ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾಭಾ ಅಣು ಸಂಶೋಧನಾ ಕೇಂದ್ರ ಚಿತ್ರೀಕರಿಸಿದ್ದ ಹೆಡ್ಲಿ
(David Headley | Bhabha Atomic Research Centre | Mumbai attacks | ISI)
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನಿವಾಸದ ಹೊರ ಆವರಣವನ್ನು ಚಿತ್ರೀಕರಿಸಿದ್ದ ಲಷ್ಕರ್ ಇ ತೋಯ್ಬಾ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಯಾನೆ ದಾವೂದ್ ಸಯ್ಯದ್ ಗಿಲಾನಿ, ತಾನು ಪಾಕಿಸ್ತಾನದ ಐಎಸ್ಐಗಾಗಿ ಭಾಭಾ ಅಣು ಸಂಶೋಧನಾ ಕೇಂದ್ರವನ್ನೂ ಕ್ಯಾಮರಾದಲ್ಲಿ ಸೆರೆ ಹಿಡಿದಿರುವುದಾಗಿ ಹೇಳಿದ್ದಾನೆ.
ರಾಷ್ಟ್ರೀಯ ತನಿಖಾ ದಳವು ಚಿಕಾಗೋಗೆ ತೆರಳಿ ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ಇದನ್ನು ಹೆಡ್ಲಿ ಬಹಿರಂಗಪಡಿಸಿದ್ದಾನೆ.
ಐಎಸ್‌ಐಯ ಮೇಜರ್ ಇಕ್ಬಾರ್ ಎಂಬಾತ 2008ರ ಮಾರ್ಚ್‌ನಲ್ಲಿ ಮುಂಬೈನಲ್ಲಿನ ಭಾಭಾ ಅಣು ಸಂಶೋಧನಾ ಕೇಂದ್ರದ ವಿವರಗಳನ್ನು ವೀಡಿಯೋ ಚಿತ್ರೀಕರಣದ ಮೂಲಕ ಒದಗಿಸುವಂತೆ ಕೇಳಿಕೊಂಡಿದ್ದ. ಅಲ್ಲಿನ ನೌಕರರ ಕಾಲೊನಿಯನ್ನು ಪ್ರಮುಖ ಗುರಿಯನ್ನಾಗಿ ಮಾಡಲಾಗಿತ್ತು. ಅದಕ್ಕಾಗಿ ಇಕ್ಬಾಲ್ ನನಗೆ ಕ್ಯಾಮರಾ ಹೊಂದಿರುವ ಮೊಬೈಲ್ ಮತ್ತು ಒಂದಷ್ಟು ಹಣವನ್ನು ಕೊಟ್ಟಿದ್ದ.
ಅದರಂತೆ ಮುಂಬೈಗೆ ಹೋಗಿ ಚಿತ್ರೀಕರಣ ನಡೆಸಿದ್ದ ಹೆಡ್ಲಿ, ಇದನ್ನು ಇಕ್ಬಾಲ್‌ಗೆ ನೀಡಿದ್ದ. ಆದರೆ ಲಷ್ಕರ್ ಇ ತೋಯ್ಬಾದ ತನ್ನ ಸಹವರ್ತಿಗೆ ಈ ವೀಡಿಯೋವನ್ನು ನೀಡಿರಲಿಲ್ಲ ಎಂದು ವರದಿಗಳು ಹೇಳಿವೆ.
ಹೆಡ್ಲಿಯ ಈ ಹೇಳಿಕೆಯೊಂದಿಗೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐ ಮುಂಬೈ ದಾಳಿಯಲ್ಲಿ ಸಕ್ರಿಯ ಪಾತ್ರವಹಿಸಿರುವುದು ಮತ್ತಷ್ಟು ಸ್ಪಷ್ಟವಾಗಿದೆ. ಯೋಜನೆ ರೂಪಿಸುವುದು, ಹಣಕಾಸು ಸಹಕಾರ ಮತ್ತು ತರಬೇತಿಯನ್ನೂ ಐಎಸ್ಐ ನೀಡಿತ್ತು ಎಂದು ಹೆಡ್ಲಿ ಹೇಳುತ್ತಾ ಬಂದಿದ್ದಾನೆ.
ಐಎಸ್ಐ ಮತ್ತು ಲಷ್ಕರ್ ಇ ತೋಯ್ಬಾದ ಉನ್ನತ ನಾಯಕರು ಹೇಗೆ ಪರಸ್ಪರ ಸಂಬಂಧ ಹೊಂದಿದ್ದಾರೆ ಎಂದು ಜೈಲಿನಲ್ಲಿರುವ ಝಾಕೀರ್ ರೆಹಮಾನ್‌ನನ್ನು ಐಎಸ್ಐ ಮುಖ್ಯಸ್ಥ ಜನರಲ್ ಶೂಜಾ ಪಾಶಾ ಭೇಟಿಯಾಗಿದ್ದಾಗಲೇ ರುಜುವಾತಾಗಿತ್ತು. ಈತನಿಂದ ಸಂಪೂರ್ಣ ಮಾಹಿತಿಯನ್ನು ಪಾಶಾ ಪಡೆದಿದ್ದರು.
ಈ ಸಂಬಂಧ ಪಾಶಾ ಅವರನ್ನು ಅಮೆರಿಕಾ ಕರೆಸಿಕೊಂಡಿತ್ತು. ಮುಂಬೈ ದಾಳಿ ಬಗ್ಗೆ ಮಾಹಿತಿಗಳನ್ನು ನೀಡುವಂತೆ ಸೂಚಿಸಿತ್ತು. ಆದರೆ ಐಎಸ್ಐ ಅಧಿಕಾರಿಗಳು ಪಿತೂರಿಯಲ್ಲಿ ಪಾಲ್ಗೊಂಡಿದ್ದಾರೆ ಎಂಬುದನ್ನು ಒಪ್ಪಿಕೊಳ್ಳದ ಪಾಶಾ, ಕೆಲವು ಮಾಜಿ ಅಧಿಕಾರಿಗಳು ಪಾಲ್ಗೊಂಡಿದ್ದರು ಎಂದಷ್ಟೇ ತಿಳಿಸಿದ್ದರು.
ಆದರೆ ಅಮೆರಿಕಾ ನಂಬಿರುವ ಪ್ರಕಾರ ಮುಂಬೈ ದಾಳಿಯಲ್ಲಿ ಐಎಸ್ಐ ಮಹತ್ವದ ಪಾತ್ರವಹಿಸಿದೆ. ಇದನ್ನು ಸ್ವತಃ ಹೆಡ್ಲಿಯೇ ಅಮೆರಿಕಾದ ತನಿಖಾ ಅಧಿಕಾರಿಗಳಿಗೆ ತಿಳಿಸಿದ್ದಾನೆ.