳಿಗಾಗಿ ನಿರ್ಮಿಸುವ ಅಚಲ ನಿರ್ಧಾರದಿಂದ ಇದ್ದೇವೆ ಎಂದು ದಾಸ್ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ