ಪಾಕಿಸ್ತಾನವು ಭಾರತ ವಿರೋಧಿ ಶಕ್ತಿಗಳಿಗೆ ನೆಲೆ ಒದಗಿಸುವುದನ್ನು ಮುಂದುವರಿಸುತ್ತಿದೆ ಎಂಬ ಸಂಕೇತವನ್ನು ನೀಡಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಭಾರತವು ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಉಗ್ರರಿಗಿಂತ ಯಾವತ್ತೂ ಒಂದು ಹೆಜ್ಜೆ ಮುಂದಿರುತ್ತದೆ ಎಂದಿದ್ದಾರೆ.
ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಯ ಮುಖ್ಯಸ್ಥರು ಹಾಗೂ ಭೂತಾನ್ ದೊರೆ ಜಿಗ್ಮೆ ಕೇಸರ್ ನಂಗ್ಯಾಲ್ ವಾಂಗ್ಚುಕ್ ಅವರ ಉಪಸ್ಥಿತಿಯಲ್ಲಿ ರಾಜಧಾನಿಯಲ್ಲಿ ಮಾತನಾಡುತ್ತಿದ್ದ ಸಿಂಗ್ ಮೇಲಿನಂತೆ ದುಷ್ಕರ್ಮಿಗಳಿಗೆ ಎಚ್ಚರಿಕೆ ರವಾನಿಸಿದರು.
ಪಾಕಿಸ್ತಾನದ ಹೆಸರು ಹೇಳದೆ ಪ್ರಸ್ತಾಪಿಸಿದ ಅವರು, ಭಯೋತ್ಪಾದನಾ ಗುಂಪುಗಳು ಪ್ರೋತ್ಸಾಹ ಮತ್ತು ನೆಲೆಯನ್ನು ಪಡೆದುಕೊಳ್ಳುತ್ತಿವೆ; ಭಾರತ ವಿರೋಧಿ ಚಟುವಟಿಕೆಗಳು ಯಥಾವತ್ತಾಗಿ ಮುಂದುವರಿದಿವೆ ಎಂದರು.
ಭಯೋತ್ಪಾದನೆಯನ್ನು ಮಟ್ಟ ಹಾಕಲು ನಾವು ಸಾಕಷ್ಟು ಸಾಮರ್ಥ್ಯ ಹೊಂದಿದ್ದು, ಅವರಿಗಿಂತ ಒಂದು ಹೆಜ್ಜೆ ಮುಂದೆ ನಾವಿರುತ್ತೇವೆ ಎನ್ನುವುದನ್ನು ನಾವು ಖಚಿಪಡಿಸುತ್ತೇವೆ. ನಮ್ಮ ಸಾಮರ್ಥ್ಯವನ್ನು ನೋಡಿಯೇ ಅವರು ತೊಲಗಬೇಕು ಎಂದರು.
ದೇಶದಿಂದ ಪ್ರಾಯೋಜಿತವಾಗುವ ಹಿಂಸಾಚಾರವನ್ನು ಖಂಡಿಸಿದ ಪ್ರಧಾನಿ, ವಿವಾದಗಳನ್ನು ಬಗೆಹರಿಸಲು ಏಕಪಕ್ಷೀಯವಾಗಿ ಭದ್ರತಾ ಪಡೆಗಳನ್ನು ಬಳಸುವುದನ್ನು ಭಾರತ ವಿರೋಧಿಸುತ್ತದೆ; ಅಂತಾರಾಷ್ಟ್ರೀಯ ಭಯೋತ್ಪಾದನೆ ಬಗ್ಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ಭಾರತ ಬೆಂಬಲಿಸುತ್ತದೆ ಎಂದು ನಿಲುವು ಸ್ಪಷ್ಟಪಡಿಸಿದರು.
ರಕ್ಷಣಾ ಸಲಕರಣೆ ಬಗ್ಗೆ ಪ್ರಬಲ ವಾದ ಮಂಡಿಸಿದ ಪ್ರಧಾನ ಮಂತ್ರಿ ಸಿಂಗ್, ಯಾವುದೇ ದೇಶಕ್ಕೆ ಸೇರಿದ್ದವರು ಆಗಿರದ ದುಷ್ಕರ್ಮಿಗಳಿಂದ ನಮ್ಮ ರಕ್ಷಣಾ ವಲಯಕ್ಕೆ ಬೆದರಿಕೆಗಳು ಬಂದಾಗ, ಅವುಗಳನ್ನು ಎದುರಿಸಲು ಅಗತ್ಯವಾದ ಸಿದ್ಧತೆಗಳನ್ನು ನಾವು ನಡೆಸಬೇಕಾಗಿದೆ; ನಮ್ಮ ರಕ್ಷಣಾ ವ್ಯವಸ್ಥೆಯನ್ನು ಆಧುನಿಕೀಕರಣಗೊಳಿಸಬೇಕಾಗಿದೆ. ನಮ್ಮ ದೇಶದ ರಕ್ಷಣೆಗೆ ರೂಢಿಗತವಲ್ಲದ ಮತ್ತು ನೂತನ ಬೆದರಿಕೆಗಳು ಬಂದಾಗ ಇದು ಅನಿವಾರ್ಯ ಎಂದರು.