ಬಾಂಬೆ ಹೈಕೋರ್ಟಿನಲ್ಲಿ ಮುಂಬೈ ದಾಳಿಯ ಕುರಿತ ವಿಚಾರಣೆ ಸಂದರ್ಭದಲ್ಲಿ ಅಜ್ಮಲ್ ಕಸಬ್ ಪ್ರತಿಕ್ರಿಯಿಸಿರುವ ರೀತಿಯಿದು. ಅತ್ತ ವಿಚಾರಣೆ ನಡೆಯುತ್ತಿದ್ದರೆ ಇತ್ತ ಪಾಕಿಸ್ತಾನಿ ಪಾತಕಿ ಯಾವುದೇ ಪಶ್ಚಾತಾಪವಿಲ್ಲದೆ ಮುಗುಳ್ನಗುತ್ತಾ, ಆಕಳಿಸುತ್ತಾ, ತಲೆ ಕೆರೆದುಕೊಂಡಿದ್ದ.
ಪಾಕಿಸ್ತಾನದಿಂದ ಬಂದ ಕಸಬ್ ಮತ್ತು ಆತನ ಒಂಬತ್ತು ಸಹಚರರು ಮುಂಬೈ ಮೇಲೆ ಹೇಗೆ ದಂಡೆತ್ತಿ ಬಂದಿದ್ದರು ಎಂಬುದನ್ನು ಸರಕಾರಿ ವಕೀಲ ಉಜ್ವಲ್ ನಿಕ್ಕಂ ನ್ಯಾಯಾಲಯದಲ್ಲಿ ವಿವರಿಸುತ್ತಿದ್ದರು. ಈ ದಾಳಿ ಒಂದು ದೇಶದ ಬೆಂಬಲದಿಂದ ನಡೆದ ಭಯೋತ್ಪಾದನೆ ಮತ್ತು ಇದನ್ನು ನಡೆಸಿದ್ದು ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಸಂಘಟನೆ ಎಂದು ನಿಕ್ಕಂ ತಿಳಿಸಿದರು.
ಮುಂಬೈ ವಿಶೇಷ ನ್ಯಾಯಾಲಯವು ಪಾತಕಿ ಕಸಬ್ ದೋಷಿ ಎಂದು ತೀರ್ಪು ನೀಡಿ, ಆತನಿಗೆ ಮರಣ ದಂಡನೆ ವಿಧಿಸಿತ್ತು. ಅದನ್ನು ಖಚಿತಪಡಿಸುವ ಸಂಬಂಧ ಹೈಕೋರ್ಟಿನಲ್ಲಿ ವಿಚಾರಣೆಗೆ ಇಂದು ಚಾಲನೆ ನೀಡಲಾಗಿದೆ.
ಇಲ್ಲಿ ಕಸಬ್‌ನನ್ನು ನೇರವಾಗಿ ವಿಚಾರಣೆಗೆ ಒಳಪಡಿಸುವ ಬದಲು, ಭದ್ರತಾ ಕಾರಣಗಳಿಂದಾಗಿ ಜೈಲಿನಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡಲಾಗುತ್ತಿದೆ. ಅದರಂತೆ ನ್ಯಾಯಮೂರ್ತಿ ರಂಜನಾ ದೇಸಾಯಿ ಮತ್ತು ಆರ್.ವಿ. ಮೋರೆ ಸರಕಾರಿ ವಕೀಲರ ವಾದ ಆರಂಭಿಸಿದ್ದರು.
ವಿಚಾರಣೆಗೆ ಚಾಲನೆ ನೀಡುತ್ತಿದ್ದಂತೆ ಕಸಬ್ ಮುಖವು ನ್ಯಾಯಾಲಯದಲ್ಲಿನ ದೊಡ್ಡ ಪರದೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಮೂಡಿ ಬಂತು. ಈ ಹೊತ್ತಿಗೆ ಆತ ತೀರಾ ನಿರಾಸಕ್ತಿಯನ್ನು ಹೊಂದಿದವರಂತೆ ವರ್ತಿಸುತ್ತಿದ್ದ. ಬಹುತೇಕ ಸಮಯ ನಗುವುದು, ಆಕಳಿಸುವುದು ಮತ್ತು ತಲೆ ಕೆರೆದುಕೊಳ್ಳುವುದರಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದ್ದ.
ಅಲ್ಲದೆ ತಾನು ತೊಟ್ಟುಕೊಂಡಿರುವ ಜೈಲು ಸಮವಸ್ತ್ರದ ಬಟನ್‌ನಲ್ಲಿ ಆಟವಾಡುತ್ತಾ, ತೋಳುಗಳನ್ನು ಹರವುತ್ತಾ ಕಾಲ ಕಳೆಯುತ್ತಿದ್ದ ಎಂದು ವರದಿಗಳು ಹೇಳಿವೆ.
ತನ್ನನ್ನು ದೋಷಿ ಎಂದು ತೀರ್ಪು ನೀಡಿರುವುದು ಮತ್ತು ನೀಡಲಾಗಿರುವ ಮರಣ ದಂಡನೆ ವಿರುದ್ಧದ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಕಸಬ್ ಈ ರೀತಿಯಾಗಿ ನಿರಾಸಕ್ತಿಯಿಂದ ವರ್ತಿಸಿರುವುದು ತೀವ್ರ ಅಚ್ಚರಿಗೆ ಕಾರಣವಾಗಿದೆ.