ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚು ಭಾರತೀಯರು ತಂಬಾಕು ಸೇವನೆ ಮಾಡುತ್ತಿದ್ದಾರೆ ಎಂಬ ಆಘಾತಕಾರಿ ಅಂಶವೊಂದನ್ನು ಭಾರತದ ಜಾಗತಿಕ ವಯಸ್ಕರ ತಂಬಾಕು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಈ ವರದಿಯನ್ನು ಬಿಡುಗಡೆ ಮಾಡಿದ್ದು ಕೇಂದ್ರ ಆರೋಗ್ಯ ಸಚಿವ ಗುಲಾಂ ನಬೀ ಆಜಾದ್.
ಪ್ರತಿವರ್ಷ ತಂಬಾಕು ಸಂಬಂಧಿ ಖಾಯಿಲೆಗಳಿಂದಾಗಿ ಎಂಟರಿಂದ 10 ಲಕ್ಷ ಮಂದಿ ಸಾಯುತ್ತಿದ್ದಾರೆ. ಇದು ಎಷ್ಟು ಆಘಾತಕಾರಿ ಅಂಶವೆಂದರೆ ಇತರ ಪ್ರಮುಖ ಖಾಯಿಲೆಗಳಾದ ಎಚ್ಐವಿ, ಏಡ್ಸ್ ಮತ್ತು ಮಲೇರಿಯಾಗಳಿಂದ ಸಂಭವಿಸುತ್ತಿರುವ ಒಟ್ಟು ಮರಣ ಪ್ರಮಾಣಕ್ಕಿಂತ ಅಧಿಕವಾಗಿರುವುದು ಎಂದು ಆಜಾದ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ವಿಶ್ವದಾದ್ಯಂತ ವರ್ಷದಲ್ಲಿ ತಂಬಾಕು ಸಂಬಂಧಿ ರೋಗಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ 55 ಲಕ್ಷ. ಇದರಲ್ಲಿ ಭಾರತದ ಪಾಲೇ ಒಂಬತ್ತು ಲಕ್ಷ. ವಿಶ್ವದ ಮೂರನೇ ಅತಿ ಹೆಚ್ಚು ತಂಬಾಕು ಉತ್ಪಾದಕ ರಾಷ್ಟ್ರವೆಂಬ ಕುಖ್ಯಾತಿಯೂ ಭಾರತದ್ದು.
ಕನಿಷ್ಠ ಶೇಕಡಾ 10ರಷ್ಟು ಹದಿಹರೆಯದವರು ವಿವಿಧ ಪ್ರಕಾರದ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಂಬಾಕು ಮುಕ್ತ ಅಭಿಯಾನದ ಡಾ. ವಿ.ಎಂ. ಪ್ರಸಾದ್ ತಿಳಿಸಿದ್ದಾರೆ.
ಈ ಸಮೀಕ್ಷೆಯ ಪ್ರಕಾರ ಭಾರತದಲ್ಲಿರುವ ಒಟ್ಟು ತಂಬಾಕು ಬಳಕೆದಾರರ (ಬೀಡಿ, ಸಿಗರೇಟು, ಚುಟ್ಟಾ, ಗುಟ್ಕಾಗಳು) ಸಂಖ್ಯೆ 27.5 ಕೋಟಿ. ಇವರಲ್ಲಿ ಶೇ.48ರಷ್ಟು ಮಂದಿ ಪುರುಷರು ಮತ್ತು ಶೇ.20ರಷ್ಟು ಮಹಿಳೆಯರಾಗಿರುತ್ತಾರೆ.
ಶೇ.15ರಷ್ಟು 15ರ ಹರೆಯಕ್ಕಿಂತಲೂ ಒಳಗಿನ ಮಕ್ಕಳು, ಶೇ.25ರಷ್ಟು 15ರಿಂದ 17 ವರ್ಷದೊಳಗಿನ ಹದಿ ಹರೆಯದವರು, ಶೇ.19ರಷ್ಟು 18ರಿಂದ 19ರ ನಡುವಿನವರು ತಂಬಾಕು ಉತ್ಪನ್ನಗಳನ್ನು ಬಳಸುತ್ತಾರೆ.
20ರಿಂದ 34ರ ಹರೆಯದ ನಡುವಿನವರ ಪ್ರತಿ ಐವರಲ್ಲಿ ಇಬ್ಬರು ತಂಬಾಕು ಬಳಕೆದಾರರು ತಾವು ದಿನಾ ತಂಬಾಕು ಬಳಸಲು ಆರಂಭಿಸಿರುವುದು ತಮ್ಮ 18ನೇ ವರ್ಷಕ್ಕಿಂತಲೂ ಮೊದಲು ಎಂದೂ ಈ ವರದಿ ಹೇಳಿದೆ.