ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಅವಳಿ-ತ್ರಿವಳಿಯೆಂದು ಹೆರಿಗೆ ರಜೆ ನಿರಾಕರಿಸುವುದು ತಪ್ಪು' (Maternity leave | Madras High Court | India | Tamil Nadu)
Bookmark and Share Feedback Print
 
ಸರಕಾರಿ ಹುದ್ದೆಯಲ್ಲಿರುವ ಮಹಿಳೆಯೊಬ್ಬಳು ತನ್ನ ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆಂಬ ಕಾರಣವನ್ನು ಮುಂದಿಟ್ಟುಕೊಂಡು ಆಕೆಯ ಎರಡನೇ ಹೆರಿಗೆಗೆ ನೀಡಬೇಕಾದ ಹೆರಿಗೆ ರಜೆಯನ್ನು ನಿರಾಕರಿಸುವುದು ಸರಿಯಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.

ಇಬ್ಬರು ಮಕ್ಕಳನ್ನು ಹೊಂದಿರುವ ರಾಜ್ಯ ಸರಕಾರಿ ಮಹಿಳಾ ನೌಕರೆಗೆ ನಂತರದ ಹೆರಿಗೆಗಾಗಿ ರಜೆಯ ಸೌಲಭ್ಯ ನೀಡಲು ಸಾಧ್ಯವಿಲ್ಲ ಎಂಬ ತಮಿಳುನಾಡು ಸರಕಾರದ 1997ರ ಜುಲೈ 27ರ ಆದೇಶವನ್ನು ಪ್ರಶ್ನಿಸಿ ಮಹಿಳಾ ಶಿಕ್ಷಕಿಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಹೆರಿಗೆ ರಜೆಯನ್ನು ನಿಯಂತ್ರಿಸುವುದು ಮಹಿಳಾ ನೌಕರೆಯೊಬ್ಬಳಿಗೆ ಪ್ರತಿ ಹೆರಿಗೆಯಲ್ಲಿ ಎಷ್ಟು ಮಕ್ಕಳಾದುವು ಎಂಬುದನ್ನು ಆಧರಿಸಿ ಅಲ್ಲ, ಆಕೆ ಎರಡನೇ ಹೆರಿಗೆಗೆ ಒಳಗಾಗುವವರೆಗೆ ಎಂದು ನ್ಯಾಯಮೂರ್ತಿ ಕೆ. ಚಂದ್ರು ಅವರು ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.

ಈ ರೀತಿಯಾಗಿ ಇದನ್ನು ಅರ್ಥೈಸಿಕೊಳ್ಳದಿದ್ದರೆ, ನಗೆಪಾಟಲಿಗೀಡಾಗಬೇಕಾದ ಪರಿಣಾಮಗಳು ನಮ್ಮ ಮುಂದೆ ಎದುರಾಗಬಹುದು. ಉದಾಹರಣೆಗೆ ಮೊದಲ ಹೆರಿಗೆಯಲ್ಲಿ ಸರಕಾರಿ ಮಹಿಳಾ ನೌಕರೆಯೊಬ್ಬಳು ಒಂದೇ ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ ಎರಡನೇ ಹೆರಿಗೆಯಲ್ಲಿ ಅವಳಿ ಅಥವಾ ತ್ರಿವಳಿಗಳಿಗೆ ಜನ್ಮ ನೀಡಿದರೆ ಆಕೆಯನ್ನು ಅನರ್ಹಗೊಳಿಸಬೇಕಾಗುತ್ತದೆಯೇ ಎಂದು ನ್ಯಾಯಮೂರ್ತಿ ಪ್ರಶ್ನಿಸಿದರು.

ಇಲ್ಲಿ ಪ್ರಮುಖವಾಗಿ ನೋಡಬೇಕಾಗಿರುವುದು ಸರಕಾರಿ ಮಹಿಳಾ ನೌಕರೆಯ ಆರೋಗ್ಯ ದೃಷ್ಟಿಯನ್ನು. ಈ ವಿಚಾರವನ್ನು ಸಂವಿಧಾನದಲ್ಲೇ ಸ್ಪಷ್ಟಪಡಿಸಲಾಗಿದೆ. ಮಹಿಳೆಯನ್ನು ಯಾವುದೇ ಕಾರಣಕ್ಕೂ ಆಕೆಯ ಹೆರಿಗೆಯ ಕಾರಣಕ್ಕಾಗಿ ಶೋಷಣೆ ನಡೆಸುವಂತಿಲ್ಲ ಎಂದು ಹೇಳಿದೆ ಎಂದು ವಿವರಣೆ ನೀಡಿದರು.

ಮಹಿಳಾ ನೌಕರರಿಗೆ ಮಾನವೀಯ ನೆಲೆಯಲ್ಲಿ ಹೆರಿಗೆ ವಿಶ್ರಾಂತಿಯನ್ನು ಒದಗಿಸುವ ನಿಯಮಗಳನ್ನು ರಾಜ್ಯ ಜಾರಿಗೆ ತರಬೇಕು ಎಂದು ಸಂವಿಧಾನದಲ್ಲಿ ಹೇಳಲಾಗಿದೆ. ಇದನ್ನು 11 ವರ್ಷಗಳ ನಂತರ ಅಂದರೆ 1961ರಲ್ಲಿ ಸಂಸತ್ ಜಾರಿಗೆ ತಂದಿತ್ತು.

ಮಹಿಳೆಗೆ ಆಕೆಯ ವಯಸ್ಸು, ರಾಷ್ಟ್ರೀಯತೆ, ಜನಾಂಗ ಅಥವಾ ಇನ್ಯಾವುದೇ ಕಾರಣಗಳನ್ನು ಮುಂದೊಡ್ಡಿ ಹೆರಿಗೆ ರಕ್ಷಣೆಯನ್ನು ನಿರಾಕರಿಸುವಂತಿಲ್ಲ ಎಂದು ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆಯು ನಿಲುವೊಂದನ್ನು ಹಲವಾರು ದಶಕಗಳ ಹಿಂದೆಯೇ ಅಂಗೀಕರಿಸಿತ್ತು ಎನ್ನುವುದನ್ನು ಕೂಡ ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ಉಲ್ಲೇಖಿಸಿದರು.
ಸಂಬಂಧಿತ ಮಾಹಿತಿ ಹುಡುಕಿ