ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹುಡುಗ-ಹುಡುಗಿ ಮದುವೆ ವಯಸ್ಸನ್ನು 28-25ಕ್ಕೆ ಏರಿಸಿದ್ರೆ?! (Kerala | KSWC | National Women’s Commission | Marriage age limit)
ಹುಡುಗ-ಹುಡುಗಿ ಮದುವೆ ವಯಸ್ಸನ್ನು 28-25ಕ್ಕೆ ಏರಿಸಿದ್ರೆ?!
ತಿರುವನಂತಪುರಂ, ಸೋಮವಾರ, 18 ಅಕ್ಟೋಬರ್ 2010( 09:12 IST )
ಮದುವೆಯ ವಯಸ್ಸನ್ನು ಹೆಚ್ಚುಗೊಳಿಸಿದರೆ ಹೇಗೆ? ಹೌದು, ಅಂತಹ ಒಂದು ಪ್ರಸ್ತಾವನೆಯೊಂದನ್ನು ಸಲ್ಲಿಸುವ ಯೋಚನೆ ಈಗ ಕೇರಳ ಮಹಿಳಾ ಆಯೋಗದ ಮುಂದಿದೆ. ಹುಡುಗಿಯರ ಮದುವೆಯ ವಯಸ್ಸನ್ನು 18ರಿಂದ 25ಕ್ಕೆ ಮತ್ತು ಹುಡುಗರ ವಯಸ್ಸನ್ನು 21ರಿಂದ 28ಕ್ಕೆ ಏರಿಕೆಗೊಳಿಸಬೇಕು ಎನ್ನುವುದು ಚಿಂತನೆ.
ಇಂತಹ ಒಂದು ಯೋಚನೆ ಬರಲು ಕಾರಣವಾಗಿರುವುದು ಹೆಚ್ಚುತ್ತಿರುವ ವಿವಾಹ ವಿಚ್ಛೇದನ ಪ್ರಕರಣಗಳು. ಅದಕ್ಕಿಂತಲೂ ಮಿತಿ ಮೀರಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಇದು ಸಹಕಾರವೆನಿಸಬಹುದಾಗಿದೆ.
ಪ್ರಸಕ್ತ ಹುಡುಗಿಗೆ ಕನಿಷ್ಠ 18 ಮತ್ತು ಹುಡುಗನಿಗೆ ಕನಿಷ್ಠ 21 ವರ್ಷಗಳಾಗುವುದು ಮದುವೆಯ ಮಟ್ಟಿಗೆ ಕಡ್ಡಾಯ. ಅಷ್ಟಾಗುವ ಮೊದಲೇ ಮದುವೆಯಾದರೆ ಅದು ಕಾನೂನಿನ ಉಲ್ಲಂಘನೆಯಾಗುತ್ತದೆ. ಅಪರೂಪದಲ್ಲಿ ಹೌದೆಂದು ಸಾಬೀತಾದರೆ ಶಿಕ್ಷೆಯೂ ಆಗುತ್ತದೆ.
ಇದನ್ನು ಹೆಚ್ಚು ಮಾಡುವುದು ಒಂದು ರೀತಿಯಿಂದ ನೋಡಿದರೆ ಕಷ್ಟದ ಮಾತು. ಇಲ್ಲಿ ಧರ್ಮದ ವಿಚಾರಗಳೂ ಅಡ್ಡ ಬರಬಹುದಾಗಿದೆ. ಈಗ ಇರುವ ವಯಸ್ಸಿನ ಮಿತಿಯನ್ನು ಸಂಭಾಳಿಸುವುದೇ ಕಷ್ಟ ಎನ್ನುವ ಸ್ಥಿತಿಯಲ್ಲಿ ಮತ್ತೆ ವಯೋಮಾನವನ್ನು ಏರಿಸುವುದು ಸುಲಭ ವಿಚಾರವಲ್ಲ.
ಈ ಸಂಬಂಧ ಮುಂದಡಿಯಿಟ್ಟಿರುವುದು ಕೇರಳದ ಮಹಿಳಾ ಆಯೋಗ (ಕೆಎಸ್‌ಡಬ್ಲ್ಯೂಸಿ). ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಕೆಎಸ್‌ಡಬ್ಲ್ಯೂಸಿ ಅಧ್ಯಕ್ಷೆ ನ್ಯಾಯಮೂರ್ತಿ ಡಿ. ಶ್ರೀದೇವಿ ಅವರು ವಿವಾಹದ ಕನಿಷ್ಠ ವಯೋಮಾನವನ್ನು ಹೆಚ್ಚಳಗೊಳಿಸುವ ಪ್ರಸ್ತಾವನೆಯನ್ನು ಸಲ್ಲಿಸಲಿದ್ದಾರೆ.
ಹೆತ್ತವರು ತಮ್ಮ ಮೇಲಿನ ಜವಾಬ್ದಾರಿಯನ್ನು ಬೇಗನೆ ತೊಳೆದುಕೊಳ್ಳುವ ನಿಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹುಡುಗಿಗೆ ಹದಿನೆಂಟಾಗುತ್ತಿದ್ದಂತೆ ಮದುವೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಆದರೂ ವಿದ್ಯಾವಂತ ಹುಡುಗ - ಹುಡುಗಿಯರು ಸಾಮಾನ್ಯವಾಗಿ 25-30ರಲ್ಲಿ ಮದುವೆಯಾಗುತ್ತಿರುವುದು ಗಮನಾರ್ಹ.
ವಯೋಮಾನ ಹೆಚ್ಚಳದಿಂದ ಲಾಭಗಳು: * ಅತಿ ಕಡಿಮೆ ವಯಸ್ಸಿನಲ್ಲಿ ನಡೆಯುವ ಮದುವೆಗಳಲ್ಲಿ ಹೊಂದಾಣಿಕೆಯನ್ನು ನಿರೀಕ್ಷಿಸುವುದು ಕಷ್ಟ. ಹಾಗಾಗಿ ಮದುವೆಯ ವಯಸ್ಸನ್ನು ಏರಿಕೆ ಮಾಡಿದರೆ ವಿವಾಹ ವಿಚ್ಛೇದನಗಳು ಕಡಿಮೆಯಾಗಬಹುದು.
* ಜೀವನವೆನ್ನುವುದನ್ನು ಮದುವೆಯ ಹೊತ್ತಿಗೆ ಅರ್ಥ ಮಾಡಿಕೊಳ್ಳುವುದು ಸುಲಭ. ಹದಿಹರೆಯದ ಭಾವನೆಗಳು ವಾಸ್ತವತೆಯನ್ನು ಅರಿತುಕೊಳ್ಳುವ ಹಂತಕ್ಕೆ ತಲುಪಿದಾಗ ಸಂಗಾತಿಯ ಆಯ್ಕೆಗೂ ಮಾನಸಿಕ ಪ್ರಬುದ್ಧತೆಯಾಗಿರುತ್ತದೆ.
* ಖಚಿತವಾಗಿ ಭಾರತದ ಜನಸಂಖ್ಯೆ ಕುಸಿಯಲಿದೆ. 18-21ರ ದಂಪತಿ ಮದುವೆಯಾದ ಮರುವರ್ಷವೇ ಮಗುವೊಂದಕ್ಕೆ ಜನ್ಮ ನೀಡಿದರೆ ಆ ಮಗು ಮುಂದಿನ 18-21 ವರ್ಷದಲ್ಲಿ ಮದುವೆಗೆ ಸಿದ್ಧವಾಗಿ ಬಿಡುತ್ತದೆ. ಆದರೆ 25-28ರ ದಂಪತಿ ಮದುವೆಯಾದ ಜನಿಸಿದ ಮಗು 25-28ರ ನಂತರವಷ್ಟೇ ಮದುವೆಯಾಗುವುದರಿಂದ ಈ ನಡುವೆ ಜನಸಂಖ್ಯೆಯ ಇಳಿಕೆಗೆ ದೊಡ್ಡ ಕೊಡುಗೆಯನ್ನೇ ನೀಡಿದಂತಾಗುತ್ತದೆ.
* 18ರ ವಯಸ್ಸಿನಲ್ಲಿ ಹುಡುಗಿಯರು ಮದುವೆಯಾಗುವುದಾದರೆ ಅವರಿಗೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಷ್ಟ. ವಿದ್ಯಾಭ್ಯಾಸ ಮಾಡುತ್ತಿದ್ದರೆ ಕನಿಷ್ಠ ಪದವಿ ಕೂಡ ಪೂರ್ಣಗೊಳಿಸಲಾಗದು. ಹಾಗಾಗಿ ವಯೋಮಾನದಲ್ಲಿ ಹೆಚ್ಚಳ ಮಾಡಿದರೆ ವಿದ್ಯಾಭ್ಯಾಸಕ್ಕೆ ನೆರವು ನೀಡಿದಂತಾಗುತ್ತದೆ.
* ಹೆಣ್ಣು ಮಕ್ಕಳು ತಮ್ಮ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಿದ ನಂತರ ಹೆತ್ತವರಿಗೆ ಕೆಲಕಾಲ ಆಧಾರ ಸ್ತಂಭವಾಗಿರಬಹುದು. ಪ್ರಸಕ್ತ ಹೆಣ್ಮಕ್ಕಳನ್ನು ಕಷ್ಟಪಟ್ಟು ಓದಿಸಿ ನೌಕರಿ ಸಂಪಾದಿಸಿದ ಹೊತ್ತಿಗೆ ಅವರು ಗಂಡನ ಮನೆ ಸೇರಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಹಲವು ಹೆತ್ತವರು ಕಷ್ಟದ ಜೀವನವನ್ನು ಸಾಗಿಸಬೇಕಾಗುತ್ತದೆ.
ವಿಶ್ವದ ಇತರೆಡೆಗಳಲ್ಲಿ ಮದುವೆ ವಯಸ್ಸು... ಇಷ್ಟಾಗಿಯೂ 25-28ರ ಮದುವೆ ಕನಿಷ್ಠ ವಯೋಮಾನ ಜಾರಿಯಾಗುವುದು ಅಸಾಧ್ಯ. ಯಾಕೆಂದರೆ ಜಗತ್ತಿನ ಯಾವುದೇ ದೇಶದಲ್ಲಿ ಮದುವೆಯ ಕನಿಷ್ಠ ವಯಸ್ಸು 21ಕ್ಕಿಂತ ಹೆಚ್ಚಿಲ್ಲದೇ ಇರುವುದು.
ಆಫ್ರಿಕಾ ದೇಶಗಳಲ್ಲಿ ಗಂಡಿನ ಮದುವೆಯ ಕನಿಷ್ಠ ವಯಸ್ಸು 14ರಿಂದ 21ರ ನಡುವೆ ಹಾಗೂ ಹೆಣ್ಣಿಗೆ 12ರಿಂದ 18ರ ನಡುವೆಯಿದೆ. ದಕ್ಷಿಣ ಆಫ್ರಿಕಾದಲ್ಲಿ ಹುಡುಗಿಯರಿಗೆ 12, ಹುಡುಗರಿಗೆ 14 ಮದುವೆಯ ಕನಿಷ್ಠ ವಯಸ್ಸು. ಸೂಡಾನ್‌ನಲ್ಲಿ ಮದುವೆಗೆ ವಯಸ್ಸೇ ಇಲ್ಲ. ಹುಡುಗಿ ಮೈ ನೆರೆದಳೆಂದರೆ ಮದುವೆ ಮಾಡಬಹುದಾಗಿದೆ.
ನಮ್ಮ ಏಷಿಯಾವನ್ನೇ ಗಮನಕ್ಕೆ ತೆಗೆದುಕೊಂಡರೆ ಪಕ್ಕದ ರಾಷ್ಟ್ರಗಳಾದ ಚೀನಾದಲ್ಲಿ 22-20 (ಗಂಡು-ಹೆಣ್ಣು), ಬಾಂಗ್ಲಾದೇಶದಲ್ಲಿ 21-18, ಅಫಘಾನಿಸ್ತಾನದಲ್ಲಿ 18-16, ನೇಪಾಳದಲ್ಲಿ 21-18, ಪಾಕಿಸ್ತಾನದಲ್ಲಿ 18-16 ಹೀಗಿವೆ.
ಶ್ರೀಲಂಕಾದಲ್ಲಿ ಗಂಡು-ಹೆಣ್ಣಿನ ಮದುವೆ ವಯಸ್ಸು 18. ಆದರೆ ಇದರಿಂದ ಮುಸ್ಲಿಂ ಧರ್ಮೀಯರನ್ನು ಹೊರಗಿಡಲಾಗಿದೆ. ಮುಸ್ಲಿಂ ಕಾನೂನುಗಳ ಪ್ರಕಾರ ಹುಡುಗಿಯೊಬ್ಬಳಿಗೆ 12ರ ವಯಸ್ಸಿನಲ್ಲೇ ಮದುವೆ ಮಾಡಬಹುದು ಎಂಬುದನ್ನು ಶ್ರೀಲಂಕಾ ಮಾನ್ಯ ಮಾಡುತ್ತಿದೆ.
ಯೂರೋಪಿನ ಬಹುತೇಕ ದೇಶಗಳು 18-16ರ ಮದುವೆ ವಯಸ್ಸನ್ನು ನಿಗದಿ ಪಡಿಸಿವೆ. ಡೆನ್ಮಾರ್ಕ್ 18-15, ಟರ್ಕಿ 18-17, ಇಂಗ್ಲೆಂಡ್ 18-16, ಸ್ಕಾಟ್ಲೆಂಟ್ 16, ಉತ್ತರ ಐರ್ಲೆಂಡ್ 18-16 ಮುಂತಾದ ಭಿನ್ನ ವಯೋಮಾನವನ್ನೂ ಹೊಂದಿವೆ.
ಅಮೆರಿಕಾದಲ್ಲಿ ಮದುವೆಯ ಕನಿಷ್ಠ ವಯಸ್ಸು ಎಲ್ಲಾ ರಾಜ್ಯಗಳಲ್ಲೂ ಒಂದೇ ರೀತಿಯಿಲ್ಲ. ಆದರೂ ಬಹುತೇಕ ರಾಜ್ಯಗಳು 18 ಎಂಬುದನ್ನು ಪರಿಗಣಿಸುತ್ತವೆ. ಆದರೂ ಅಪ್ರಾಪ್ತೆ ಗರ್ಭಿಣಿಯಾದರೆ ಕಾನೂನು ಮದುವೆಗೆ ಅವಕಾಶ ನೀಡುತ್ತದೆ.