ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೇಮ್ಸ್ ಹಗರಣದ ಹಿಂದೆ ಕಾಂಗ್ರೆಸ್ ಸರಕಾರವಿದೆ: ಬಿಜೆಪಿ (BJP | JPC probe | CWG irregularities | Nitin Gadkari)
Bookmark and Share Feedback Print
 
ಕಾಮನ್‌ವೆಲ್ತ್ ಗೇಮ್ಸ್ ಭ್ರಷ್ಟಾಚಾರ ವಿವಾದಕ್ಕೆ ಪ್ರಧಾನ ಮಂತ್ರಿಗಳ ಕಚೇರಿಯನ್ನೂ ಬಿಜೆಪಿ ಎಳೆದು ತಂದಿದೆ. ಗೇಮ್ಸ್‌ನ ವಿವಿಧ ಯೋಜನೆಗಳಿಗೆ ಭಾರೀ ಮೊತ್ತವನ್ನು ನೀಡುವ ಮೊದಲು ಪ್ರಧಾನ ಮಂತ್ರಿಗಳ ಕಚೇರಿ ಮತ್ತು ಕೇಂದ್ರ ಸಂಪುಟವು ಯಾಕೆ ಪರಿಶೀಲನೆ ನಡೆಸಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದೆ.

ಈ ಕರ್ಮಕಾಂಡ ಬೃಹತ್ ಪ್ರಮಾಣದ ಹಗರಣ ಎಂದು ಬಣ್ಣಿಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಇದರ ವಿಸ್ತ್ರತ ತನಿಖೆಯನ್ನು ಜಂಟಿ ಸದನ ಸಮಿತಿಗೆ ವಹಿಸಬೇಕು. ಆ ಮೂಲಕ ಹಗರಣದಲ್ಲಿರುವ ರಾಜಕೀಯ ನಾಯಕತ್ವವನ್ನು ಬಹಿರಂಗಡಿಸಬೇಕು. ಹಗರಣದಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸಿದೆ. ಅದನ್ನು ತನಿಖೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಹಗರಣ ಆರೋಪಗಳ ಕುರಿತು ಸಿಬಿಐ ಕೂಡ ತನಿಖೆ ನಡೆಸಬಕು ಮತ್ತು ಅದು ತನ್ನ ವರದಿಯನ್ನು ಮೂರು ತಿಂಗಳೊಳಗೆ ಸಲ್ಲಿಸಬೇಕು ಎಂದರು.

ಹಲವು ರಾಜಕೀಯ ನಾಯಕರು ಹಗರಣದಲ್ಲಿ ಪಾಲ್ಗೊಂಡಿರುವ ಬಗ್ಗೆ ಬಿಜೆಪಿಯಲ್ಲಿ ಸೂಕ್ತ ದಾಖಲೆಗಳಿವೆ ಎಂದು ಹೇಳಿಕೊಂಡಿರುವ ಗಡ್ಕರಿ, ಇದನ್ನು ಜಂಟಿ ಸದನ ಸಮಿತಿಗೆ ಹಸ್ತಾಂತರಿಸಲಾಗುತ್ತದೆ ಎಂದರು.

ಕಾಮಗಾರಿಗಳ ವೆಚ್ಚದ ಎಲ್ಲಾ ರೀತಿಯ ಹೆಚ್ಚಳಗಳಿಗೆ ಸಂಪುಟ ಉಪ ಸಮಿತಿ ಮತ್ತು ಪ್ರಧಾನ ಮಂತ್ರಿಗಳ ಕಚೇರಿ ಅಂಗೀಕಾರ ನೀಡಿದೆ. ಅಷ್ಟೊಂದು ದೊಡ್ಡ ಮೊತ್ತಕ್ಕೆ ಒಪ್ಪಿಗೆ ಸೂಚಿಸುವ ಮೊದಲು ಯಾಕೆ ಪರಿಶೀಲನೆ ನಡೆಸಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ ಅವರು, ಗೇಮ್ಸ್ ಪೂರ್ವತಯಾರಿ ಮತ್ತು ನಂತರದ ಅವ್ಯವಸ್ಥೆಗಳಿಗೆ ಇಡೀ ಸಂಪುಟ ಜವಾಬ್ದಾರಿಯೇ ಎಂದು ಪ್ರಶ್ನಿಸಿದರು.

ಅದೇ ಹೊತ್ತಿಗೆ ಕಾಮನ್‌ವೆಲ್ತ್ ಗೇಮ್ಸ್ ಯೋಜನೆಗಳಿಗಾಗಿ ಬೇನಾಮಿ ಹೆಸರುಗಳಲ್ಲಿ ನಕಲಿ ಆರ್ಥಿಕ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಸ್ವಿಸ್ ಬ್ಯಾಂಕಿಗೆ ಮಾರಿಷಸ್ ಮೂಲಕ ಹಣ ರವಾನೆಯಾಗಿದೆ ಎಂದೂ ಆರೋಪಿಸಿದರು.

ಗೇಮ್ಸ್‌ಗಾಗಿ ಒಟ್ಟು ವ್ಯಯ ಮಾಡಲಾಗಿರುವ 70,000 ಕೋಟಿ ರೂಪಾಯಿಗಳಲ್ಲಿ, ಕೇವಲ 350 ಕೋಟಿ ರೂಪಾಯಿಗಳನ್ನು ಮಾತ್ರ ಭಾರತೀಯ ಕ್ರೀಡಾಪಟುಗಳ ಮೇಲೆ ಖರ್ಚು ಮಾಡಲಾಗಿದೆ ಎಂದರು.

ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ಮನಮೋಹನ್ ಸಿಂಗ್ ಅವರು ನೀಡಿರುವ ತನಿಖೆ ಆದೇಶ ಕೇವಲ ಕಣ್ಣೊರೆಸುವ ತಂತ್ರ ಎಂದು ಹೇಳಿರುವ ಗಡ್ಕರಿ, ಗೇಮ್ಸ್ ಪೂರ್ವ ಸಿದ್ಧತೆಯಲ್ಲಿ ಪಾಲ್ಗೊಂಡಿರುವ ಕೇಂದ್ರ ಸರಕಾರ ಮತ್ತು ದೆಹಲಿ ಸರಕಾರದ ಎಲ್ಲಾ ವಿಭಾಗಗಳನ್ನು ತನಿಖೆಯ ಪರಿಧಿಗೆ ತರಬೇಕು ಎಂದು ಒತ್ತಾಯಿಸಿದರು.

ಗೇಮ್ಸ್ ಹೆಸರಿನಲ್ಲಿ ಜನತೆಯ ಹಣವನ್ನು ಲೂಟಿ ಮಾಡಲಾಗಿದೆ. ಈ ಹಗರಣದಲ್ಲಿ ಪಾಲ್ಗೊಂಡಿರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಇದೊಂದು ಗಂಭೀರ ವಿಚಾರವಾಗಿದ್ದು, ಪಕ್ಷವು ಇದನ್ನು ಜನತಾ ನ್ಯಾಯಾಲಯಕ್ಕೆ ಕೊಂಡೊಯ್ಯಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ