ನಾವು ಓದಿರುವ, ಕೇಳಿರುವ ರಾಮಾಯಣದ ಪ್ರಕಾರ ಲಂಕೇಶ್ವರ ರಾವಣನನ್ನು ಸಂಹಾರ ಮಾಡುವುದು ರಾಮ. ಅದೇ ರೀತಿ ನಾಟಕ ಮತ್ತಿತರ ಪ್ರದರ್ಶನಗಳಲ್ಲೂ ನಡೆದುಕೊಂಡು ಬಂದಿದೆ. ಆದರೆ ಅಚ್ಚರಿ ಮತ್ತು ಆಘಾತಕಾರಿ ಬೆಳವಣಿಗೆಯೊಂದರಲ್ಲಿ ರಾವಣ ಸಾಯಲು ನಿರಾಕರಿಸಿ, ಲಂಕೆಗೆ ಪರಾರಿಯಾಗಿದ್ದಾನೆ.
ಇದು ನಡೆದಿರುವುದು ಆಗ್ರಾದಲ್ಲಿ. ದಸರಾ ಪ್ರಯುಕ್ತ 'ರಾಮಲೀಲಾ' ಪ್ರದರ್ಶನ ಏರ್ಪಡಿಸಲಾಗಿತ್ತು. ಸಂಪ್ರದಾಯದ ಪ್ರಕಾರ ರಾಮ ಬಾಣ ಬಿಡುತ್ತಿದ್ದಂತೆ ರಾವಣ ಸಾಯಬೇಕು. ನಂತರ ರಾವಣನ ಪ್ರತಿಕೃತಿ ದಹಿಸುವ ಕಾರ್ಯಕ್ರಮ.
PR
ಆದರೆ ಇಲ್ಲಿ ನಡೆದದ್ದು ಪೂರ್ತಿ ತಿರುಗು ಮುರುಗು. ರಾವಣನ ಪಾತ್ರ ಮಾಡಿದ್ದ ರಾಜು ಎಂಬಾತನಿಗೆ ಪ್ರೇಕ್ಷಕರು ಭಾರೀ ಬೆಂಬಲ ವ್ಯಕ್ತಪಡಿಸಿದ್ದರಿಂದ ವೇದಿಕೆಯಿಂದ ಹೊರಗೆ ಹೋಗಲು ನಿರಾಕರಿಸಿದ್ದಾನೆ.
ಈ ರೀತಿಯಾಗಿ ಸಾಯಲು ನಿರಾಕರಿಸುವ ಮೂಲಕ ಮೊಂಡು ಹಠವನ್ನು ರಾವಣ ಪ್ರದರ್ಶಿಸಿದ್ದರಿಂದ ಸಂಘಟಕರು ತೀರಾ ಮುಜುಗರಕ್ಕೊಳಗಾದರು. ನಂತರ ಅನಿವಾರ್ಯವಾಗಿ ರಾಮ ತನ್ನ ಸಾರೋಟಿನಲ್ಲಿ ತೆರಳಿ ಲಂಕೇಶ್ವರ ಬೃಹತ್ ಪ್ರತಿಕೃತಿಯನ್ನು ದಹಿಸಲು ಸಂಘಟಕರು ನಿರ್ದೇಶನ ನೀಡಿದರು.
ಅಚ್ಚರಿಯೆಂದರೆ ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚಿದ ನಂತರವೂ ರಾವಣನ ಪಾತ್ರಧಾರಿ ಮೈದಾನ ಮಧ್ಯದಲ್ಲಿ ತನ್ನ ಆಟೋಪ ಮುಂದುವರಿಸಿದ್ದು. ರಾವಣ ಪಾತ್ರಧಾರಿ ರಾಜು ತನ್ನಲ್ಲಿದ್ದ ಖಡ್ಗವನ್ನು ಅಪಾಯಕಾರಿ ರೀತಿಯಲ್ಲಿ ಬೀಸುತ್ತಾ, ಸಾಕ್ಷಾತ್ 'ರಾಮ' ಸೇರಿದಂತೆ ಇತರ ಪಾತ್ರಧಾರಿಗಳನ್ನು ಹೆದರಿಸುತ್ತಾ ಮೆರೆದಾಡಿ ನೆರೆದಿದ್ದವರಲ್ಲಿ ಭೀತಿಗೆ ಕಾರಣವಾಗಿದ್ದ.
ಇಲ್ಲಿ ಪ್ರದರ್ಶನದ ಸಂಪ್ರದಾಯದಂತೆ ಮೈದಾನವನ್ನು ರಾಮಾಯಣದ ಉಲ್ಲೇಖದಂತೆ ಅಯೋಧ್ಯೆ ಮತ್ತು ಲಂಕೆ ಎಂದು ಎರಡು ಭಾಗಗಳನ್ನಾಗಿ ಮಾಡಲಾಗಿತ್ತು. ಅದರಂತೆ ರಾಮ ಲಂಕೆಗೆ ದಾಳಿ ಮಾಡಬೇಕು. ಭಾರೀ ಕಾಳಗದ ನಂತರ ರಾವಣನನ್ನು ಕೊಂದು ಹಾಕಬೇಕು. ಇಷ್ಟಾಗುತ್ತಿದ್ದಂತೆ ರಾವಣ ಪಾತ್ರಧಾರಿ ವೇದಿಕೆಯಿಂದ ಹೊರಗೆ ಹೋಗಬೇಕು.
ಆದರೆ ಇಲ್ಲಿ ರಾಮಲೀಲಾ ಸಮಿತಿಯ ಸದಸ್ಯರು ಎಷ್ಟೇ ಬಲವಂತ ಮಾಡಿದರೂ ರಾವಣ ಪಾತ್ರಧಾರಿ ವೇದಿಕೆಯಿಂದ ನಿರ್ಗಮಿಸಲು ನಿರಾಕರಿಸಿದ್ದಾನೆ. ತನ್ನ ಅಭಿನಯಕ್ಕಾಗಿ ಪ್ರೇಕ್ಷಕರಿಂದ ಭಾರೀ ಬೆಂಬಲ ದೊರೆತದ್ದರಿಂದ ಸ್ಫೂರ್ತಿಗೊಂಡಿದ್ದ ರಾಜು, ರಾಮನ ಕೈಯಲ್ಲಿ ಸಾಯಲು ಕೇಳಲೇ ಇಲ್ಲ.
ಎಷ್ಟೇ ಪುಸಲಾಯಿಸಿದರೂ ರಾವಣ ಸಾಯಲು ಒಪ್ಪಲೇ ಇಲ್ಲ. ಬಳಿಕ ಮೈದಾನದ ಮಧ್ಯದಿಂದ ಲಂಕಾ ಪ್ರದೇಶಕ್ಕೆ ತೆರಳಿ, ನಂತರ ಮಾಯವಾದ. ಇದನ್ನು ನಂತರ ಸಂಪ್ರದಾಯದಂತೆ ರಾವಣ ಸಾಯುವ ಬದಲು ಲಂಕಾಕ್ಕೆ ಮರಳಿದ್ದಾನೆ ಎಂದು ಹೇಳಲಾಯಿತು.
ಪ್ರಸಂಗ ನಡೆಯುತ್ತಿದ್ದ ಸಂದರ್ಭದಲ್ಲಿ ರಾಜು ತನ್ನ ಖಡ್ಗವನ್ನು ಹಿಡಿದು ಕಾಳಗ ನಡೆಸುವ ಸಂದರ್ಭದಲ್ಲಿ ಇಬ್ಬರಿಗೆ ಗಾಯ ಮಾಡಿದ್ದಾನೆ ಎಂದು ಹೇಳಲಾಗಿದೆ.
ಇಷ್ಟೆಲ್ಲ ನಡೆಯಲು ಕಾರಣ ರಾವಣ ಮತ್ತು ರಾಮ ಪಾತ್ರಧಾರಿ ಗುಂಪುಗಳ ನಡುವಿನ ಪ್ರತಿಷ್ಠೆ. ರಾವಣನ ಪ್ರತಿಕೃತಿಯಲ್ಲಿ ಕನಿಷ್ಠ 21 ಸ್ಫೋಟಕಗಳನ್ನು ಇಡಬೇಕೆನ್ನುವುದು ರಾಜು ಮತ್ತು ಆತನ ಕಡೆಯವರ ಬೇಡಿಕೆಯಾಗಿತ್ತು. ಇದೇ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ವಾದ ವಿವಾದಗಳು ನಡೆದಿದ್ದವು. ಈ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶಿಸಿದಾಗಲೂ, 'ರಾವಣ' ಅವರಿಗೂ ಬೆದರಿಕೆ ಹಾಕಿದ್ದ.
ಸಾಕಷ್ಟು ಯತ್ನಿಸಿದ ನಂತರ ಪರಿಸ್ಥಿತಿಯನ್ನು ತಿಳಿಗೊಳಿಸಲಾಯಿತು ಎಂದು ವರದಿಗಳು ಹೇಳಿವೆ.