ಯೂರೋಪಿನ ಕೆಲವು ರಾಷ್ಟ್ರಗಳು ಮುಸ್ಲಿಂ ಮಹಿಳೆಯರ ಬುರ್ಖಾದ ಮೇಲೆ ನಿಷೇಧ ಹೇರಿದ ಬೆನ್ನಿಗೆ ಭಾರತದಲ್ಲೂ ಬುರ್ಖಾ ನಿಷೇಧಿಸಬೇಕು ಎಂದು ಶಿವಸೇನೆ ಆಗ್ರಹಿಸಿದೆ.
ಮಕ್ಕಳ ಕಳ್ಳತನ, ಕಳ್ಳ ಸಾಗಣೆಗೆ ಬುರ್ಖಾ ಬಳಕೆಯಾಗುತ್ತಿರುವುದು ಹೌದಾದರೆ, ಅದನ್ನು ನಾವು ಕಾನೂನಿನ ಪ್ರಕಾರ ನಿಷೇಧಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಶಿವಸೇನೆಯ ಮುಖವಾಣಿ 'ಸಾಮ್ನಾ'ದಲ್ಲಿ ಸಂಪಾದಕೀಯ ಬರೆಯಲಾಗಿದೆ.
ಮುಂಬೈಯ ಸರಕಾರಿ ಆಸ್ಪತ್ರೆಯೊಂದರಿಂದ ಎರಡು ತಿಂಗಳ ಮಗುವೊಂದನ್ನು ಬುರ್ಖಾ ಧರಿಸಿದ ಮಹಿಳೆಯೊಬ್ಬಳು ಅಪಹರಿಸಿದ್ದ ಪ್ರಕರಣವನ್ನು ಉಲ್ಲೇಖಿಸಿ ಶಿವಸೇನೆ ಬುರ್ಖಾ ನಿಷೇಧಿಸಬೇಕು ಎಂದು ಹೇಳಿದೆ.
ಕೆಲವು ಮುಸ್ಲಿಂ ಮಹಿಳೆಯರು ಧರಿಸುವ ಬುರ್ಖಾ ಮತ್ತು ಸಂಪೂರ್ಣ ದೇಹವನ್ನು ಮುಚ್ಚುವ ನೀಳುಡುಪನ್ನು ನಿಷೇಧಕ್ಕೊಳಪಡಿಸಿ ಮುಸ್ಲಿಂ ಜಗತ್ತಿನಿಂದ ತೀವ್ರ ಆಕ್ರೋಶವನ್ನು ಎದುರಿಸುತ್ತಿರುವ ಫ್ರಾನ್ಸ್ ಉಲ್ಲೇಖವನ್ನು ಮಾಡಿರುವ ಸಂಪಾದಕೀಯವು, ಫ್ರಾನ್ಸ್ ಅಧ್ಯಕ್ಷರು ತೆಗೆದುಕೊಂಡಿರುವುದು ಕ್ರಾಂತಿಕಾರಿ ಹೆಜ್ಜೆ ಎಂದು ಬಣ್ಣಿಸಿದೆ.
ಟರ್ಕಿಯ ಮೊದಲ ಅಧ್ಯಕ್ಷ ಮುಸ್ತಾಫಾ ಕೇಮಲ್ ಪಾಶಾ ಅವರು ಬುರ್ಖಾ ನಿಷೇಧಿಸುವಾಗ ಅಲ್ಲಿ ಇಸ್ಲಾಂ ವಿಚಾರ ಅಡ್ಡ ಬಂದಿರಲಿಲ್ಲ. ಭಾರತದಲ್ಲಿ ಮಾತ್ರ ಯಾಕೆ ಹೀಗೆ ಎಂದೂ ಶಿವಸೇನೆ ಪ್ರಶ್ನಿಸಿದೆ.
ಬೂಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದ 'ಸಚ್ ಎ ಲಾಂಗ್ ಜರ್ನಿ' ಪುಸ್ತಕವನ್ನು ಶಿವಸೇನೆ ಬೇಡಿಕೆ ಹಿನ್ನೆಲೆಯಲ್ಲಿ ಮುಂಬೈ ವಿಶ್ವವಿದ್ಯಾಲಯವು ತನ್ನ ಸಿಲೆಬಸ್‌ನಿಂದ ಹಿಂದಕ್ಕೆ ಪಡೆದುಕೊಂಡಿರುವುದಕ್ಕೆ ಅದರ ಲೇಖಕ ಭಾರತ ಸಂಜಾತ ಕೆನಡಿಯನ್ ರೋಹಿಂಟನ್ ಮಿಸ್ತ್ರಿ ಲೇವಡಿ ಮಾಡಿದ್ದಾರೆ.
ರಾಜಕೀಯ ಪಕ್ಷವೊಂದು ಪಠ್ಯಕ್ರಮದಲ್ಲಿ ಬದಲಾವಣೆ ಮಾಡುವಂತೆ ಬೇಡಿಕೆ ಮುಂದಿಟ್ಟಿತ್ತು. ಮುಂಬೈ ಯುನಿವರ್ಸಿಟಿಯು ಇದಕ್ಕೆ ತ್ವರಿತವಾಗಿ ಸ್ಪಂದಿಸಿ ಪುಸ್ತಕವನ್ನು ಮರು ದಿನದಿಂದಲೇ ಮಾಯ ಮಾಡಿದೆ ಎಂದು ಮಿಸ್ತ್ರಿ ಹೇಳಿದ್ದಾರೆ.