ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಕದ ರಾಜ್ಯ ತಮಿಳುನಾಡಿನಲ್ಲೂ ನಿಧಾನವಾಗಿ ಜ್ವರ ಕಾಣಿಸಿಕೊಳ್ಳಲಾರಂಭಿಸಿದೆ. ಅತ್ತ ಎಐಎಡಿಎಂಕೆ ವರಿಷ್ಠೆ ಜಯಲಲಿತಾ ಜನರಿಗೆ ನಿಕಟವಾಗಲು ಯತ್ನಿಸುತ್ತಿರುವುದನ್ನು ಗಮನಿಸಿರುವ ನಾಸ್ತಿಕ ಮುಖ್ಯಮಂತ್ರಿ ಎಂ. ಕರುಣಾನಿಧಿ, ದೇವಸ್ಥಾನಗಳ ಪೂಜಾರಿಗಳ ಒಲವು ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ.
PTI
ರಾಜ್ಯದಾದ್ಯಂತದ ದೇಗುಲಗಳ ಪೂಜಾರಿಗಳಿಗೆ 10,000 ಸೈಕಲ್ಲುಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಅವರು ಘೋಷಿಸಿದ್ದಾರೆ.
ಇದೇ ವರ್ಷಾರಂಭದ ಬಜೆಟ್ ಅಧಿವೇಶನದಲ್ಲಿ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಪ್ರಕಟಿಸಿದಂತೆ ಈ ಯೋಜನೆಯನ್ನು ರಾಜ್ಯದಾದ್ಯಂತ ಜಾರಿಗೆ ತರಲಾಗುತ್ತದೆ ಎಂದು ಡಿಎಂಕೆ ಸರಕಾರ ಸೋಮವಾರ ಹೇಳಿದೆ.
ಬೆನ್ನಿಗೆ ಚೆನ್ನೈ, ಕಾಂಚಿಪುರಂ, ವೆಲ್ಲೂರು ಮುಂತಾದ ನಗರಗಳ ಅರ್ಚಕರಿಗೆ ಸುಮಾರು 200 ಸೈಕಲ್ಲುಗಳನ್ನು ಸರಕಾರ ವಿತರಿಸಿದೆ.
ಸರಕಾರವು ಈಗಾಗಲೇ ಜಾರಿಗೆ ತಂದಿರುವ ಗ್ರಾಮಾಂತರ ದೇವಳಗಳಲ್ಲಿನ ಕನಿಷ್ಠ ಒಪ್ಪತ್ತು ಪೂಜೆಯ ಯೋಜನೆಯಡಿ ಬರುವ ಅರ್ಚಕರು ಸೇರಿದಂತೆ ಎಲ್ಲಾ ಪೂಜಾರಿಗಳು ಈ ಸೈಕಲ್ ಯೋಜನೆಗೆ ಅರ್ಹರು. ಪ್ರಸಕ್ತ ಎಲ್ಲಾ ದೇವಸ್ಥಾನಗಳಲ್ಲಿ ಸುಸೂತ್ರವಾಗಿ ಪೂಜೆ ನಡೆಯಬೇಕೆಂದು ಸರಕಾರವು ಮಾಸಿಕವಾಗಿ 1,200 ರೂಪಾಯಿಗಳನ್ನು ವ್ಯಯಿಸುತ್ತಿದೆ.
ಇದೀಗ 10,000 ಸೈಕಲ್ಲುಗಳಿಗಾಗಿ 2.78 ಕೋಟಿ ರೂಪಾಯಿಗಳನ್ನು ತಮಿಳುನಾಡು ಸರಕಾರವು ಖರ್ಚು ಮಾಡುತ್ತಿದೆ.
ಕಳೆದ ಮೂರು ತಿಂಗಳುಗಳಿಂದ ರಾಜ್ಯ ಸರಕಾರವು ನಾಗರಿಕರಿಗೆ ಹಲವು ರೀತಿಯ ರಿಯಾಯಿತಿ ಯೋಜನೆಗಳನ್ನು ಪ್ರಕಟಿಸುತ್ತಾ ಬಂದಿದೆ. ಇತ್ತೀಚೆಗಷ್ಟೇ ರೈತರಿಗೆ ಹೇರಲಾಗುವ ಹೆಚ್ಚುವರಿ ತೆರಿಗೆಗಳು, ಹೆಚ್ಚುವರಿ ಜಲ ತೆರಿಗೆ ಮತ್ತು ಅಭಿವೃದ್ಧಿ ಶುಲ್ಕಗಳನ್ನು ಸಚಿವ ಸಂಪುಟವು ರದ್ದು ಮಾಡಿತ್ತು.
ಹಿಂದುಳಿದ ವರ್ಗಗಳು ಮತ್ತು ಅತಿ ಹಿಂದುಳಿದ ವರ್ಗಗಳ ಆದಾಯ ತೆರಿಗೆ ಮಿತಿಯನ್ನು ಕೂಡ ಹೆಚ್ಚಳ ಮಾಡುವ ಮೂಲಕ ಮನೆ ಕಟ್ಟಲು ಉಚಿತ ಜಮೀನು, ಹೊಲಿಗೆ ಯಂತ್ರ ಮತ್ತು ಇಸ್ತ್ರಿ ಪೆಟ್ಟಿಗೆ ಮುಂತಾದ ಯೋಜನೆಗಳ ಲಾಭವನ್ನು ಪಡೆದುಕೊಳ್ಳಲು ಕಳೆದ ತಿಂಗಳು ಸರಕಾರ ಸಹಕರಿಸಿತ್ತು.