ಕಳೆದ ಒಂದು ವರ್ಷದ ಅವಧಿಯಲ್ಲಿ ದೇಶದ ಆಂತರಿಕ ರಕ್ಷಣೆಗಾಗಿ ಸರಿಸುಮಾರು 800ರಷ್ಟು ಪೊಲೀಸರು ಮತ್ತು ಭದ್ರತಾ ಸಿಬ್ಬಂದಿಗಳು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಇದರಲ್ಲಿ ಗರಿಷ್ಠ ಸ್ಥಾನ ಪಡೆದಿರುವುದು ಕೇಂದ್ರ ಮೀಸಲು ಪೊಲೀಸ್ ಪಡೆ. ಈ ಪಡೆಯ 191 ಮಂದಿ ಸಿಬ್ಬಂದಿಗಳು ಕಾರ್ಯಾಚರಣೆ ಸಂದರ್ಭದಲ್ಲಿ ಬಲಿಯಾಗಿದ್ದಾರೆ.
2009ರ ಸೆಪ್ಟೆಂಬರ್ 1ರಿಂದ ಈ ವರ್ಷದ ಆಗಸ್ಟ್ 31ರ ನಡುವೆ ವಿವಿಧ ರಾಜ್ಯಗಳ ಪೊಲೀಸ್ ಹಾಗೂ ಅರೆ ಸೇನಾಪಡೆಗಳಾದ ಗಡಿ ಭದ್ರತಾ ಪಡೆ (ಬಿಎಸ್ಎಫ್), ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ರಾಷ್ಟ್ರೀಯ ಭದ್ರತಾ ಪಡೆಗಳು (ಎನ್ಎಸ್‌ಜಿ) ಸೇರಿದಂತೆ ಒಟ್ಟು 797 ಮಂದಿ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ.
ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿರುವ ಸಿಆರ್‌ಪಿಎಫ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದೆ. ಛತ್ತೀಸ್‌ಗಢದ ದಂತೇವಾಡದಲ್ಲಿ ಏಕಕಾಲದಲ್ಲಿ 76 ಮಂದಿ ಬಲಿಯಾಗಿರುವುದೂ ಸೇರಿದಂತೆ ಒಟ್ಟು 191 ಸಾವನ್ನು ಈ ಪಡೆ ಕಂಡಿದೆ.
ಉತ್ತರ ಪ್ರದೇಶ ಪೊಲೀಸ್ ಪಡೆಯ 99 ಮತ್ತು ಬಿಎಸ್ಎಫ್‌ನಲ್ಲಿ 64 ಯೋಧರು ಬಲಿಯಾಗಿದ್ದಾರೆ. ಉತ್ತರ ಪ್ರದೇಶದ ನಂತರದ ಸ್ಥಾನ ಪಂಜಾಬ್‌ನದ್ದು. ಇಲ್ಲಿ 57 ಪೊಲೀಸರು ಹುತಾತ್ಮರಾಗಿದ್ದಾರೆ. ನಕ್ಸಲ್ ಬಾಧಿತ ರಾಜ್ಯಗಳಾದ ಜಾರ್ಖಂಡ್ ಮತ್ತು ಛತ್ತೀಸ್‌ಗಢಗಳಲ್ಲಿ ಕ್ರಮವಾಗಿ 43 ಮತ್ತು 21 ಪೊಲೀಸರ ಸಾವುಗಳು ಸಂಭವಿಸಿವೆ.
ಜಮ್ಮು-ಕಾಶ್ಮೀರದಲ್ಲಿ 49, ಪಶ್ಚಿಮ ಬಂಗಾಲದಲ್ಲಿ 48, ಸಶಸ್ತ್ರ ಸೀಮಾ ಬಲ ಪಡೆಯಲ್ಲಿ 29, ರೈಲ್ವೇ ರಕ್ಷಣಾ ದಳದ 18, ಕೇಂದ್ರ ಕೈಗಾರಿಕಾ ರಕ್ಷಣಾ ದಳದ 8 ಹಾಗೂ ಇಂಡೋ-ಟಿಬೆಟಿಯನ್ ಗಡಿಭದ್ರತಾ ಪಡೆಯ 6 ಸಿಬ್ಬಂದಿಗಳು ಬಲಿಯಾಗಿದ್ದಾರೆ.
2008ರ ಸೆಪ್ಟೆಂಬರ್‌ನಿಂದ ಕಳೆದ ವರ್ಷದ ಆಗಸ್ಟ್ ತಿಂಗಳ ನಡುವೆ 841 ಭದ್ರತಾ ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಇದರಲ್ಲಿ ಅಗ್ರ ಸ್ಥಾನ ಪಡೆದದ್ದು ಉತ್ತರ ಪ್ರದೇಶ ಪೊಲೀಸ್. ನಂತರದ ಸ್ಥಾನಗಳಲ್ಲಿ ಸಿಆರ್‌ಪಿಎಫ್ (81) ಮತ್ತು ಬಿಎಸ್‌ಎಫ್ (72) ಕಾಣಿಸಿಕೊಂಡಿದ್ದವು.
ಗುರುವಾರ ರಾಷ್ಟ್ರದಾದ್ಯಂತ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಗಿದೆ. ವಿವಿಧೆಡೆ ಸ್ಥಾಪಿಸಲಾಗಿರುವ ಯೋಧರು ಮತ್ತು ಪೊಲೀಸ್ ಸಿಬ್ಬಂದಿಗಳ ಸ್ಮಾರಕಗಳಿಗೆ ಭದ್ರತಾ ಪಡೆಗಳು ತಮ್ಮ ಗೌರವವನ್ನು ಅರ್ಪಿಸಿವೆ. ಈ ಹಿನ್ನೆಲೆಯಲ್ಲಿ ಒಟ್ಟಾರೆ ಕಳೆದ ಒಂದು ವರ್ಷದಲ್ಲಿ ಹುತಾತ್ಮರಾದ ಭದ್ರತಾ ಪಡೆಗಳ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಲಾಗಿದೆ.