ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನೇ ಸಮಸ್ಯೆ ಬಗೆಹರಿಸಬೇಕೆಂದು ಕಾಯಬೇಡಿ: ರಾಹುಲ್ (Congress | Rahul Gandhi | Madhya Pradesh | Ghulam Nabi Azad)
Bookmark and Share Feedback Print
 
ಜನತೆ ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಯಾವಾಗಲೂ ನನ್ನತ್ತಲೇ ನೋಡಬಾರದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ.

ಮಧ್ಯಪ್ರದೇಶ ಪ್ರವಾಸ ಸಂದರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಯುವ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ರಾಹುಲ್ ಈ ಹೇಳಿಕೆಯನ್ನು ನೀಡಿದ್ದಾರೆ.

ಈ ಸಂವಾದ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೆ ಪ್ರವೇಶವಿರಲಿಲ್ಲ. ಆದರೆ ಪ್ರತ್ಯಕ್ಷದರ್ಶಿಗಳ ಪ್ರಕಾರ ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವನಾಯಕ ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತು ಚರ್ಚಿಸಿದ್ದಾರೆ.

ಜನರು ತಮ್ಮ ಸಮಸ್ಯೆಗಳನ್ನು ತಾನೇ ಪರಿಹರಿಸಬೇಕು ಎಂದು ಯಾವಾಗಲೂ ನಿರೀಕ್ಷಿಸಬಾರದು. ಅದರ ಬದಲು ತಾವೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಯತ್ನಿಸಬೇಕು. ಇದು ಎಲ್ಲಾ ಸಮುದಾಯದ ಜನರಿಗೂ ಅನ್ವಯವಾಗುತ್ತದೆ ಎಂದು ರಾಹುಲ್ ಹೇಳಿದರು.

ಅಲ್ಪಸಂಖ್ಯಾತ ಸಮುದಾಯವು ಆದರದಿಂದ ಸ್ವೀಕರಿಸುವ ಐವರು ಅಲ್ಪಸಂಖ್ಯಾತ ನಾಯಕರನ್ನು ಹೆಸರಿಸಿ ಎಂದು ಇದೇ ಹೊತ್ತಿಗೆ ನೆರೆದಿದ್ದ ಜನತೆಯಲ್ಲಿ ರಾಹುಲ್ ಕೇಳಿಕೊಂಡಾಗ ಗುಲಾಂ ನಬೀ ಆಜಾದ್, ಮೊಹ್ಸಿನಾ ಕಿದ್ವಾಯಿ, ಒಮರ್ ಅಬ್ದುಲ್ಲಾ, ಅಹ್ಮದ್ ಪಟೇಲ್ ಮತ್ತು ಸಲ್ಮಾನ್ ಖುರ್ಷೀದ್ ಹೆಸರುಗಳು ತೇಲಿ ಬಂದವು. ಆದರೆ ಇದಕ್ಕೆ ಒಮ್ಮತದ ಅಭಿಪ್ರಾಯಗಳು ಬರಲಿಲ್ಲ. ಕೆಲವರು ಕೆಲವು ಹೆಸರುಗಳನ್ನು ತಮ್ಮದೇ ಆದ ಕಾರಣಗಳನ್ನು ಮುಂದಿಟ್ಟು ವಿರೋಧಿಸಿದರು.

ಮುಸ್ಲಿಂ ನಾಯಕರು ಪಕ್ಷ ಅಥವಾ ಸರಕಾರದಲ್ಲಿ ಸ್ಥಾನ ಗಿಟ್ಟಿಸಿಕೊಂಡ ನಂತರ ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವ ಬದಲು, ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಹೆಚ್ಚಿನ ಆಸ್ಥೆ ವಹಿಸುತ್ತಿರುವುದು ನಮ್ಮ ಸಮುದಾಯದ ದುರಂತ ಎಂದು ಯುವ ಕಾಂಗ್ರೆಸ್ ಕಾರ್ಯಕರ್ತ ಸಯ್ಯದ್ ಜಾಫರ್ ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಇಡೀ ರಾಜಕಾರಣವೇ ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿರುವ ಮತ್ತು ತನಗೆ ಗೌರವ ಸಿಗದೇ ಇರುವ ಸ್ಥಿತಿಯಿರುವ ಹೊತ್ತಿನಲ್ಲಿ ಮಹಿಳೆ ರಾಜಕೀಯಕ್ಕೆ ಯಾಕೆ ಬರಬೇಕು ಎಂದು ಯುವತಿಯೊಬ್ಬಳು ರಾಹುಲ್‌ಗೆ ಪ್ರಶ್ನೆ ಹಾಕಿದಳು.

ನೀರು ತುಂಬಿರುವ ಒಂದು ಲೋಟವನ್ನು ಮುಟ್ಟದೆ, ಅದರಲ್ಲಿನ ಕೆಸರನ್ನು ಹೊರಗೆ ಹಾಕುವುದಾದರೂ ಹೇಗೆ ಎಂದು ಕಾಂಗ್ರೆಸ್ ಮುಖಂಡ ಇದಕ್ಕೆ ಮರು ಪ್ರಶ್ನೆ ಹಾಕಿ ಯುವತಿಯ ಬಾಯ್ಮುಚ್ಚಿಸಿದರು.

ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ವೇಗದಿಂದ ಬರುವ ನಳ್ಳಿ ನೀರಿನ ಅಗತ್ಯವಿದೆ. ಆ ಮೂಲಕ ಹುಳುಕನ್ನು ಹಂತ ಹಂತವಾಗಿ ಹೊರಗೆ ಹಾಕಬಹುದು. ಆದರೂ ಅಲ್ಲಿ ಒಂದಿಷ್ಟು ಪಾಚಿಗಳು ಲೋಟದಲ್ಲಿ ಹಾಗೆಯೇ ಉಳಿದುಕೊಳ್ಳಬಹುದು ಎಂದು ಸೂಚ್ಯವಾಗಿ ಇಂದಿನ ರಾಜಕಾರಣವನ್ನು ಶುದ್ಧೀಕರಣಗೊಳಿಸುವ ವಿಧಾನವನ್ನು ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ