ಅಯೋಧ್ಯೆಯ ವಿವಾದಿತ ಜಮೀನನ್ನು ವಿಭಾಗ ಮಾಡುವುದನ್ನು ಮತ್ತು ಅಲ್ಲಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವುದನ್ನು ತಳ್ಳಿ ಹಾಕಿರುವ ವಿಶ್ವ ಹಿಂದೂ ಪರಿಷತ್, ಪ್ರಕರಣವನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಕೊಂಡೊಯ್ಯುವ ಕುರಿತು ಒಕ್ಕೊರಲಿನ ತೀರ್ಮಾನ ಕೈಗೊಂಡಿದೆ.
ವಿಶ್ವ ಹಿಂದೂ ಪರಿಷತ್ ನಾಯಕರು ಮತ್ತು ಸಾಧು-ಸಂತರ ಸುಪ್ರೀಂ ಸಂಘಟನೆ 'ಸಂತರ ಉಚ್ಚಾಧಿಕಾರ ಸಮಿತಿ' ಬುಧವಾರ ಸಭೆ ಸೇರಿದಂ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.
ಅಯೋಧ್ಯೆಯ ಚಾರಿತ್ರಿಕ ಕುರುಹುಗಳನ್ನು ರಕ್ಷಿಸುವುದು ಮತ್ತು ಕೇಂದ್ರ ಸರಕಾರ ವಶಪಡಿಸಿಕೊಂಡಿರುವ 70 ಎಕರೆ ಭೂಮಿಯನ್ನು ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ನೀಡಬೇಕು ಎಂದು ಒಡೆತನವನ್ನು ಹಂಚಿ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದ ನಂತರ ನಡೆದ ಮೊತ್ತ ಮೊದಲ ಸಂತರ ಸಭೆಯಲ್ಲಿ ಸಂತರು ಬೇಡಿಕೆ ಮುಂದಿಟ್ಟಿದ್ದಾರೆ.
ಅದೇ ಹೊತ್ತಿಗೆ ಅಯೋಧ್ಯೆಯ ವಿವಾದಿತ ಸ್ಥಳದ ಆವರಣದಲ್ಲಿ ಮಸೀದಿ ನಿರ್ಮಾಣಕ್ಕೆ ಅವಕಾಶ ನೀಡುವ ಪ್ರಸ್ತಾಪವನ್ನು ಸಮಿತಿಯು ಖಂಡಾತುಂಡವಾಗಿ ತಿರಸ್ಕರಿಸಿದೆ. ಅಲ್ಲದೆ ಮತ್ತೂ ಮುಂದುವರಿದಿರುವ ಸಂತರು, ಅಯೋಧ್ಯೆಯ ಪವಿತ್ರ ನಗರದ ಎಲ್ಲಿಯೂ ನೂತನ ಮಸೀದಿ ನಿರ್ಮಾಣಕ್ಕೆ ತಾವು ಒಪ್ಪಿಗೆ ಸೂಚಿಸುವುದಿಲ್ಲ ಎಂದಿದ್ದಾರೆ.
ಅಯೋಧ್ಯೆ ಒಡೆತನದ ವಾದಿಯಲ್ಲೊಬ್ಬರಾಗಿರುವ, 'ರಾಮ್ ಲಲ್ಲಾ ವಿರಾಜಮಾನ್'ವನ್ನು ಪ್ರತಿನಿಧಿಸುತ್ತಿರುವ ವಕೀಲ ತ್ರಿಲೋಕ್ ನಾಥ್ ಪಾಂಡೆಯವರು ಸುಪ್ರೀಂ ಕೋರ್ಟಿಗೆ ಹೋಗಲಿದ್ದಾರೆ ಎಂದು ಸ್ವಾಮಿ ವಾಸುದೇವಾನಂದ್ ಸರಸ್ವತಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್, ಅಯೋಧ್ಯೆಯ ಜಮೀನನ್ನು ವಿಭಾಗ ಮಾಡದೇ ಇರುವುದೇ ಸಮಸ್ಯೆಗೆ ಸೂಕ್ತ ಮತ್ತು ಏಕೈಕ ಪರಿಹಾರ ಎಂದರು.
ವಿವಾದಿತ ಸ್ಥಳದಲ್ಲೇ ಭವ್ಯ ರಾಮಮಂದಿರ ನಿರ್ಮಾಣವಾಗಬೇಕು. ಈ ಸಂಬಂಧ ಕೇಂದ್ರ ಸರಕಾರವು ಕಾನೂನೊಂದನ್ನು ರೂಪಿಸಬೇಕು. ಸಂತರ ಉಚ್ಚಾಧಿಕಾರ ಸಮಿತಿಯು ಅಕ್ಟೋಬರ್ 23 ಅಥವಾ 24ರಂದು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಕಾನೂನು ತರುವಂತೆ ಒತ್ತಾಯಿಸಲಿದೆ ಎಂದು ಸಿಂಘಾಲ್ ಹೇಳಿದರು.