ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಮರ ಒಲವು ಗಿಟ್ಟಿಸಲು ರಾಜಕೀಯ ಪಕ್ಷಗಳಿಂದ ಸರ್ಕಸ್ (Bihar polls | Muslim votes | Nitish Kumar | Congress)
Bookmark and Share Feedback Print
 
ಮುಸ್ಲಿಮರ ಮತಬ್ಯಾಂಕಿಗೆ ಕನ್ನ ಹಾಕಲು ರಾಜಕೀಯ ಪಕ್ಷಗಳು ಜಾತ್ಯತೀತ ಸೋಗಿನಲ್ಲಿ ತರೇವಾರಿ ತಂತ್ರಗಳನ್ನು ಪ್ರದರ್ಶಿಸುವುದು ಹೊಸತಲ್ಲ. ಅದರಂತೆ ಶೇ.16ರಷ್ಟು ಮುಸ್ಲಿಮರನ್ನು ಹೊಂದಿರುವ ಬಿಹಾರದಲ್ಲಿ ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ, ಲೋಕ ಜನಶಕ್ತಿ ಪಕ್ಷ, ಸಂಯುಕ್ತ ಜನತಾದಳ ಸೇರಿದಂತೆ ಬಹುತೇಕ ಪಕ್ಷಗಳು ಸರ್ಕಸ್‌ನಲ್ಲಿ ನಿರತವಾಗಿವೆ.

ಇದೇ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರು ಕೂಡ ರಾಜ್ಯಕ್ಕೆ ಬಂದು ಮುಸ್ಲಿಮರ ಒಲವು ಗಿಟ್ಟಿಸುವ ಸಾಕಷ್ಟು ಮಾತುಗಳನ್ನಾಡಿದ್ದಾರೆ. ಭರವಸೆ, ಆಸ್ವಾಸನೆಗಳನ್ನು ಹರಿಸಿದ್ದಾರೆ. ಇದಕ್ಕೆ ಅಡಿಪಾಯ ಹಾಕಿದ್ದು, ಕೆಲ ಸಮಯದ ಹಿಂದೆ ವಿದ್ಯಾರ್ಥಿಗಳ ಜತೆ ಸಂವಾದದ ಹೆಸರಿನಲ್ಲಿ ಪ್ರವಾಸ ಮಾಡಿದ್ದ ಯುವ ನಾಯಕ ರಾಹುಲ್ ಗಾಂಧಿ.

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳವನ್ನು ಸ್ವತಃ ಪ್ರಧಾನ ಮಂತ್ರಿಯವರೇ ಗುರಿ ಮಾಡಿದ್ದಾರೆ. ಅದರ ಬೆನ್ನಿಗೆ ಬಂದ ಸೋನಿಯಾ ಗಾಂಧಿಯೂ ಇದೇ ಮಾತನ್ನು ಹೇಳಿದ್ದಾರೆ. ಜಾತ್ಯತೀತ ಶಕ್ತಿಗಳಿಗೆ ವಿರುದ್ಧವಾದವರ ಜತೆ ನಿತೀಶ್ ಕೈ ಜೋಡಿಸಿದ್ದಾರೆ ಎಂದು ಹೇಳುವ ಮೂಲಕ ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ಕೊಳ್ಳೆ ಹೊಡೆಯಲು ಯತ್ನಿಸಿದ್ದಾರೆ.

ಈ ರೀತಿಯ ರಾಜಕೀಯದಲ್ಲಿ ಸ್ವತಃ ನಿತೀಶ್ ಕುಮಾರ್ ಕೂಡ ಸದಾ ಮುಂದೆಂಬುದು ಇದೇ ವರ್ಷದ ಜೂನ್ ತಿಂಗಳಲ್ಲಿ ಸಾಬೀತಾಗಿತ್ತು. ಕೇವಲ ಮುಸ್ಲಿಮರನ್ನು ಗಮನದಲ್ಲಿಟ್ಟುಕೊಂಡು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ವಿಚಾರವನ್ನು ತನಗೆ ಪಾಸಿಟಿವ್ ಪ್ರಚಾರ ಬರುವಂತೆ ನೋಡಿಕೊಂಡರು.

ಅಲ್ಲದೆ ಮೋದಿ ಮತ್ತು ವರುಣ್ ಗಾಂಧಿ ಬಿಹಾರದ ಈ ಬಾರಿಯ ಚುನಾವಣೆಯಲ್ಲಿ ಪ್ರಚಾರ ಮಾಡದಂತೆ ನೋಡಿಕೊಂಡದ್ದು ನಾನೇ ಎಂದು ಮುಖ್ಯಮಂತ್ರಿ ಪ್ರಚಾರ ಸಭೆಗಳಲ್ಲಿ ಹೇಳುತ್ತಾ ತಿರುಗುತ್ತಿದ್ದಾರೆ. ಆ ಮೂಲಕ ತಾನು 'ಜಾತ್ಯತೀತ' ವಿರೋಧಿಗಳ ಪರ ಅಲ್ಲ ಎಂಬ ಸಂದೇಶವನ್ನು ರವಾನಿಸಿ ಮುಸ್ಲಿಮರ ಒಲವು ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

ಇಂತಹ ವಿಚಾರಗಳಲ್ಲಿ ರಾಷ್ಟ್ರೀಯ ಜನತಾದಳ ಮತ್ತು ಲೋಕ ಜನಶಕ್ತಿ ಪಕ್ಷಗಳು ಎಂದೆಂದೂ ಮುಂದು. ಮುಸ್ಲಿಮರ ವಿಚಾರ ಬಂದಾಗ ದೊಡ್ಡ ದನಿಯಲ್ಲಿ ಲಾಲೂ ಪ್ರಸಾದ್ ಯಾದವ್ ಮತ್ತು ರಾಮ್ ವಿಲಾಸ್ ಪಾಸ್ವಾನ್ ಮಾತನಾಡುತ್ತಿರುವುದನ್ನು ಬಹುತೇಕರು ಗಮನಿಸಿರುತ್ತಾರೆ.

ಇಬ್ಬರದ್ದೂ ಗುರಿ ಮುಸ್ಲಿಮರ ಓಟ್ ಬ್ಯಾಂಕ್. ಅದಕ್ಕಾಗಿ ಅಯೋಧ್ಯೆ, ಆರೆಸ್ಸೆಸ್, ಹಿಂದೂ ಭಯೋತ್ಪಾದನೆ ಮುಂತಾದ ವಿಚಾರಗಳನ್ನು ಪ್ರಸ್ತಾಪಿಸಿ ಬೇಳೆ ಬೇಯಿಸಿಕೊಳ್ಳಲು ಲಾಲೂ-ಪಾಸ್ವಾನ್ ಮೈತ್ರಿಕೂಟವು ಯತ್ನಿಸುತ್ತಿದೆ.

ಈ ವಿಚಾರದಲ್ಲಿ ಬಿಜೆಪಿಯೂ ಹಿಂದೆ ಬಿದ್ದಿಲ್ಲ. ತಾನು ಮುಸ್ಲಿಂ ವಿರೋಧಿಯೆಂದು, ಕೋಮುವಾದಿಯೆಂದು ಡೋಂಗಿ ಜಾತ್ಯತೀತ ಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಆದರೆ ಗುಜರಾತ್ ಮುಖ್ಯಮಂತ್ರಿಯಾಗಿರುವ ನರೇಂದ್ರ ಮೋದಿಯವರ ಆಡಳಿತವನ್ನೇ ನೋಡಿ, ಅಲ್ಲಿ ಮುಸ್ಲಿಮರು ಅತ್ಯುತ್ತಮ ಜೀವನ ಸಾಗಿಸುತ್ತಿದ್ದಾರೆ ಎಂದು ಕೇಸರಿ ಪಕ್ಷವು ಅಲ್ಪಸಂಖ್ಯಾತರ ಒಲವು ಗಿಟ್ಟಿಸಿಕೊಳ್ಳಲು ಪರದಾಡುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ