ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 70,000 ಕೋಟಿ ಎಲ್ಲಿ, 29 ಲಕ್ಷ ಎಲ್ಲಿ?; ಪ್ರಶ್ನೆ ಕಾಂಗ್ರೆಸ್‌ಗೆ
(CWG 2010 | Emaar MGFC | S Jaipal Reddy | Suresh Kalmadi)
70,000 ಕೋಟಿ ಎಲ್ಲಿ, 29 ಲಕ್ಷ ಎಲ್ಲಿ?; ಪ್ರಶ್ನೆ ಕಾಂಗ್ರೆಸ್‌ಗೆ
ನವದೆಹಲಿ, ಗುರುವಾರ, 21 ಅಕ್ಟೋಬರ್ 2010( 11:34 IST )
ದೇಶದಲ್ಲಿ ನಡೆದ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ಗೆ ಒಟ್ಟು ಖರ್ಚು ಮಾಡಲಾಗಿರುವುದು 70,000 ಕೋಟಿ ರೂಪಾಯಿಗಳಿಗೂ ಹೆಚ್ಚು. ಇದರಲ್ಲಿ ಯಾರೆಲ್ಲ ಭಾಗವಹಿಸಿದ್ದಾರೆಂದು ಜನಸಾಮಾನ್ಯನೂ ಊಹಿಸಬಹುದಾದ ವಿಚಾರ. ಆದರೆ ಕೇವಲ 29 ಲಕ್ಷ ರೂಪಾಯಿಗಳ ಗುತ್ತಿಗೆ ಪಡೆದಿದ್ದ ಕಂಪನಿಯೊಂದನ್ನು ಸರಕಾರವು ತನ್ನ ಏಜೆನ್ಸಿಗಳ ಮೂಲಕ ಹಿಂಡಿ ಹಿಪ್ಪೆ ಮಾಡುತ್ತಿದೆ.
ಇದಕ್ಕಿರುವ ಏಕೈಕ ಕಾರಣ ಕಾಂಗ್ರೆಸ್ ಸಂಸದ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಸಂಘಟನಾ ಸಮಿತಿಯ ಅಧ್ಯಕ್ಷ ಸುರೇಶ್ ಕಲ್ಮಾಡಿ ಮೇಲೆ ಕೇಂದ್ರೀಕೃತವಾಗಿರುವ ಗಮನವನ್ನು ಬೇರೆಡೆಗೆ ಹರಿಸುವುದು. ಇಲ್ಲಿ ಮತ್ತೊಂದು ಹೇಳಲೇಬೇಕಾದ ವಿಚಾರವೆಂದರೆ 29 ಲಕ್ಷ ರೂಪಾಯಿಗಳ ಗುತ್ತಿಗೆ ಪಡೆದಿರುವ ಕಂಪನಿಯ ಮಾಲಕ ಬಿಜೆಪಿ ನಾಯಕನಾಗಿರುವುದು!
ಹೌದು, ಅವರ ಹೆಸರು ಸುಧಾಂಶು ಮಿತ್ತಲ್. ತಾನು ನಿರಪರಾಧಿ, ರಾಜಕೀಯ ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಈ ಬಿಜೆಪಿ ನಾಯಕ ಈಗ ಅಲವತ್ತುಕೊಳ್ಳುತ್ತಿದ್ದಾರೆ. ಅವರು ಅಕ್ರಮ ಎಸಗಿರುವುದು ನಿಜವೋ, ಸುಳ್ಳೋ -- ಎಸಗಿದ್ದರೆ ಶಿಕ್ಷೆ ಆಗಲೇಬೇಕು. ಆದರೆ ಕೇವಲ 29 ಲಕ್ಷ ರೂಪಾಯಿಗಳ ಗುತ್ತಿಗೆ ಪಡೆದವನನ್ನು ಸರಕಾರ ಅಲುಗಾಡಿಸುತ್ತಿರುವುದರ ಹಿಂದಿನ ಮರ್ಮ ಮಾತ್ರ ತಿಳಿಯುತ್ತಿಲ್ಲ.
ಸ್ವತಃ ಕಲ್ಮಾಡಿ ಮತ್ತು ಅವರ ಸಂಬಂಧಿಕರು ಬೇನಾಮಿ ಹೆಸರಿನಲ್ಲಿ ಅಕ್ರಮವಾಗಿ ನಡೆಯದ ಕಾಮಗಾರಿಗಳಿಗೆ ಕೋಟಿಗಟ್ಟಲೆ ಹಣ ಪಡೆದುಕೊಂಡಿದ್ದಾರೆ. ಕೇಂದ್ರ ಮತ್ತು ದೆಹಲಿಯ ಕಾಂಗ್ರೆಸ್ ಸರಕಾರದ ಹಲವು ಮಂತ್ರಿಗಳು, ನಾಯಕರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳ ತನಿಖೆ ನಡೆಸುವುದನ್ನು ಬಿಟ್ಟು, ದೊಡ್ಡ ಮೊತ್ತದ ಎದುರು ಜುಜುಬಿ ಎನಿಸಿರುವುದರ ಹಿಂದೆ ಸರಕಾರ ಬಿದ್ದಿದೆ.
ಬಿಜೆಪಿ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಪ್ರಮೋದ್ ಮಹಾಜನ್ ಅವರ ಆಪ್ತರಾಗಿದ್ದವರು ಎಂದು ಹೇಳಲಾಗಿರುವ ಮಿತ್ತಲ್ ಅವರ ಕಂಪನಿ 'ದೆಹಲಿ ಟೆಂಟ್ಸ್ ಎಂಡ್ ಡೆಕೋರೇಟಿವ್' ಕಾಮನ್‌ವೆಲ್ತ್ ಏಜೆನ್ಸಿಗಳೊಂದಿಗೆ 29 ಲಕ್ಷ ರೂಪಾಯಿಗಳ ಗುತ್ತಿಗೆ ಪಡೆದಿತ್ತು.
ದೀಪಾಲಿ ಡಿಸೈನ್ಸ್ ಕಂಪನಿಯ ಜತೆಗಿನ ಸಂಬಂಧದ ಕುರಿತು ಪ್ರಶ್ನಿಸಿದಾಗ, ನಾನು ಆ ಕಂಪನಿಯ ಸ್ವತಂತ್ರ ನಿರ್ದೇಶಕನಾಗಿ ಫೆಬ್ರವರಿಯಲ್ಲಿ ಸೇರಿಕೊಂಡಿದ್ದೆ. ಆದರೆ ಜುಲೈಯಲ್ಲಿಯೇ ರಾಜೀನಾಮೆ ನೀಡಿದ್ದೆ ಎಂದಿದ್ದಾರೆ.
ಗೇಮ್ಸ್‌ನಲ್ಲಿ 230 ಕೋಟಿ ರೂಪಾಯಿಗಳ ಗುತ್ತಿಗೆ ಪಡೆದಿರುವ ದೀಪಾಲಿ ಡಿಸೈನ್ಸ್ ಕಂಪನಿಯಲ್ಲಿ ನಾನು ಅಥವಾ ನನ್ನ ಕುಟುಂಬವು ಒಂದೇ ಒಂದು ಶೇರು ಹೊಂದಿಲ್ಲ. ನಾನು ನಿರ್ದೇಶಕನಾಗುವ ಮೊದಲೇ ಕಂಪನಿಯು ಗೇಮ್ಸ್ ಯೋಜನೆಗಳಿಗೆ ಬಿಡ್ ಮಾಡಿತ್ತು. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಈ ಆರೋಪಿ ಮಿತ್ತಲ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿತ್ತು. ಆದರೆ ಈ ಬಗ್ಗೆ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರಲ್ಲಿ ಪ್ರಶ್ನಿಸಿದಾಗ ವ್ಯತಿರಿಕ್ತ ಉತ್ತರ ನೀಡಿದ್ದಾರೆ.
ಯಾವ ಸುಧಾಂಶು ಮಿತ್ತಲ್? ಅವರು ಯಾರೆಂದು ನನಗೆ ಗೊತ್ತಿಲ್ಲ. ಅವರ ಬಗ್ಗೆ ನಮಗೆ ಯಾವುದೇ ಕಳವಳಗಳಿಲ್ಲ ಎಂದು ಗಡ್ಕರಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಸುಧಾಂಶು, ನಾನು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ. ಅವರು ಏನು ಹೇಳಿದ್ದಾರೆಂದು ನನಗೆ ಗೊತ್ತಿಲ್ಲ. ನಾನು ಯಾವುದೇ ಅಕ್ರಮ ಎಸಗಿಲ್ಲ. ಇದನ್ನು ಯಾರು ಬೇಕಾದರೂ ಪರಿಶೀಲನೆ ನಡೆಸಬಹುದು ಎಂದಿದ್ದಾರೆ.
ಭ್ರಷ್ಟಾಚಾರ ನಡೆದಿದೆ: ಸರಕಾರ ಗೇಮ್ಸ್‌ನಲ್ಲಿ ಭಾರೀ ಭ್ರಷ್ಟಾಚಾರ ನಡೆದಿರುವುದು ಹೌದು ಎಂದು ಕೊನೆಗೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಅಕ್ರಮ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಈ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ಅಭಿವೃದ್ಧಿ ಪ್ರಾಧಿಕಾರವು ತನ್ನ ಮಧ್ಯಂತರ ವರದಿಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಿದೆ. ಗೇಮ್ಸ್‌ನಲ್ಲಿ ಭಾರೀ ಅಕ್ರಮಗಳು ನಡೆದಿರುವುದು ಹೌದು, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವರದಿ ತಿಳಿಸಿದೆ.
ವರದಿಯಲ್ಲಿ ಹೇಳಲಾಗಿರುವ ಕೆಲವು ಪ್ರಮುಖ ಅಂಶಗಳು ಹೀಗಿವೆ.
* ಗೇಮ್ಸ್ ಕಾಮಗಾರಿಯಲ್ಲಿ ಭಾರೀ ಅಕ್ರಮ ನಡೆದಿರುವುದು ಹೌದು. * ಕ್ರೀಡಾಂಗಣಗಳು ಮತ್ತಿತರ ನಿರ್ಮಾಣದಲ್ಲಿ ಅಗತ್ಯಕ್ಕಿಂತ ಹೆಚ್ಚು ಖರ್ಚು ನಡೆದಿದೆ. * ಯೋಜನೆಯ ಹೊಣೆ ಹೊತ್ತ ಕಂಪನಿ ವಿರುದ್ಧ ಕ್ರಮ ಅಗತ್ಯ. * ದುಬಾರಿ ಹಣ ಪಡೆದು ಕಳಪೆ ಫ್ಲಾಟ್‌ಗಳ ನಿರ್ಮಾಣ ಮಾಡಲಾಗಿದೆ. * ಕಾಮಗಾರಿ ಮತ್ತು ಅದರ ಹಸ್ತಾಂತರದಲ್ಲಿ ಅನಗತ್ಯ ವಿಳಂಬ. * ಗೇಮ್ಸ್‌ಗೆ 70,000 ಕೋಟಿ ರೂ. ಖರ್ಚು ಮಾಡಿರುವುದು ಸುಳ್ಳು. * ಗೇಮ್ಸ್‌ಗೆ ಒಟ್ಟು ವ್ಯಯವಾಗಿರುವುದು ಕೇವಲ 30,000 ಕೋಟಿ ರೂ. * ಕ್ರೀಡಾ ಸಚಿವಾಲಯ ವೆಚ್ಚ ಮಾಡಿದ್ದು 11,494 ಕೋಟಿ ರೂಪಾಯಿ. * ದೆಹಲಿ ಸರಕಾರ ಖರ್ಚು ಮಾಡಿದ್ದು 16,000 ಕೋಟಿ ರೂಪಾಯಿ. * ಖಾಸಗಿ ಗುತ್ತಿಗೆದಾರ ಇಎಂಎಎಆರ್ ಕಂಪನಿಯ ಬ್ಯಾಂಕ್ ಖಾತರಿ 183 ಕೋಟಿ ರೂ. ಮುಟ್ಟುಗೋಲು.