ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್‌ಗೆ ಜೆಪಿ - ರಾಹುಲ್ ಗಾಂಧಿ ಸಮಾನರಂತೆ! (Congress | Rahul Gandhi | Bihar | Jai Prakash Narayan)
Bookmark and Share Feedback Print
 
ಲೋಕನಾಯಕ ಎಂದೇ ಪ್ರಸಿದ್ಧರಾಗಿದ್ದ ಜನಪ್ರಿಯ ಸಮಾಜವಾದಿ ಜಯಪ್ರಕಾಶ್ ನಾರಾಯಣ್ ಅವರಿಗೆ ಸಂಸದ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಹೋಲಿಕೆ ಮಾಡಿದೆ!

ಜೆಪಿಯವರಂತೆ ರಾಹುಲ್ ಗಾಂಧಿ ಕೂಡ ಬಿಹಾರದ ಭವಿಷ್ಯವನ್ನು ಪ್ರಗತಿಯತ್ತ ಸಾಗಿಸಲು ಸಹಾಯಕವಾಗುವರೆಂಬ ಭರವಸೆ ನಮ್ಮದು. ಈ ಯುವ ನಾಯಕ ಅಗತ್ಯಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿದ್ದಾರೆ. ರಾಹುಲ್ ನಮ್ಮ ದೇಶದ ಭವಿಷ್ಯ ಎಂದು ಪಕ್ಷ ಅಪಾದಮಸ್ತಕ ಬಣ್ಣಿಸಿದೆ.

ಪಂಡಿತ್ ನೆಹರೂ, ಅಬ್ದುಲ್ ಕಲಾಂ ಅವರು ದೇಶದ ಮಕ್ಕಳಿಗೆ ಹತ್ತಿರವಾಗಿದ್ದವರು. ಅದೇ ರೀತಿ ದೇಶದ ಯುವ ಜನರ ಭವಿಷ್ಯ, ಅವರ ಆಸಕ್ತಿ ಮತ್ತು ಅಗತ್ಯಗಳನ್ನು ಗಮನಿಸಿದವರು ಜಯಪ್ರಕಾಶ್ ನಾರಾಯಣ್ ಮತ್ತು ರಾಹುಲ್ ಗಾಂಧಿ ಎಂದು ಕಾಂಗ್ರೆಸ್ ವಕ್ತಾರ ಮೋಹನ್ ಪ್ರಕಾಶ್ ಹೇಳಿದ್ದಾರೆ.

ವಾಸ್ತವದಲ್ಲಿ ಕಾಂಗ್ರೆಸ್‌ನ ಕರಾಳ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಪ್ರಧಾನಿ ಇಂದಿರಾ ಗಾಂಧಿ ವಿರುದ್ಧ ಹೋರಾಡಿದವರಲ್ಲಿ ಜೆಪಿ ಪ್ರಮುಖರು. ಆದರೆ ಅಚ್ಚರಿ ಪಡುವಂತೆ ಇದೀಗ ಜೆಪಿಯವರನ್ನು ಕಾಂಗ್ರೆಸ್ ರಾಹುಲ್‌ಗೆ ಹೋಲಿಕೆ ಮಾಡಿದೆ.

ರಾಹುಲ್ ಗಾಂಧಿಯನ್ನು ಟೀಕಿಸುವವರ ವಿರುದ್ಧವೂ ಪ್ರಕಾಶ್ ಕಿಡಿ ಕಾರಿದ್ದಾರೆ. ರಾಹುಲ್ ದೇಶದ ಯುವ ಜನತೆಯ ಭವಿಷ್ಯ ಮತ್ತು ಪ್ರಗತಿಯ ಕುರಿತು ಮಾತನಾಡಿದ್ದಕ್ಕೆ ಎಲ್ಲಾ ಪಕ್ಷಗಳು ಜತೆಯಾಗಿ ಕಾಂಗ್ರೆಸ್ ವಿರುದ್ಧ ಹರಿ ಹಾಯ್ದವು ಎಂದರು.

ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಜನತೆ ಒಲವು ತೋರಿಸುವುದು ಖಚಿತ. ನಮ್ಮ ಎದುರಾಳಿ ಪಕ್ಷಗಳ ತಂತ್ರಗಳು ಈ ಬಾರಿ ಸಫಲವಾಗುವುದಿಲ್ಲ. ರಾಷ್ಟ್ರೀಯ ಜನತಾದಳ ಮತ್ತು ಲೋಕ ಜನಶಕ್ತಿ ಪಕ್ಷ ಹಾಗೂ ಸಂಯುಕ್ತ ಜನತಾದಳ ಮತ್ತು ಬಿಜೆಪಿಗಳ ಮೈತ್ರಿ ಕೂಟವು ಅನೈಸರ್ಗಿಕ ಮತ್ತು ಅಸ್ಥಿರವಾದುದು ಎಂದು ಪ್ರಕಾಶ್ ಟೀಕಿಸಿದ್ದಾರೆ.

ಈ ಎರಡೂ ಮಿತ್ರಕೂಟಗಳು ಹೊಂದಿರುವ ಅಭಿವೃದ್ಧಿಯ ಕಲ್ಪನೆ 20-30 ವರ್ಷ ಪುರಾತನವಾದುದು. 21ನೇ ಶತಮಾನ ಸಂಪೂರ್ಣವಾಗಿ ಕಾಂಗ್ರೆಸ್‌ಗೆ ಸೇರಿದ್ದು ಎಂದ ಅವರಲ್ಲಿ, ಕಾಂಗ್ರೆಸ್ ಇನ್ನೂ ಯಾಕೆ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿಲ್ಲ ಎಂದಾಗ ಅದಿನ್ನಷ್ಟೇ ಸಿದ್ಧವಾಗುತ್ತಿದೆ ಎಂದರು.

ಪಕ್ಷದ ನಾಯಕತ್ವ ಹೊಂದಿರುವ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರು ಪ್ರಗತಿಯ ಸಂಕೇತಗಳಾಗಿದ್ದಾರೆ. ನಮ್ಮ ಪಕ್ಷದ ಅಜೆಂಡಾ ಕೂಡ ಪ್ರಗತಿಯೇ ಆಗಿದೆ ಎಂದು ವಕ್ತಾರ ಅಭಿಪ್ರಾಯಪಟ್ಟರು.

ಪಕ್ಷದ ಕಾರ್ಯಕ್ರಮ ಮತ್ತು ನೀತಿಗಳನ್ನು ಈಗಾಗಲೇ ನಮ್ಮ ನಾಯಕರು ಭಾಷಣಗಳ ಮೂಲಕ ಬಿಹಾರದ ಜನತೆಗೆ ತಲುಪಿಸಿದ್ದಾರೆ. ನಮ್ಮದು ಪ್ರಗತಿಯ ಹಾದಿ. ಇಲ್ಲಿ ಪ್ರಣಾಳಿಕೆ ಪ್ರಮುಖ ವಿಚಾರವಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ