ರಾಹುಲ್ ಗಾಂಧಿಯವರು ಕಿರು ಸಾಲ ಸಂಸ್ಥೆಗಳ ಸಾಮೀಪ್ಯ ಹೊಂದಿರುವುದರಿಂದ ಆಂಧ್ರಪ್ರದೇಶ ಸರಕಾರವು ಅವುಗಳ ಬಗ್ಗೆ ಸಹಾನುಭೂತಿ ಹೊಂದಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿ ಕೆ. ರೋಸಯ್ಯ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯವರು ಪರಿಶುದ್ಧರಾಗಿದ್ದಾರೆ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರು ಕಿರು ಸಾಲ ಸಂಸ್ಥೆಗಳ (ಎಂಎಫ್ಐ) ಕಡೆ ಪ್ರೀತಿ ಅಥವಾ ವಿಶ್ವಾಸ ಹೊಂದಿದ್ದಾರೆ ಎಂದು ನನಗೆ ಅನ್ನಿಸುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಮಹಿಳೆಯರ ಸ್ಥಿತಿಗತಿಗಳನ್ನು ಎತ್ತರಿಸುವುದೇ ಅವರ ಏಕೈಕ ಆಶಯ ಎಂದು ರೋಸಯ್ಯ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಸಾಲ ವಸೂಲಾತಿ ಸಂದರ್ಭದಲ್ಲಿ ಕಿರು ಸಾಲ ಸಂಸ್ಥೆಗಳ ಪ್ರತಿನಿಧಿಗಳು ಸಾಲಗಾರರನ್ನು ಹಿಗ್ಗಾಮುಗ್ಗಾ ಥಳಿಸುವುದು, ಇದರಿಂದ ಹೆದರಿದ ಸಾಲಗಾರರು ಆತ್ಮಹತ್ಯೆ ಮಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಈ ಸಂಸ್ಥೆಗಳು ಸಾಮಾನ್ಯ ಜನತೆಯ ಮೇಲೆ ಮೋಸದ ಹಾದಿಯಿಂದ ಭಾರೀ ಬಡ್ಡಿದರಗಳನ್ನು ಹೇರುತ್ತಿವೆ ಎಂದು ಆರೋಪಿಸಲಾಗುತ್ತಿದೆ.
ಬ್ಯಾಂಕೇತರ ಹಣಕಾಸು ಸಂಸ್ಥೆಗಳಾಗಿರುವ ಕಿರು ಸಾಲ ಸಂಸ್ಥೆಗಳತ್ತ ರಾಹುಲ್ ಒಲವು ಹೊಂದಿರುವ ಕಾರಣದಿಂದ ಬಡವರ ಮೇಲೆ ಈ ಸಂಸ್ಥೆಗಳು ಸಣ್ಣ ಮೊತ್ತದ ಸಾಲಕ್ಕೂ ಭಾರೀ ಬಡ್ಡಿ ವಿಧಿಸುತ್ತಿದ್ದರೂ ಪರಿಣಾಮಕಾರಿ ಕ್ರಮಕ್ಕೆ ಸರಕಾರ ಮುಂದಾಗುತ್ತಿಲ್ಲ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ವರದಿಗಳ ಪ್ರಕಾರ ಈ ಕಿರು ಸಾಲ ಸಂಸ್ಥೆಗಳಿಂದ ಸಾಲ ಪಡೆದ ಗ್ರಾಮಾಂತರ ಪ್ರದೇಶದ 40ಕ್ಕೂ ಹೆಚ್ಚು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದರ ಕುರಿತು ವಿವರಣೆ ನೀಡಿದ ಮುಖ್ಯಮಂತ್ರಿ ರೋಸಯ್ಯ, ಕಿರು ಸಾಲ ಸಂಸ್ಥೆಗಳ ಆವಾಂತರಗಳ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ; ಈ ಬಗ್ಗೆ ನಾನು ನೇರವಾಗಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಆರ್‌ಬಿಐ ಗವರ್ನರ್ ಡಿ. ಸುಬ್ಬಾ ರಾವ್ ಜತೆ ಮಾತನಾಡಿದ್ದೇನೆ. ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರಲ್ಲಿ ಮಧ್ಯಪ್ರವೇಶಿಸುವಂತೆ ಪತ್ರ ಬರೆದಿದ್ದೇನೆ. ಶೀಘ್ರದಲ್ಲೇ ಅವರನ್ನು ಭೇಟಿಯಾಗಲಿದ್ದೇನೆ ಎಂದರು.