ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಡ್ಕರಿಯನ್ನು 'ಕೆಟ್ಟ ಮಗ' ಎಂದ ಕಾಂಗ್ರೆಸ್; ಬಿಜೆಪಿ ಕಿಡಿ (BJP | Congress | Nitin Gadkari | Manish Tewari)
Bookmark and Share Feedback Print
 
ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರನ್ನು ಕಾಂಗ್ರೆಸ್ 'ಕೆಟ್ಟ ಮಗ' ಎಂದು ಟೀಕಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಪ್ರಜಾಪ್ರಭುತ್ವದಲ್ಲಿ ಇಂತಹ ಮಾತಿಗೆ ಅವಕಾಶವೇ ಇಲ್ಲ, ಇದು ಅನಾಗರಿಕತೆ ಮತ್ತು ವೈಯಕ್ತಿಕ ನಿಂದನೆ ಎಂದಿದೆ.

ಕಾಮನ್‌ವೆಲ್ತ್ ಗೇಮ್ಸ್ ಅವ್ಯವಹಾರದಲ್ಲಿ ಪ್ರಧಾನ ಮಂತ್ರಿಯವರ ಕಚೇರಿಯನ್ನು ಎಳೆದು ತರಲು ಯತ್ನಿಸಿದ್ದ ಗಡ್ಕರಿಯವರನ್ನು ತರಾಟೆಗೆ ತೆಗೆದುಕೊಳ್ಳುತ್ತಾ, ಬಿಜೆಪಿ ಅಧ್ಯಕ್ಷ ಒಬ್ಬ ಕೆಟ್ಟ ಮಗ (spoilt brat); ಇತರರ ಗಮನ ಸೆಳೆಯಲು ಯಾವುದೇ ಅತಿರೇಕಕ್ಕೂ ಹೋಗಲು ಸಿದ್ಧವಿರುವ ವ್ಯಕ್ತಿ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಹೇಳಿದ್ದರು.

ಗೇಮ್ಸ್ ಅವ್ಯವಹಾರದ ತನಿಖೆಯಲ್ಲಿ ಕೆಲವು ಬಿಜೆಪಿ ನಾಯಕರು ಸಿಕ್ಕಿ ಬಿದ್ದಿರುವುದರಿಂದ ಗಡ್ಕರಿಯವರಲ್ಲಿ ಭೀತಿ ಹುಟ್ಟಿದೆ. ಹೆದರಿಕೊಂಡಿದ್ದಾರೆ. ಬಹುಶಃ ಭ್ರಷ್ಟಾಚಾರದ ತನಿಖೆ ಅವರ ಕಾಲಬುಡಕ್ಕೆ ಬರಬಹುದು ಎಂಬ ಭೀತಿ ಅವರದ್ದು. ಅದೇ ಕಾರಣದಿಂದ ಅವರು ಗಮನ ವಿಕೇಂದ್ರೀಕರಣಗೊಳಿಸಲು ಪತ್ರಿಕಾಗೋಷ್ಠಿ ಕರೆದಿದ್ದರು ಎಂದು ತಿವಾರಿ ಟೀಕಿಸಿದ್ದರು.

ಗೇಮ್ಸ್ ಅವ್ಯವಹಾರದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದಿದ್ದ ಗಡ್ಕರಿಯವರನ್ನು ತರಾಟೆಗೆ ತೆಗೆದುಕೊಳ್ಳುತ್ತಾ, 'ಬಿಜೆಪಿ ಅಧ್ಯಕ್ಷರು ಹೇಳಿರುವುದರಲ್ಲಿ ಹೊಸತೇನೂ ಇಲ್ಲ. ಇವೆಲ್ಲವನ್ನೂ ಬಿಜೆಪಿ ಲೋಕಸಭೆಯಲ್ಲಿ ಪ್ರಸ್ತಾಪಿಸಿತ್ತು. ಇದಕ್ಕಿಂತ ಹೆಚ್ಚಿನ ಮಾಹಿತಿಯೇನಾದರೂ ಪಕ್ಷದಲ್ಲಿದ್ದರೆ ಅದನ್ನು ಪ್ರಧಾನ ಮಂತ್ರಿಯವರು ರಚಿಸಿರುವ ತನಿಖಾ ಸಮಿತಿಯ ಮುಂದಿಡಲಿ' ಎಂದರು.

ಬಿಜೆಪಿ ಖಾರ ಪ್ರತಿಕ್ರಿಯೆ...
ನಿತಿನ್ ಗಡ್ಕರಿಯವರನ್ನು ಕೆಟ್ಟ ಮಗ ಎಂದು ಜರೆದಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಇದು ಅನಾಗರಿಕ, ವೈಯಕ್ತಿಕ ನಿಂದನೆ ಮತ್ತು ಇಂತಹ ಮಾತುಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿಲ್ಲ ಎಂದಿದೆ.

ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರ ವಿರುದ್ಧ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಬಳಸಿರುವ ಒರಟು, ವೈಯಕ್ತಿಕ ಹೇಳಿಕೆಗಳು ಅವರ ಅನಾಗರಿಕ ವರ್ತನೆಯನ್ನು ತೋರಿಸುತ್ತಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಂಗ್ರೆಸ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಹಕ್ಕು ಹೊಂದಿದೆ. ಆದರೆ ಅದು ಅನಾಗರಿಕ ರೀತಿಯಲ್ಲಿರಬಾರದು. ನೀವು ಮಾತನಾಡಿದಂತೆ ನಮಗೂ ಮಾತನಾಡಲು ಬರುತ್ತದೆ. ಆದರೆ ಅದು ನಮ್ಮ ದಾರಿಯಲ್ಲ, ನಾವು ಆ ದಾರಿಯಲ್ಲಿ ಸಾಗುವ ಸಿದ್ಧಾಂತಗಳನ್ನು ಹೊಂದಿಲ್ಲ ಎಂದರು.

ಇಂತಹ ಹೇಳಿಕೆಗಳನ್ನು ಜನತೆ ಸಹಿಸುವುದಿಲ್ಲ ಎಂದಿರುವ ಜಾವಡೇಕರ್, ತನ್ನ ಪಕ್ಷಕ್ಕೂ ಓರ್ವ ಅಧ್ಯಕ್ಷರಿದ್ದಾರೆ ಎಂಬುದನ್ನು ಕಾಂಗ್ರೆಸ್ ಜ್ಞಾಪಿಸಿಕೊಳ್ಳಲಿ. ಆದರೆ ನಾವು ಅಂತಹ ಸ್ವರೂಪದ ಹೇಳಿಕೆಗಳನ್ನು ನೀಡುವುದಿಲ್ಲ. ಆದರೆ ಇದು ನಮ್ಮಿಂದ ಸಾಧ್ಯವಾಗದ ಕೆಲಸವೇನೂ ಅಲ್ಲ. ರಾಜಕೀಯ ವಾಗ್ಯುದ್ಧಕ್ಕೂ ಒಂದು ಸಭ್ಯತೆಯಿದೆ. ಇದನ್ನು ಕಾಂಗ್ರೆಸ್ ಕಲಿಯಬೇಕು, ಮಿತಿ ಮೀರಬಾರದು ಎಂದು ಎಚ್ಚರಿಕೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ