ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿತೀಶ್ ತರಾಟೆ; ಪ್ರಧಾನಿ ಸಿಂಗ್ ನಂತರ ಸೋನಿಯಾ ಸರದಿ (Bihar | Congress | Sonia Gandhi | Nitish Kumar)
Bookmark and Share Feedback Print
 
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನಂತರದ ಸರದಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯದ್ದು. ಕೇಂದ್ರದ ಅನುದಾನಗಳನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ ಎಂದು ನಿತೀಶ್ ಕುಮಾರ್ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಕೇಂದ್ರೀಯ ಅನುದಾನ ಯೋಜನೆಗಳಿಗಾಗಿ ಬಿಹಾರ ರಾಜ್ಯಕ್ಕೆ ಕೇಂದ್ರ ಸರಕಾರವು ಕೋಟಿಗಟ್ಟಲೆ ನಿಧಿಯನ್ನು ಒದಗಿಸಿದೆ. ಆದರೆ ದುರದೃಷ್ಟವೆಂದರೆ ಇಲ್ಲಿ ಭಾರೀ ಭ್ರಷ್ಟಾಚಾರಗಳು ನಡೆದಿದೆ ಎಂಬ ವರದಿಗಳು ಬಂದಿರುವುದು ಎಂದು ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಸೋನಿಯಾ ಹೇಳಿದರು.

ರಾಜ್ಯ ಸಾಕಷ್ಟು ಪ್ರಗತಿಯಾಗಿದೆ ಎಂಬ ನಿತೀಶ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ರಾಜ್ಯಕ್ಕೆ ಕೇಂದ್ರವು ನೀಡಿದ ಅನುದಾನಗಳು ಏನಾಗಿವೆ ಎಂಬುದು ನಮಗೆ ತಿಳಿಯುತ್ತಿಲ್ಲ. ನೀವೇ ಹೇಳಿ, ನಿಮಗೆ ದಿನಕ್ಕೆ ಎಷ್ಟು ಗಂಟೆ ವಿದ್ಯುತ್ ಸಿಗುತ್ತಿದೆ? ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಮೀಸಲಾಗಿಟ್ಟ ಹಣ ಏನಾಗಿದೆ ಎಂದು ಪ್ರಶ್ನಿಸಿದರು.

ಇಲ್ಲಿನ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಮತ್ತು ಅವಕಾಶಗಳಿಗಾಗಿ ಬೇರೆ ರಾಜ್ಯಗಳಿಗೆ ಹೋಗಬೇಕಾದ ಪರಿಸ್ಥಿತಿಯಿದೆ. ಅಲ್ಲದೆ ಆರೋಗ್ಯ ಸಂಬಂಧಿ ತೊಂದರೆಗಳಿಗೂ ಇತರ ರಾಜ್ಯಗಳತ್ತ ನೋಡಬೇಕಾಗಿದೆ ಎಂದು ಆರೋಪಿಸಿದರು.

ಅದೇ ಹೊತ್ತಿಗೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಯು ನಿರ್ಧಾರವನ್ನು ತನ್ನದೇ ಶೈಲಿಯಲ್ಲಿ ಸೋನಿಯಾ ತರಾಟೆಗೆ ತೆಗೆದುಕೊಂಡಿದ್ದಾರೆ. ನಿತೀಶ್ ಕುಮಾರ್ ಜಾತ್ಯತೀತ ತತ್ವಗಳಿಗೆ ಸಂಪೂರ್ಣ ವಿರುದ್ಧವಾದವರ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಪ್ರಗತಿ ಸಾಧಿಸಲಾಗಿದೆ ಎಂಬ ಸರಕಾರದ ವಾದವನ್ನು ತಳ್ಳಿ ಹಾಕಿರುವ ಸೋನಿಯಾ, ಕೇಂದ್ರವು ಎಲ್ಲಾ ರೀತಿಯ ಪರವಾನಗಿಗಳನ್ನು ನೀಡಿರುವ ಹೊರತಾಗಿಯೂ ಕಿಶನ್‌ಗಂಜ್‌ನಲ್ಲಿ ಆಲಿಗಢ ಮುಸ್ಲಿಂ ಯುನಿವರ್ಸಿಟಿ ಸ್ಥಾಪನೆಗೆ ಸರಕಾರವು ಜಮೀನು ನೀಡದೇ ಇರುವುದನ್ನು ಪ್ರಸ್ತಾಪಿಸಿ ವಾಗ್ದಾಳಿ ನಡೆಸಿದರು.

ನೀವು ಆಲಿಗಢ ಮುಸ್ಲಿಂ ಯುನಿವರ್ಸಿಟಿ ಬಗ್ಗೆ ಮಾತನಾಡುತ್ತಿದ್ದೀರಿ. ಕೇಂದ್ರವು ಈ ವಿಚಾರದಲ್ಲಿ ಸಂಪೂರ್ಣ ಸಿದ್ಧವಾಗಿದೆ. ಆದರೆ ರಾಜ್ಯ ಸರಕಾರವು ಭೂಮಿ ನೀಡುತ್ತಿಲ್ಲ. ಇದುವರೆಗೂ ಇದಕ್ಕಾಗಿ ಸರಕಾರ ಮುಂದೆ ಬಂದಿಲ್ಲ ಎಂದು ಆರೋಪಿಸಿದರು.

ಬಿಹಾರವನ್ನು ಅಭಿವೃದ್ಧಿಯ ಪಥಕ್ಕೆ ಮರಳಿಸಲು ಕಾಂಗ್ರೆಸ್‌ನ ಜಾತ್ಯತೀತ ಸರಕಾರದಿಂದ ಮಾತ್ರ ಸಾಧ್ಯ ಎಂದು ವಾದಿಸಿದ ಅವರು, ಕಳೆದ 20 ವರ್ಷಗಳಲ್ಲಿ ಅಧಿಕಾರಕ್ಕೆ ಬಂದ ವಿವಿಧ ಪಕ್ಷಗಳು ಪ್ರಗತಿಯ ಬಗ್ಗೆ ಯಾವುದೇ ದೃಷ್ಟಿಕೋನವನ್ನು ಹೊಂದಿರದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.

ಅಭಿವೃದ್ಧಿಯ ಕ್ರಾಂತಿಗಾಗಿ ಜನತೆ ಕಾಂಗ್ರೆಸ್‌ಗೆ ಮತ ಹಾಕಬೇಕು ಎಂದು ಮತದಾರರನ್ನು ಅವರು ಒತ್ತಾಯಿಸಿದರು.
ಸಂಬಂಧಿತ ಮಾಹಿತಿ ಹುಡುಕಿ