ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋನಿಯಾ ಜನತೆಯ ಹಾದಿ ತಪ್ಪಿಸುತ್ತಿದ್ದಾರೆ: ನಿತೀಶ್ (Nitish Kumar | Congress | Sonia Gandhi | Bihar assembly elections)
Bookmark and Share Feedback Print
 
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ಮರುದಿನ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮೇಲೆಯೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹರಿ ಹಾಯ್ದಿದ್ದಾರೆ.

ಕಿಶನ್‌ಗಂಜ್‌ನಲ್ಲಿ ಆಲಿಘಢ ಮುಸ್ಲಿಂ ವಿಶ್ವವಿದ್ಯಾಲಯ ಕೇಂದ್ರ ಸ್ಥಾಪನೆ ಮತ್ತು ಕೇಂದ್ರದ ಅನುದಾನದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಮಾಡುವ ಮೂಲಕ ಸೋನಿಯಾ ಜನತೆಯ ಹಾದಿ ತಪ್ಪಿಸುತ್ತಿದ್ದಾರೆ ಎಂದು ನಿತೀಶ್ ತಿರುಗೇಟು ನೀಡಿದ್ದಾರೆ.

ಬಿಹಾರದ ಕಿಶನ್‌ಗಂಜ್‌ನಲ್ಲಿ ವಿಶ್ವವಿದ್ಯಾಲಯದ ಕೇಂದ್ರವನ್ನು ಸ್ಥಾಪಿಸಲು ಕೇಂದ್ರವು ಪ್ರಸ್ತಾವನೆಯನ್ನು ಅಂಗೀಕರಿಸಿದೆ ಎಂಬ ಕಾಂಗ್ರೆಸ್ ಅಧ್ಯಕ್ಷೆಯ ಮಾತು ನಮಗೆ ಅಚ್ಚರಿ ತಂದಿದೆ. ಇದರಲ್ಲಿ ಯಾವುದೇ ಹುರುಳಿಲ್ಲ, ಶುದ್ಧ ಸುಳ್ಳು ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಆಲಿಘಢ ಮುಸ್ಲಿಂ ಯುನಿವರ್ಸಿಟಿಯ ಉಪ ಕುಲಪತಿಯವರು ಬಿಹಾರದಲ್ಲಿ ಕೇಂದ್ರವನ್ನು ತೆರೆಯಬೇಕೆನ್ನುವ ಇಚ್ಛೆ ವ್ಯಕ್ತಪಡಿಸಿದ್ದಕ್ಕೆ, ನಾನು ಕಿಶನ್‌ಗಂಜ್ ಪ್ರಾಂತ್ಯದಲ್ಲಿ ಮಾಡುವಂತೆ ಸಲಹೆ ನೀಡಿದ್ದೆ. ಜತೆಗೆ 250 ಎಕರೆ ಜಮೀನು ನೀಡಲು ರಾಜ್ಯ ಸಚಿವ ಸಂಪುಟವು ಅನುಮೋದನೆಯನ್ನೂ ನೀಡಿತ್ತು. ರಾಜ್ಯ ಸರಕಾರವು ಈ ಸಂಬಂಧ ಕೈಗೊಂಡಿರುವ ಎಲ್ಲಾ ಕ್ರಮಗಳು ಯುನಿವರ್ಸಿಟಿಗೆ ತೃಪ್ತಿ ತಂದಿದೆ ಎಂದು ವಿವರಣೆ ನೀಡಿದರು.

ಕೇವಲ ರಾಜಕೀಯ ಉದ್ದೇಶಗಳಿಗಾಗಿ ಈ ವಿಚಾರವನ್ನು ಕಾಂಗ್ರೆಸ್ ಬಳಸುತ್ತಿದೆ. ಚುನಾವಣೆಯಲ್ಲಿ ಲಾಭ ಗಳಿಸುವ ಉದ್ದೇಶದಿಂದ ಇದನ್ನು ಕೇಂದ್ರ ಸರಕಾರವು ತಡೆ ಹಿಡಿದಿದ್ದು, ಈಗ ರಾಜ್ಯದ ಮೇಲೆ ಗೂಬೆ ಕೂರಿಸಲಾಗುತ್ತಿದೆ ಎಂದು ಆರೋಪಿಸಿದರು.

ಇದು ಕಾಂಗ್ರೆಸ್ ಮತ್ತು ಅದರ ನಾಯಕರು ಚುನಾವಣಾ ಸಂದರ್ಭದಲ್ಲಿ ಜನತೆಯ ಹಾದಿ ತಪ್ಪಿಸಲು ಕೈಗೊಂಡಿರುವ ಪಾಪದ ಕೂಪ ಎಂದಿರುವ ನಿತೀಶ್, ಸರಕಾರವು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬ ಆರೋಪಗಳನ್ನೂ ತಳ್ಳಿ ಹಾಕಿದ್ದಾರೆ.

ಕೇಂದ್ರ ಸರಕಾರದ ಅನುದಾನಗಳನ್ನು ಬಿಹಾರ ಸರಕಾರವು ಸಮರ್ಥವಾಗಿ ಬಳಸಿಕೊಂಡಿಲ್ಲ ಮತ್ತು ಸಾಕಷ್ಟು ಭ್ರಷ್ಟಾಚಾರಗಳು ನಡೆದಿವೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದರು.

ಭ್ರಷ್ಟಾಚಾರದ ಆರೋಪಗಳನ್ನು ಸಾಬೀತು ಪಡಿಸಿ ಎಂದು ನಾನು ಸವಾಲು ಹಾಕುತ್ತಿದ್ದೇನೆ. ನನಗೆ ಹಾಕುವ ಯಾವುದೇ ಸವಾಲುಗಳಿಗೆ ಸಮರ್ಥವಾಗಿ ಉತ್ತರಿಸಲು ನಾನು ಸಿದ್ಧನಿದ್ದೇನೆ ಎಂದು ಸೋನಿಯಾ ಟೀಕೆಗೆ ನಿತೀಶ್ ಪ್ರತ್ಯುತ್ತರ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ