ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಎಲ್ಲಿ ಚುನಾವಣೆಗೆ ನಿಂತರೂ ಗೆಲ್ಲಬಲ್ಲೆ: ರಾಬರ್ಟ್ 'ಗಾಂಧಿ'
(Robert Vadra | Gandhi family | Priyanka Gandhi | Congress)
ಎಲ್ಲಿ ಚುನಾವಣೆಗೆ ನಿಂತರೂ ಗೆಲ್ಲಬಲ್ಲೆ: ರಾಬರ್ಟ್ 'ಗಾಂಧಿ'
ನವದೆಹಲಿ, ಬುಧವಾರ, 20 ಅಕ್ಟೋಬರ್ 2010( 12:56 IST )
ನಾನು ರಾಜಕೀಯಕ್ಕೆ ಸೇರುತ್ತೇನೋ ಇಲ್ಲವೋ ಗೊತ್ತಿಲ್ಲ, ಆದರೆ ಭಾರತದ ಯಾವುದೇ ಮೂಲೆಯಲ್ಲಾದರೂ ಚುನಾವಣೆಗೆ ನಿಂತರೆ ನಾನು ಗೆಲ್ಲಬಲ್ಲೆ ಎಂದು ಪ್ರಿಯಾಂಕಾ ಗಾಂಧಿ ಗಂಡ ರಾಬರ್ಟ್ ವಾದ್ರಾ ಹೇಳಿಕೊಂಡಿದ್ದಾರೆ.
PTI
ನಾನು ಎಲ್ಲಿ ಚುನಾವಣೆಗೆ ನಿಂತರೂ ಖಂಡಿತಾ ಗೆಲುವು ಸಾಧಿಸಬಲ್ಲೆ. ಆದರೆ ನಾನೊಬ್ಬ ಉದ್ಯಮಿ. ನನಗೆ ರಾಜಕೀಯ ಯಾಕೆ ಬೇಕು? ನಾನು ಈಗ ಏನಾಗಿದ್ದೇನೋ, ಅದೇ ಖುಷಿ ಕೊಟ್ಟಿದೆ ಎಂದು ಅವರು ಹೇಳಿದ್ದಾರೆ.
'ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆ ಜತೆ ಮಾತನಾಡುತ್ತಿದ್ದ 41ರ ವಾದ್ರಾ, ತನ್ನಿಂದ ಏನಾದರೂ ಸಾಧಿಸಲು ಸಾಧ್ಯವಾಗುವುದಾದರೆ ಮಾತ್ರ ರಾಜಕೀಯಕ್ಕೆ ಪದಾರ್ಪಣೆ ಮಾಡುತ್ತೇನೆ ಎಂದರು.
ಏನು ಮಾಡುವುದಿದ್ದರೂ ಅದಕ್ಕೆ ಸಮಯ ಮತ್ತು ಅವಕಾಶವಿದೆ. ಹಾಗೊಂದು ವೇಳೆ ರಾಜಕೀಯಕ್ಕೆ ನಾನು ಅರ್ಹನೆಂಬ ಭಾವ ಮೂಡಿದಲ್ಲಿ, ನನ್ನಿಂದ ಏನಾದರೂ ಬದಲಾವಣೆ ಮಾಡಬಹುದು ಎಂದು ಅನ್ನಿಸಿದಲ್ಲಿ ನನ್ನ ಮಕ್ಕಳು ದೊಡ್ಡವರಾಗುತ್ತಿದ್ದಂತೆ ರಾಜಕೀಯಕ್ಕೆ ಸೇರುವ ಬಗ್ಗೆ ಯೋಚಿಸುತ್ತೇನೆ. ಆದರೆ ಈ ಬಗ್ಗೆ ಈಗಲೇ ಯಾವುದೇ ನಿರ್ಧಾರವನ್ನು ಪ್ರಕಟಿಸಲಾರೆ. ಪ್ರಸಕ್ತ ನಾನು ಹೊಂದಿರುವ ಮಕ್ಕಳು, ಉದ್ಯಮ ಸೇರಿದಂತೆ ಎಲ್ಲವೂ ನನಗೆ ಖುಷಿ ಕೊಟ್ಟಿವೆ ಎಂದು ವಿವರಣೆ ನೀಡಿದರು.
ದೇಶಕ್ಕೆ ಮೂವರು ಪ್ರಧಾನಿಗಳನ್ನು ನೆಹರೂ-ಗಾಂಧಿ ಕುಟುಂಬವು ನೀಡಿದ್ದು, ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿಯೂ ಪ್ರಧಾನಿಯಾದಲ್ಲಿ ಈ ಸಂಖ್ಯೆ ನಾಲ್ಕಕ್ಕೇರಲಿದೆ. ಅತ್ತ ಪ್ರಿಯಾಂಕಾ ಗಾಂಧಿಯವರ ರಾಜಕೀಯ ಪ್ರವೇಶ ಇನ್ನೂ ಖಚಿತಗೊಂಡಿಲ್ಲ.
ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ತನ್ನ ಮೇಲೆ ಒತ್ತಡವಿದ್ದುದನ್ನು ಕೂಡ ಇದೇ ಸಂದರ್ಭದಲ್ಲಿ ವಾದ್ರಾ ಬಹಿರಂಗಪಡಿಸಿದ್ದಾರೆ.
2009ರ ಚುನಾವಣೆಯಲ್ಲಿ ಸುಲ್ತಾನ್‌ಪುರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನ್ನ ಮೇಲೆ ಭಾರೀ ಒತ್ತಡ ಹಾಕಲಾಗಿತ್ತು. ಆದರೆ ನಾನು ನಿರಾಕರಿಸಿದ್ದೆ. ಅದು ನನ್ನ ಜಾಗ ಅಲ್ಲ ಎಂದು ಹೇಳಿದ್ದೆ. ನಾನು ಗಾಂಧಿ ಕುಟುಂಬಕ್ಕೆ ಸೇರಿದವನು ಎಂಬ ಏಕೈಕ ಕಾರಣಕ್ಕೆ ನನ್ನನ್ನು ಬಲವಂತ ಮಾಡಲಾಗಿತ್ತು ಎಂದಿದ್ದಾರೆ.
ತನ್ನ ಅತ್ತೆ ಸೋನಿಯಾ ಗಾಂಧಿಯವರು ಪ್ರಧಾನಿಯಾಗಲು ನಿರಾಕರಿಸಿದ್ದು ನಿಮಗೆ ಅಸಮಾಧಾನ ತಂದಿತ್ತೇ ಎಂಬ ಪ್ರಶ್ನೆಗೆ, ಅವರು ಪ್ರಧಾನಿಯಾಗಿದ್ದರೂ ನಾನು ನನ್ನ ಕಚೇರಿಯನ್ನು ಬದಲಾಯಿಸುತ್ತಿರಲಿಲ್ಲ. ನನ್ನ ಜೀವನ ಶೈಲಿ ಅದರಿಂದಾಗಿ ಬದಲಾಗುತ್ತಿರಲಿಲ್ಲ ಎಂದರು.
ಆದರೂ ತಾನು ಗಾಂಧಿ ಕುಟುಂಬದವರನ್ನು ಮದುವೆಯಾಗಿದ್ದೇನೆ ಎಂಬ ಕಾರಣಕ್ಕೆ ರಾಜಕೀಯದಿಂದ ತಪ್ಪಿಸಿಕೊಳ್ಳುತ್ತೇನೆ ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ ಎಂದೂ ವಾದ್ರಾ ತಿಳಿಸಿದ್ದಾರೆ.